

ದಾವಣಗೆರೆ: ರಾಷ್ಟ್ರೀಯ ಕ್ರೀಡಾ ದಿನಾಚರಣೆ ಅಂಗವಾಗಿ ಹರಿಹರ ತಾಲೂಕಿನ ಕೊಂಡಜ್ಜಿ ಗ್ರಾಮದ ಪೊಲೀಸ್ ಪಬ್ಲಿಕ್ ಶಾಲೆ ಆವರಣದಲ್ಲಿ ಶನಿವಾರ, ಪೊಲೀಸ್ ಇಲಾಖೆ ಹಾಗೂ ಕಾರ್ಗಿಲ್ ಕಂಪನಿ ಸಹಯೋಗದಲ್ಲಿ ಫಿಟ್ ಫಾರ್ ಮ್ಯಾರಥಾನ್ ಹಮ್ಮಿಕೊಳ್ಳಲಾಗಿತ್ತು.
ಮ್ಯಾರಥಾನ್‌ಗೆ ಚಾಲನೆ ನೀಡಿದ ಡಿವೈಎಸ್ಪಿ ಪಿ.ಬಿ. ಪ್ರಕಾಶ್ ಮಾತನಾಡಿ ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವು ಕೂಡ ಮುಖ್ಯವಾಗಿದೆ. ಇಂದಿನ ಮಕ್ಕಳು ಎರಡಕ್ಕೂ ಸಮಾನ ಆದ್ಯತೆ ನೀಡಬೇಕು. ದೈಹಿಕ ಚಟುವಟಿಕೆಗೆ ಮ್ಯಾರಥಾನ್ ಜಾಥಾ ಅನುಕೂಲಕರ ಎಂದು ಹೇಳಿದರು.
ಕಾರ್ಗಿಲ್ ಕಂಪನಿ ಕಾರ್ಯದರ್ಶಿ ವೆಂಕಟೇಶ್ ಮಾತನಾಡಿ ವಿಶ್ವಕ್ಕೆ ಭಾರತವನ್ನು ಪರಿಚಯಿಸಿದ ಹಾಕಿ ಮಾಂತ್ರಿಕ ದ್ಯಾನ್‌ಚಂದ್ ಅವರದು ಮೇರು ವ್ಯಕ್ತಿತ್ವ. ಅವರ ಜೀವನವೇ ಒಂದು ಯಶೋಗಾಥೆ. ಅವರಂತೆ ಮಕ್ಕಳು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂದು ಹೇಳಿದರು.
ಪೊಲೀಸ್ ಪಬ್ಲಿಕ್ ಶಾಲೆಯ ಪ್ರಾಚಾರ್ಯ ಯತೀಶ್ ಆಚಾರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಹರಿಹರ ಗ್ರಾಮಾಂತರ ಠಾಣೆಯ ಪಿಎಸ್‌ಐ ಮಂಜುನಾಥ ಕುಪ್ಪೇಲೂರು, ಪೊಲೀಸ್ ಸಿಬ್ಬಂದಿ ಮಾರುತಿ, ಗಂಗಾಧರ ಹಾಗೂ ಪಾಲಕರು, ವಿದ್ಯಾರ್ಥಿಗಳು ಮತ್ತು ಶಾಲೆಯ ಬೋಧಕ- ಬೋಧಕೇತ ವರ್ಗದವರಿದ್ದರು.
---