ಮಳೆಯಿಂದ ಮಾರುಕಟ್ಟೆ ಕೆಸರುಮಯ ವ್ಯಾಪಾರಿಗಳ ಅಯೋಮಯ

1001259310.jpg
Published on

ದಾವಣಗೆರೆ: ನಗರದಲ್ಲಿ ಸಂಜೆ ಮುಕ್ಕಾಲು ತಾಸು ಸುರಿದ ಮಳೆಯಿಂದಾಗಿ ಇಲ್ಲಿನ ಬೀರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಹಾಕಲಾಗಿದ್ದ ತಾತ್ಕಾಲಿಕ ಮಾರುಕಟ್ಟೆ ಅಸ್ತವ್ಯಸ್ಥಕ್ಕೀಡಾಯಿತು.

ಮಹಾತ್ಮ ಗಾಂಧಿ ವೃತ್ತದಲ್ಲಿ ನಡೆಸಲಾಗುತ್ತಿರುವ ಕಾಮಗಾರಿ ಹಿನ್ನೆಲೆಯಲ್ಲಿ ರಸ್ತೆ ಸಂಚಾರಕ್ಕೆ ಅಡಚಣೆ ಆಗಲಿರುವ ಹಿನ್ನಲೆಯಲ್ಲಿ ಪ್ರವಾಸಿ ಮಂದಿರ ರಸ್ತೆಯಲ್ಲಿ ದೀಪಾವಳಿ ಹಬ್ಬದ ಸಾಮಗ್ರಿ ಮಾರಾಟವನ್ನು ನಗರಪಾಲಿಕೆ ತಾತ್ಕಾಲಿಕವಾಗಿ ನಿರ್ಬಂಧಿಸಿತ್ತು.

ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ವ್ಯಾಪಾರಕ್ಕೆ ಸೂಚನೆ ನೀಡಿತ್ತು. ಆದರೆ ಅಲ್ಲಿ ಸಮತಟ್ಟಾದ ನೆಲ, ವಿದ್ಯುತ್ ಮತ್ತೆ ಸೌಕರ್ಯಗಳ ಕೊರತೆ ಹಿನ್ನೆಲೆಯಲ್ಲಿ ವ್ಯಾಪಾರಿಗಳು ಬೆಳಗ್ಗೆಯಿಂದಲೇ ಪರದಾಡಿದರು.

ಸಮಸ್ಯೆ ಪರಿಹಾರಕ್ಕೆ ಜನಪ್ರತಿನಿಧಿಗಳ ಬಳಿ ತೆರಳಲು ಮುಂದಾದರೂ ಪಾಲಿಕೆ ಒತ್ತಡದಿಂದಾಗಿ ಅಲ್ಲಿಯೇ ವ್ಯಾಪಾರ ಮಾಡಲು ನಿರ್ಧರಿಸಿದರು. ಸಂಜೆ ಸುರಿದ ಭಾರಿ ಮಳೆಯಿಂದಾಗಿ ಇಡೀ ಪ್ರದೇಶ ಕೆಸರುಮಯವಾಯಿತು.

ಕೆಲ ವ್ಯಾಪಾರಸ್ಥರು ತಾವು ತಂದಿದ್ದ ಹೂವು ಹಣ್ಣು ಮತ್ತಿತರ ಸಾಮಗ್ರಿಗಳನ್ನು ವಾಹನಗಳಲ್ಲಿ ಸಾಗಿಸಿದರು. ಕೆಲವರು ಬೂದುಗುಂಬಳ, ಕಾಚಿಕಡ್ಡಿ, ಮಣ್ಣಿನ ಹಣತೆ, ಬಾಳೆಕಂದುಗಳನ್ನು ಅಲ್ಲಿಂದ ರವಾನಿಸಲು ಪರದಾಡಿದರು. ಬಹುತೇಕರು ವಹಿವಾಟಿಗಾಗಿ ಪಿಬಿ ರಸ್ತೆ, ಪ್ರವಾಸಿಮಂದಿರ ರಸ್ತೆಯನ್ನೇ ಆಶ್ರಯಿಸಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net