ದಾವಣಗೆರೆ ತುಂಬಾ ಕೇಸರಿ ಹವಾ  ಹಿಂದು ಮಹಾಗಣಪತಿ ಶೋಭಾಯಾತ್ರೆಗೆ ಕ್ಷಣಗಣನೆ

pixlr_20241005010725154.jpg
Published on

ದಾವಣಗೆರೆ: ಸುಮಾರು ಮೂರುಕಿಲೋಮೀಟರ್ ಉದ್ದಕ್ಕೂ ಹಬ್ಬಿರುವ ಕೇಸರಿ ಬಂಟಿಂಗ್ಸ್ ಬ್ಯಾನರ್ಗಳು.. ಪಿಬಿ ರಸ್ತೆಯ ವಿದ್ಯುತ್ ಕಂಬಗಳಿಗೂ ಕೇಸರಿ ಬಟ್ಟೆಯ ಚಿತ್ತಾರ,  ಪ್ರಮುಖ ವೃತ್ತಗಳಲ್ಲಿಯೂ ಕೇಸರಿಯದೇ ಹವಾ. ಎಲ್ಲೆಲ್ಲೂ ಶುಭ ಕೋರುವ ಫಲಕಗಳು..

ನಗರದ ಹೈಸ್ಕೂಲ್ ಮೈದಾನದಲ್ಲಿ  ಪ್ರತಿಷ್ಠಾಪಿಸಲಾದ ಹಿಂದು ಮಹಾಗಣಪತಿಯ ವಿಸರ್ಜನೆಯ ಬೃಹತ್ ಶೋಭಾಯಾತ್ರೆಗೆ ಸಜ್ಜಾದ ನಗರದ ಚಿತ್ರಣವಿದು.

