ಪರಿಶುದ್ಧತೆಯೇ ಸಮಾಜ ಸಂಘಟನೆಗೆ ಬಲ    ಮೂಡಬಿದರೆಯ ಮುಕ್ತಾನಂದ ಸ್ವಾಮೀಜಿ ಹೇಳಿಕೆ

1000337422.jpg
Published on

ದಾವಣಗೆರೆ: ಸಮುದ್ರದ ಅಲೆಗಳಂತೆಯೇ, ಕಸದಂತಿರುವ ವ್ಯವಸ್ಥೆಯನ್ನು ಬೇರ್ಪಡಿಸುವ ಕೆಲಸವನ್ನು ಮಡಿವಾಳ ಸಮಾಜ ಮಾಡಿದಾಗ ಸಂಘಟನೆ ಬಲವಾಗಲಿದೆ ಎಂದು ಮೂಡಬಿದರೆಯ ಶ್ರೀ ಕ್ಷೇತ್ರದ ಮುಕ್ತಾನಂದ ಸ್ವಾಮೀಜಿ ಹೇಳಿದರು.
ಮಾಚಿದೇವ ಸಮುದಾಯ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶ್ರೀ ಮಡಿವಾಳ ಮಾಚಿದೇವರ ಶ್ರಾವಣ ಮಾಸದ ಸ್ಮರಣೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಮುದ್ರ ಕಳಂಕಿತವಾಗಿಲ್ಲ. ವಿಭಿನ್ನ ಬಣ್ಣಗಳುಳ್ಳ ನದಿಗಳ ನೀರು ಶುದ್ಧಿಗೊಂಡು ಸಮುದ್ರವನ್ನು ಸೇರುತ್ತವೆ. ಕಸ ದೂರವಾಗಲಿದೆ. ಅಂತಹ ನೈರ್ಮಲ್ಯ ಉಳಿಸಿಕೊಂಡಾಗ ಸಂಘಟನೆಗೆ ಶಕ್ತಿ ಬರಲಿದೆ ಎಂದು ಮಾರ್ಮಿಕವಾಗಿ ಹೇಳಿದರು.
ಮಡಿವಾಳ ಸಮಾಜದ ಸಮಸ್ಯೆಗಳ ಬಗ್ಗೆ ಅನೇಕ ವರ್ಷದಿಂದ ಚರ್ಚೆ ನಡೆಯುತ್ತಿದ್ದರೂ ನಿರ್ದಿಷ್ಟ ನ್ಯಾಯ ಈವರೆಗೆ ಸಿಕ್ಕಿಲ್ಲ. ಅಂದು ವಚನಕ್ಕಾಗಿ ಮಾಚಿದೇವರು ಬಿಜ್ಜಳ ಅರಸನ ವಿರುದ್ಧ ಹೋರಾಡಿದರು. ಇಂದು ಸಮಾಜ ಸಂಘಟನೆಗಾಗಿ ಹೋರಾಟ ಮಾಡುವ ಅನಿವಾರ್ಯತೆ ಇದೆ ಎಂದು ತಿಳಿಸಿದರು.
ಆತ್ಮವಿಶ್ವಾಸದ ಕೊರತೆಯಿಂದಾಗಿ ಸಮಾಜ ಹಿಂದುಳಿದಿದೆ. ಅಶಕ್ತರಲ್ಲಿ ಆತ್ಮಬಲ ತುಂಬಬೇಕಿದೆ. ಸಮಾಜದ ಮಕ್ಕಳು ಸಂಸ್ಕಾರವಂತರಾಗಬೇಕು. ಸಮಾಜದಿಂದ ಬೆಳೆದವರು ಕೊಡುಗೆ ನೀಡಬೇಕು ಎಂದೂ ಆಶಿಸಿದರು.
ಶಿವಶರಣರ ವಚನ ಅಧ್ಯಯನದಿಂದ ಮನಸ್ಸನ್ನು ಶುಭ್ರಗೊಳಿಸುವ ವ್ಯವಸ್ಥೆ ಕಲ್ಪಿಸಿದ ಮಡಿವಾಳ ಮಾಚಿದೇವರು ಸಾಗರದೊಳಗಿನ ರತ್ನವಾಗಿದ್ದಾರೆ. 12ನೇ ಶತಮಾನದಲ್ಲಿ ಅಸ್ಪ್ಪಶ್ಯತೆ, ರಾಜಕೀಯ ವ್ಯವಸ್ಥೆ, ಅಂಧಕಾರದ ವಿರುದ್ಧ ಹೋರಾಡಿ ಶರಣರಲ್ಲೇ ಧ್ರುವತಾರೆಯಾಗಿ ಮಿನುಗುತ್ತಿದ್ದಾರೆ ಎಂದೂ ಬಣ್ಣಿಸಿದರು.
ಚಿತ್ರದುರ್ಗದ ಬಸವ ಮಾಚಿದೇವ ಸ್ವಾಮೀಜಿ ಮಾತನಾಡಿ ಹಸಿವು, ಅವಮಾನಕ್ಕೆ ಒಳಗಾದವರು ಹೋರಾಟದಿಂದಲೇ ಉತ್ತಮ ಸ್ಥಾನ ಕಂಡಿದ್ದಾರೆ. ಹೋರಾಟ ಮನೋಭಾವದ ಅಭಾವದಿಂದಾಗಿ ಮಡಿವಾಳ ಸಮಾಜ ಸಂಘಟನೆಯಲ್ಲಿ ಹಿಂದಿದೆ. ಸಮಾಜದವರು ಕಾಳಜಿಯಿಂದ ಕೆಲಸ ಮಾಡಬೇಕು ಎಂದರು.
