ಒಳಮೀಸಲು ಜಾರಿಗೆ ಮೀನಮೇಷ  ಸಿಎಂ ವಿರುದ್ಧ ಮಾದಿಗ ಸಭಾ ಆಕ್ರೋಶ

1000469072.jpg
Published on

ದಾವಣಗೆರೆ: ರಾಜಕೀಯವಾಗಿ ಕಷ್ಟಗಳು ಎದುರಾದಾಗಲೆಲ್ಲ ಅಹಿಂದ ವರ್ಗವನ್ನು ಜಪಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ, ತಕ್ಷಣ ಒಳ ಮೀಸಲು ಜಾರಿಗೊಳಿಸುವಂತೆ ದಾವಣಗೆರೆ ಜಿಲ್ಲಾ ಮಾದಿಗ ಜಾಗೃತಿ ಸಮಿತಿ ಒತ್ತಾಯಿಸಿದೆ.
ಈ ಸಂಬಂಧ  ಮಹಾಸಭಾ ರಾಜ್ಯ ಉಪಾಧ್ಯಕ್ಷ ಆಲೂರು ನಿಂಗರಾಜ್ ನೇತೃತ್ವದಲ್ಲಿ ಮಹಾಸಭಾದ ಪದಾಧಿಕಾರಿಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
  ಈ ವೇಳೆ ಮಾತನಾಡಿದ ಆಲೂರು ನಿಂಗರಾಜ್, ಮೂರು ತಿಂಗಳ ಅವಧಿಯಲ್ಲಿ ಹೊಸ ಆಯೋಗ ರಚಿಸಿ ಒಳಮೀಸಲು ಜಾರಿಗೊಳಿಸುವ ಭರವಸೆ ನೀಡುವ ಮೂಲಕ ಸಿಎಂ ಸಮುದಾಯವನ್ನು ದಾರಿ ತಪ್ಪಿಸಲು ಹೊರಟಿದ್ದಾರೆ ಎಂದು ಆಕ್ಷೇಪಿಸಿದರು.
ವಿನಾಕಾರಣ ವಿಳಂಬ ಮಾಡದೆ ಸುಪ್ರೀಂಕೋರ್ಟ್ ಸೂಚನೆ ಅನ್ವಯ ಒಳಮೀಸಲು ಜಾರಿಗೊಳಿಸಿ ಸಾಮಾಜಿಕ ನ್ಯಾಯ ಎತ್ತಿ ಹಿಡಿಯುವಂತೆ ಆಗ್ರಹಿಸಿದರು.
ಕಳೆದ 30 ವರ್ಷಗಳ ಮಾದಿಗ ಸಮಾಜದ ಹೋರಾಟಕ್ಕೆ ಸ್ಪಂದಿಸಿನ 2000-2004ರ ಅವಧಿಯ ಎಸ್.ಎಂ. ಕೃಷ್ಣ ಸರ್ಕಾರ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ರಚಿಸಿತ್ತು. ಆನಂತರ ಡಿ.ವಿ.ಸದಾನಂದ ಗೌಡರು ಈ ವರದಿ ಜಾರಿಗೆ ಪ್ರಯತ್ನಿಸಿದರು.
ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿಯಾದ ವೇಳೆ ಮಾದುಸ್ವಾಮಿ ಆಯೋಗ ರಚಿಸಿ ಅವರಿಂದ ವರದಿ ಪಡೆದು ಮಾದಿಗ ಸಮುದಾಯಕ್ಕೆ ಶೇ. 6, ಛಲವಾದಿ ಸಮಾಜಕ್ಕೆ ಶೇ. 5.5, ಕೊಲಂಬೊ ಜಾತಿಗಳಿಗೆ ಶೇ. 4, ಸಣ್ಣಪುಟ್ಟ ಸಮುದಾಯಗಳಿಗೆ ಶೇ.15 ರಷ್ಟು ಮೀಸಲನ್ನು ನ್ಯಾಯಸಮ್ಮತವಾಗಿ ಹಂಚಿಕೆ ಮಾಡಿದ್ದರು ಎಂದು ಆಲೂರು ನಿಂಗರಾಜ್ ತಿಳಿಸಿದರು.
ಆದರೆ., ಸಿದ್ದರಾಮಯ್ಯ ಒಳ ಮೀಸಲು ಜಾರಿಗೆ ಮೀನ- ಮೇಷ ಎಣಿಸುತ್ತಿದ್ದು ಈಗ ಹೊಸ ಆಯೋಗ ರಚಿಸುವ ಪ್ರಸ್ತಾಪ ಮಾಡಿ  ನಮ್ಮನ್ನು ಮೂರ್ಖರನ್ನಾಗಿ ಮಾಡಲು ಹೊರಟಿದ್ದಾರೆ ಎಂದು ಟೀಕಿಸದರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿದರು. ಮುಖಂಡರಾದ ಎಚ್.ಸಿ ಗುಡ್ಡಪ್ಪ, ಎಂ. ಹಾಲೇಶ್, ಎ. ರವಿ, ಎಂ. ಚಂದ್ರಪ್ಪ, ಜಯಪ್ರಕಾಶ್, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net