ಶನಿವಾರ ಜಾನಪದ ಕಲಾ ತಂಡಗಳ ಮೆರುಗು ಹಾಗೂ ಡಿಜೆಗಳ ಹಾಡುಗಳ ಅಬ್ಬರದ ನಡುವೆ ನಗರದ ರಾಜಬೀದಿಗಳಲ್ಲಿ ವಿನಾಯಕನ ಮೆರವಣಿಗೆ ಸಾಗಲಿದೆ.
ಎವಿಕೆ ಕಾಲೇಜು ರಸ್ತೆ, ಅಂಬೇಡ್ಕರ್ ವೃತ್ತ, ಜಯದೇವ ವೃತ್ತ, ಲಾಯರ್ ರಸ್ತೆ, ಪಿಬಿ ರಸ್ತೆ, ಮಹಾತ್ಮ ಗಾಂಧಿ ವೃತ್ತ, ಕಿತ್ತೂರು ರಾಣಿ ಚನ್ನಮ್ಮ ವೃತ್ತ ಮಾರ್ಗವಾಗಿ ಸಾಗುವ ಶೋಭಾಯಾತ್ರೆಯು ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಕೊನೆಗೊಳ್ಳಲಿದೆ.
ಕೇಸರಿ ರಂಗು: ಶೋಭಾಯಾತ್ರೆ ಮಾರ್ಗದ ರಸ್ತೆಗಳು ಹಾಗೂ ವೃತ್ತಗಳು ಕೇಸರಿ ಬ್ಯಾನರ್, ಬಾವುಟ ಹಾಗೂ ಬಂಟಿಂಗ್ಸ್‌ಗಳಿಂದ ಕೇಸರಿಮಯಗೊಂಡಿದ್ದು, ಜನಾಕರ್ಷಣೆಗೆ ಸಿದ್ಧವಾಗಿದೆ.
ಪಿ.ಬಿ.ರಸ್ತೆ ಮಾರ್ಗದಲ್ಲಿ ಬಸವೇಶ್ವರ, ರೇಣುಕಾಚಾರ್ಯ, ವಾಲ್ಮೀಕಿ, ಕನಕದಾಸರು, ಶಿವಾಜಿ, ಅಂಬೇಡ್ಕರ್ ಮೂರ್ತಿ ಮತ್ತಿತರ 11 ಮಹಾತ್ಮರ ಪ್ರತಿಮೆಗಳು ಸಹ ಅನಾವರಣಗೊಳ್ಳಲಿವೆ.  ಸಂಜೆಯ ವೇಳೆ ಬಾನಂಗಳದಲ್ಲಿ ಪಟಾಕಿಗಳು ಚಿತ್ತಾರ ಮೂಡಿಸಿ ಆಕರ್ಷಿಸಲಿವೆ.
ಐದು ಡಿಜೆಗಳ ಅಬ್ಬರ: 5 ಡಿಜೆಗಳು ಗೀತೆಗಳ ಅಬ್ಬರದೊಂದಿಗೆ ನಗರದಲ್ಲಿ ಸದ್ದು ಮಾಡಲಿವೆ. ಬೆಳಗಾವಿ, ಸೊಲ್ಲಾಪುರ, ಮುಧೋಳ, ಹುಬ್ಬಳ್ಳಿ ಹಾಗೂ ದಾವಣಗೆರೆಯ ಡಿಜೆಗಳು ಬರಲಿವೆ. ಮಹಿಳೆಯರಿಗೆ ಪ್ರತ್ಯೇಕ ಡಿಜೆ ವ್ಯವಸ್ಥೆ ಮಾಡಲಾಗಿದೆ. ಟೈಗರ್ ಪ್ಲಸ್ ಡಿಜೆ ಪ್ರಮುಖ ಆಕರ್ಷಣೆಯಾಗಿದೆ.
ಮಂಗಳವಾದ್ಯ, ನಂದಿಕೋಲು, ಸಮಾಳ, ಡೊಳ್ಳು, ಚಂಡೆವಾದ್ಯ, ಡ್ರಮ್‌ಸೆಟ್, ನಾಸಿಕ್ ಡೋಲು, ಗೆಜ್ಜೆ ಕುಣಿತ ಸೇರಿ ಹಲವು ಕಲಾತಂಡಗಳ ವಾದ್ಯಮೇಳ ಮೆರವಣಿಗೆಗೆ ಮೆರುಗು ನೀಡಲಿವೆ.
ಲಕ್ಷಾಂತರ ಜನ ನಿರೀಕ್ಷೆ: ಶನಿವಾರ ಬೆಳಗ್ಗೆ 10.30ಕ್ಕೆ ಹೈಸ್ಕೂಲ್ ಮೈದಾನದಲ್ಲಿ ಗಣ್ಯರ ಸಮ್ಮುಖದಲ್ಲಿ ಶೋಭಾಯಾತ್ರೆಗೆ ಚಾಲನೆ ನೀಡಲಿದ್ದು, ದಾವಣಗೆರೆ ಸೇರಿ ಶಿವಮೊಗ್ಗ, ಹಾವೇರಿ, ಚಿತ್ರದುರ್ಗ ಮತ್ತಿತರ ಜಿಲ್ಲೆಗಳಿಂದ ಲಕ್ಷಾಂತರ ಜನರು ಸೇರುವ ನಿರೀಕ್ಷೆ ಇದೆ.
ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಜನರಿಗೆ ನಗರದ ಪ್ರಮುಖ ರಸ್ತೆಗಳು ಹಾಗೂ ವೃತ್ತಗಳಲ್ಲಿ ಸಾರ್ವಜನಿಕರಿಂದ ಪ್ರಸಾದ ವ್ಯವಸ್ಥೆ ಸೇರಿ, ಕುಡಿಯುವ ನೀರು, ಮಜ್ಜಿಗೆ ವಿತರಣೆ ನಡೆಯಲಿದೆಯಲ್ಲದೆ, ಖಾಸಗಿ ಹೋಟೆಲ್‌ಗಳು ಸಹ ಉಪಾಹಾರ, ತಂಪು ಪಾನೀಯ, ಐಸ್‌ಕ್ರೀಂಗಳ ಭರ್ಜರಿ ವಹಿವಾಟು ನಡೆಸಲಿವೆ.
ಸಂಚಾರಿ ಮಾರ್ಗ ಬದಲಾವಣೆ: ಹಿಂದು ಮಹಾ ಗಣಪತಿ ವಿಸರ್ಜನೆ ಪ್ರಯುಕ್ತ ಜಿಲ್ಲಾಡಳಿತ ನಗರದ ವಾಹನ ಸಂಚಾರ ಮಾರ್ಗಗಳಲ್ಲಿ ಬದಲಾವಣೆ ಮಾಡಿದ್ದು, ಹರಿಹರ, ಚನ್ನಗಿರಿ, ಸಂತೇಬೆನ್ನೂರು ಹಾಗೂ ಚಿತ್ರದುರ್ಗ ಮಾರ್ಗಗಳಿಂದ ಬರುವ ವಾಹನಗಳಿಗೆ ನಿಗದಿತ ಮಾರ್ಗ ಸೂಚಿಸಿದೆ.
ಮದ್ಯ ಮಾರಾಟ ನಿಷೇಧ: ಕಾನೂನು ಸುವ್ಯವಸ್ಥೆ ಮತ್ತು ಶಾಂತಿ ಕಾಪಾಡುವ ಉದ್ದೇಶದಿಂದ ಶನಿವಾರ ಮಧ್ಯರಾತ್ರಿಯವರೆಗೆ ಮಹಾನಗರ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಿ ಮದ್ಯದಂಗಡಿ ಮುಚ್ಚಲು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಪೊಲೀಸರ ಬಿಗಿ ಭದ್ರತೆ: ಶೋಭಾಯಾತ್ರೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ನಗರಾದ್ಯಂತ ಬಿಗಿ ಭದ್ರತೆ ಕೈಗೊಂಡಿದ್ದು, ಸಿಸಿ ಕ್ಯಾಮರಾಗಳು ಸಹ ನಿಗಾ ವಹಿಸಲಿವೆ.
ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ್, ಮಾಜಿ ಸಚಿವ ಎಸ್.ಎ.ರವೀಂದ್ರನಾಥ್ ಮೊದಲಾದ ನಾಯಕರು ಭಾಗವಹಿಸಲಿದ್ದಾರೆ.
---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net