ಮಡಿವಾಳ ಮಾಚಿದೇವರು ನಮ್ಮ ಕುಲತಿಲಕರು. ಹಣದ ಜತೆಗೆ ಜ್ಞಾನ ಬಲ ನೀಡಿದ ಕಾರಣಕ್ಕೆ ಸದಾ ಪ್ರಾತಃಸ್ಮರಣೀಯರು. ಅವರ ವಚನಗಳಲ್ಲಿ ಜೀವನಾನುಭವ, ಮಾರ್ಗದರ್ಶನ ಇವೆ. ಅವನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾಗಬೇಕು ಎಂದು ಆಶಿಸಿದರು
ಬಸವಾದಿ ಶರಣರು ಕಾಯಕ ಮತ್ತು ದಾಸೋಹ, ಧ್ಯಾನ, ಶಿವಯೋಗಕ್ಕೆ ಒತ್ತು ನೀಡಿದರು. ಸಂಸ್ಕಾರದೊಂದಿಗೆ ಬದುಕುವ ಕೆಲಸವನ್ನು ಮುಖ್ಯವಾಗಿ ಮಡಿವಾಳ ಮಾಚಿದೇವರು ಮಾಡಿದರು ಎಂದರಲ್ಲದೆ ಮೀಸಲಾತಿ ಬಂದರೆ ಸಾಕಷ್ಟು ಲಾಭ ಇದೆ. ಸರ್ಕಾರ ಸಹ ಸಣ್ಣ ಸಮುದಾಯದತ್ತ ಹೆಚ್ಚು ಗಮನ ನೀಡಬೇಕು ಎಂದು ತಿಳಿಸಿದರು.
ಜಿಲ್ಲಾ ಸಂಘದ ಕಾರ್ಯಾಧ್ಯಕ್ಷ ಎಚ್.ಜಿ.ಉಮೇಶ್ ಮಾತನಾಡಿ ಮಡಿವಾಳ ಸಮಾಜದ ಮಕ್ಕಳು ಉನ್ನತ ಶಿಕ್ಷಣದೊಂದಿಗೆ ಪ್ರಮುಖ ಹುದ್ದೆಗೇರಲು ಸಮಾಜವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಬೇಕೆಂಬ ಹೋರಾಟ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಪಾಲಿಕೆ ವಿಪಕ್ಷ ನಾಯಕ ಕೆ. ಪ್ರಸನ್ನ ಕುಮಾರ್ ಮಾತನಾಡಿ ವಚನ ಸಂರಕ್ಷಣೆ ಮಾಡಿದ ಮಾಚಿದೇವರು ಶರಣರಲ್ಲೇ ಶ್ರೇಷ್ಠರು. ದಾವಣಗೆರೆಯ ಎಂಸಿಸಿ ಬಿ ಬ್ಲಾಕ್‌ನ ಐದನೇ ಕ್ರಾಸ್‌ನಿಂದ ಪಿಬಿ ರಸ್ತೆ ಮಾರ್ಗಕ್ಕೆ ಅವರ ಹೆಸರಿಡುವ ಬಗ್ಗೆ ಪಾಲಿಕೆ ಕೌನ್ಸಿಲ್‌ನಲ್ಲಿ ತೀರ್ಮಾನವಾಗಿ ಸರ್ಕಾರದಿಂದಲೂ ಪತ್ರ ಬಂದಿದೆ. ಸಮಾಜದವರು ಧೈರ್ಯವಾಗಿ ರಸ್ತೆ ಫಲಕ ಅನಾವರಣ ಮಾಡಬಹುದು ಎಂದರು.
ದೂಡಾ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ ಮಾತನಾಡಿ, ಸಮಾಜದ ಮುಂದಿನ ಕಾರ್ಯಕ್ರಮ ದೇವರಾಜ ಅರಸು ಬಡಾವಣೆಯ ನೂತನ ಭವನದಲ್ಲಿ ನಡೆಯಲಿ ಎಂದರು. ದೂಡಾದಿಂದ ಸಮಾಜಕ್ಕೆ ಅಗತ್ಯ ಬೇಡಿಕೆಗಳಿಗೆ ಸ್ಪಂದಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತ ಎಸ್. ಮಹಾಂತೇಶ್, ಪಾಲಿಕೆ ಸದಸ್ಯ ಎ.ನಾಗರಾಜ್, ದೂಡಾ ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್,  ಸಂಘದ ಜಿಲ್ಲಾಧ್ಯಕ್ಷ ಎಂ. ನಾಗೇಂದ್ರಪ್ಪ, ಗೌರವಾಧ್ಯಕ್ಷ ಎಂ.ಎನ್. ಬಸವರಾಜಪ್ಪ, ಮುಖಂಡರಾದ
 ಭೀಮಣ್ಣ, ರೇವಣಸಿದ್ದಪ್ಪ, ಕೆ.ಎಚ್.ಗುಡ್ಡಪ್ಪ, ಎಂ.ಆರ್. ಮಹಾಂತೇಶ್, ಸುರೇಶ್ ಕೋಗುಂಡೆ, ಅಂಜಿನಪ್ಪ ಪೂಜಾರ್,  ಮಂಗಳಮ್ಮ, ವನಜಾಕ್ಷಮ್ಮ, ನಾಗಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net