ಸದಾಶಿವ ಆಯೋಗ ವರದಿ ಜಾರಿಗೆ ಪಟ್ಟು

Davangere, Madiga Dandora, Sabha,
Published on

ದಾವಣಗೆರೆ: ರಾಜ್ಯ ಸರ್ಕಾರ ಮಾ.19ರೊಳಗಾಗಿ ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಜಾರಿ ಮಾಡಬೇಕು. ಇಲ್ಲವಾದಲ್ಲಿ ಮಾ. 20ರಂದು ಬೆಂಗಳೂರಿನ ಆರ್‌ಟಿ ನಗರದಲ್ಲಿರುವ ಮುಖ್ಯಮಂತ್ರಿ ಮನೆಗೆ ಮುತ್ತಿಗೆ ಹಾಕಲು ಮಾದಿಗ ದಂಡೋರ ಜಿಲ್ಲಾ ಸಮಿತಿ ನಿರ್ಧರಿಸಿದೆ.

ನಗರದ ಶಿವಾನಿ 3 ಹೋಟೆಲ್‌ನಲ್ಲಿ ಸಂಘಟನೆಯ ಕಾರ್ಯಕಾರಿ ಸಮಿತಿ ತುರ್ತು ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಪ್ರತಿಭಟನೆಯಲ್ಲಿ ಜಿಲ್ಲೆಯ ಸಮಾಜದವರು ಭಾಗವಹಿಸಬೇಕೆಂದು ಮನವಿ ಮಾಡಲಾಯಿತು ಎಂದು ಜಿಲ್ಲಾ ಸಮಿತಿ ಅಧ್ಯಕ್ಷ ಎಚ್.ಸಿ. ಗುಡ್ಡಪ್ಪ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಪ. ಜಾತಿಗೆ ಒಳಪಟ್ಟ ಮಾದಿಗ ಹಾಗೂ ಹೊಲೆಯ ಜಾತಿಗಳು ಅತಿ ಹೆಚ್ಚು ಜನಸಂಖ್ಯೆ ಹೊಂದಿದ್ದರೂ ಸಂವಿಧಾನ ಉದ್ಯೋಗ ಮತ್ತು ಶಿಕ್ಷಣ, ರಾಜಕೀಯ, ಆರ್ಥಿಕ ಕ್ಷೇತ್ರದಲ್ಲಿ ತೀರಾ ಹಿಂದುಳಿದಿವೆ. ಜನರ ಸಂಖ್ಯೆಗೆ ಅನುಗುಣವಾಗಿ ಸಾಮಾಜಿಕ ನ್ಯಾಯ ಕಲ್ಪಿಸಲಾಗಿಲ್ಲ ಎಂದು ಹೇಳಿದರು.

ಸಂವಿಧಾನದ ಆಶಯದಂತೆ ಒಳ ಮೀಸಲು ವರ್ಗೀಕರಣಕ್ಕಾಗಿ ಅನೇಕ ವರ್ಷಗಳಿಂದ ಹೋರಾಟ ಮಾಡಲಾಗಿದೆ. ಎ.ಜೆ. ಸದಾಶಿವ ಆಯೋಗವು ಯಾವ ಜಾತಿಗಳಿಗೆ ಮೀಸಲಾತಿಯಲ್ಲಿ ಎಷ್ಟು ಪ್ರಮಾಣ ಕಲಿಸಬೇಕೆಂಬ ಸಮಗ್ರ ವರದಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿ ವರ್ಷಗಳೇ ಕಳೆದರೂ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿಲ್ಲ. ನಮ್ಮ ಮನವಿಗೆ ಸರ್ಕಾರ ಕಿವಿಗೊಟ್ಟಿಲ್ಲ ಎಂದರು.

ಸದಾಶಿವ ಆಯೋಗ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ಹೇಳಿದ್ದ ಬಿಜೆಪಿ ರಾಜ್ಯಾಧ್ಯಕ್ಷ, ಸಿಎಂ ಬಸವರಾಜ ಬೊಮ್ಮಾಯಿ ಸೇರಿ ಅನೇಕರು ಭರವಸೆ ನೀಡಿದ್ದರೂ ಸಮಾಜಕ್ಕೆ ದ್ರೋಹವಾಗಿದೆ. ಬೇಡಿಕೆ ಈಡೇರಿಸದಿದ್ದರೆ ಪ್ರತಿಭಟನೆ ಅನಿವಾರ್ಯ ಎಂದು ಸರ್ಕಾರಕ್ಕೆ ಸಭೆ ಮೂಲಕ ಎಚ್ಚರಿಕೆ ನೀಡಲಾಗುತ್ತಿದೆ ಎಂದರು.

ಸಮಿತಿಯ ಹಿರಿಯ ಉಪಾಧ್ಯಕ್ಷ ಬಿ.ಎಚ್. ಚಿದಾನಂದಪ್ಪ ಮಾತನಾಡಿ, ಎಲ್ಲಾ ತಾಲೂಕು ಮತ್ತು ಹೋಬಳಿ ಕೇಂದ್ರಗಳಿಗೆ ಜಿಲ್ಲಾ ಸಮಿತಿ ಪದಾಧಿಕಾರಿಗಳು ಭೇಟಿ ನೀಡಿ ಕರಪತ್ರ ಹಂಚುವುದರೊಂದಿಗೆ ಕಾರ್ಯಕ್ರಮದಲ್ಲಿ, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಜಾಗೃತಿ ಮೂಡಿಸಬೇಕೆಂದು ತಿಳಿಸಿದರು.

ಸಭೆಯಲ್ಲಿ ಮಳಲ್ಕೆರೆ ಶೇಖರಪ್ಪ, ಶಾಮನೂರು ದಾನಪ್ಪ, ಬಿ. ಮಲ್ಲೇಶಪ್ಪ, ಎಚ್. ಹಾಲೇಶ, ನಾಗರಾಜ, ಎಂ. ಶಿವಕುಮಾರ್, ಎಚ್. ಬಸವರಾಜ, ಈಚಗಟ್ಟ ಕೆಂಚಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net