ಸೆಪ್ಟೆಂಬರ್‌ನಲ್ಲಿ ರೈತ ಕಲ್ಯಾಣೋತ್ಸವ 1008 ಅನ್ನದಾತರ ಮಕ್ಕಳ ವಿವಾಹ

1000890765.jpg
Published on

ದಾವಣಗೆರೆ: ಕರ್ನಾಟಕ ರಾಜ್ಯ ರೈತೋದಯ ಹಸಿರುಸೇನೆ ವತಿಯಿಂದ ದಾವಣಗೆರೆಯಲ್ಲಿ ಸೆಪ್ಟೆಂಬರ್‌ನಲ್ಲಿ ರೈತ ಕಲ್ಯಾಣೋತ್ಸವ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದು ಹಸಿರುಸೇನೆ ಅಧ್ಯಕ್ಷ ಬಿ.ಟಿ. ಚಂದ್ರಶೇಖರ ಭೋವಿ ತಿಳಿಸಿದರು.

ದೇಶಕ್ಕೆ ಅನ್ನ ಕೊಡುವ ರೈತರು ಸಂಕಷ್ಟದಲ್ಲಿದ್ದಾರೆ. ಅವರ ಮಕ್ಕಳಿಗೆ ಹೆಣ್ಣು ಕೊಡಲು ಹಿಂಜರಿಕೆ ಇದೆ. ಹೀಗಾಗಿ ಸಮಾವೇಶದ ಮೂಲಕ 1008 ಬಡ ರೈತರ ಸಾಮೂಹಿಕ ಮದುವೆ ಮಾಡುವ ಉದ್ದೇಶವಿದೆ. ವಧುವರರಿಗೆ ತಾಳಿ, ವಸ್ತ್ರ ಹಾಗೂ ಆಹಾರ ಸಾಮಗ್ರಿ ನೀಡಲಾಗುವುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಈಗಾಗಲೆ ರಾಜ್ಯವ್ಯಾಪಿ 396 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ರೈತರ ಮಕ್ಕಳಿಗೆ ಆದ್ಯತೆ ಇದೆ. ಬಡವರಿಗೂ ಆನಂತರದ ಅವಕಾಶ ಕಲ್ಪಿಸಲಾಗುವುದು. ಆಸಕ್ತರು ಮೊ.ಸಂ. 7795638999 ಇಲ್ಲಿಗೆ ಸಂಪರ್ಕಿಸಬಹುದು ಎಂದು ತಿಳಿಸಿದರು.

ನಮ್ಮ ಈ ಕಾರ್ಯಕ್ರಮವನ್ನು ಪ್ರದರ್ಶಿಸಿ, ರಾಜ್ಯ ಸರ್ಕಾರ ಕೂಡ ಸಾಲಮನ್ನಾ ಅಥವಾ ಇತರೆ ಭಾಗ್ಯಗಳ ಬದಲಾಗಿ ರೈತರ ಮಕ್ಕಳ ಮದುವೆ ಮಾಡಿ, ಅವರ ಕುಟುಂಬಕ್ಕೆ ಮನೆಯನ್ನು ಉಡುಗೊರೆಯಾಗಿ ನೀಡಬೇಕು ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರ ವಿದ್ಯುತ್ ಪರಿವರ್ತಕಕ್ಕೆ 6 ಲಕ್ಷ ಶುಲ್ಕ ಕಟ್ಟಿಸಿಕೊಳ್ಳುತ್ತಿದೆ. ಇದನ್ನು ಕೈಬಿಟ್ಟು ಹಿಂದಿನ ಶುಲ್ಕವನ್ನೇ ಮುಂದುವರಿಸಬೇಕು. ರಾಜ್ಯದಲ್ಲಿ ಪ್ರತ್ಯೇಕವಾಗಿ ರೈತ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಪ್ರತಿ ಗ್ರಾಪಂ ಬಳಿ ರೈತ ಅಭಿವೃದ್ಧಿ ಕೇಂದ್ರ ತೆರೆದು ರೈತರ ಬೆಳೆಯನ್ನು ಸರ್ಕಾರವೇ ಖರೀದಿಸಬೇಕು. ಮಧ್ಯವರ್ತಿ ಹಾವಳಿ ತಪ್ಪಿಸಬೇಕು.

ರೈತರ ಭೂ ಗ್ಯಾರಂಟಿ ಸೇವೆಗಳ ಸುಧಾರಣೆ ಬಾಯಿಮಾತಿಗೆ ಸೀಮಿತವಾಗದೆ ರೈತರ ಜಮೀನಿನ ಪೋಡಿ ಮತ್ತು ಖಾತೆ ಮಾಡಿ ರೈತರಿಗೆ ನೀಡಬೇಕು. ರೈತ ಕುಟುಂಬಕ್ಕೆ ಉದ್ಯೋಗ ಕಲ್ಪಿಸಲು ಜಿಲ್ಲಾವಾರು ಖಾಸಗಿ ಕಂಪೆನಿಗಳನ್ನು ತೆರೆಯಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ದೇವಮ್ಮ, ಉಪಾಧ್ಯಕ್ಷೆ ಸಂಗೀತ ಕಾಬ್ಳೆ, ಜ್ಯೋತಿ, ಭೀಮವ್ವ, ರಾಜ್ಯ ಕಾರ್ಯದರ್ಶಿ ಗೋವಿಂದರಾಜ್, ಸಿದ್ದೇಶ್, ಎಂ. ನಾಗರಾಜನಾಯ್ಕ, ಸಿ. ನಾಗರಾಜ ಇದ್ದರು.

----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net