ಸಂಸ್ಕೃತಿಗೆ ಧಕ್ಕೆ ತರದಿರಲಿ ಅನುವಾದ

1000933366.jpg
Published on
ದಾವಣಗೆರೆ: ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನ ನಾಲ್ಕನೇ ರಾಜ್ಯ ಅಧಿವೇಶನದಲ್ಲಿ ಶನಿವಾರ ಆಯೋಜಿಸಿದ್ದ, ‘ಸಾಹಿತ್ಯದಲ್ಲಿ ಸ್ವತ್ವದ ಅಭಿವ್ಯಕ್ತಿ’ ಕುರಿತ ಗೋಷ್ಠಿ ನಾನಾ ಚರ್ಚೆಗೆ ವಿಸ್ತರಿಸಿಕೊಂಡಿತು. ಅನುವಾದದ ಆತುರದಲ್ಲಿ ಲೋಪಗಳಾಗುತ್ತಿವೆ. ಒಂದು ದೇಶದ ಸಂಸ್ಕೃತಿಯನ್ನು ತುಚ್ಛೀಕರಿಸುವ ಅನಾಹುತ ನಡೆಯುತ್ತಿವೆ. ಹೀಗಾಗಿ ಅನುವಾದ ಕುರಿತಂತೆ ಅಖಿಲ ಭಾರತ ಸಾಹಿತ್ಯ ಪರಿಷದ್ ವಿಚಾರ ಸಂಕಿರಣ ಆಯೋಜಿಸಬೇಕು ಎಂದು ಪತ್ರಕರ್ತ ಎಸ್.ಸೂರ್ಯಪ್ರಕಾಶ್ ಪಂಡಿತ್ ಸಲಹೆ ನೀಡಿದರು. ಕೃತಿಯ ವಿಚಾರವನ್ನು ದಾಟಿಸಲು ಅಥವಾ ಅದರ ಭಾವ ದಾಟಿಸಲು ಅನುವಾದ ಮಾಡಬೇಕೆ ಎಂಬ ಪ್ರಶ್ನೆಗೆ ಅನುವಾದಕರು ಉತ್ತರ ಕಂಡುಕೊಂಡರೆ ಮುಂದಿನ ದಾರಿ ಸಲೀಸಾಗಲಿದೆ. ಆದರೆ ಅನುವಾದ, ಸಂಸ್ಕೃತಿ ಒಡೆಯುವ ಕೆಲಸ ಮಾಡಬಾರದು ಎಂದು ಹೇಳಿದರು. ಲೇಖಕ ಸುಧಾಕರ್ ಮಾತನಾಡಿ ಒಗ್ಗೂಡಿಸುವಿಕೆಯೇ ಭಾರತೀಯ ಸಾಹಿತ್ಯದ ಉದ್ದೇಶವಾಗಿದೆ. ಅನುವಾದಕರ ಮನಸ್ಸಿನಲ್ಲಿ ಸ್ವತಃ ಭಾರತೀಯತೆ ಇರಬೇಕೇ ಹೊರತು ಅಭಾರತೀಯತೆಯಲ್ಲ. ಅನುವಾದವು ಧರ್ಮವನ್ನು ಸಮನ್ವಯಗೊಳಿಸಬೇಕೆ ಹೊರತಾಗಿ ವಿಘಟನೆ ಮಾಡಬಾರದು. ಅನುವಾದವು ತಾಯಿ ಹಾಲಂತಿರಬೇಕು, ನಾಯಿ ಎದೆಯ ಭಾರವಾಗಬಾರದು ಎಂದು ತಿಳಿಸಿದರು. ಸಂವಿಧಾನದ ಕಲಂ 28ರ ಪ್ರಕಾರ ರಿಲಿಜಿಯನ್ ವಿಚಾರಗಳನ್ನು ಮಕ್ಕಳಿಗೆ ಓದಿಸುವಂತಿಲ್ಲ. ಆದರೆ 8,9 ಹಾಗೂ 10ನೇ ತರಗತಿಯ ಸಮಾಜ ವಿಜ್ಞಾನ ಪುಸ್ತಕದಲ್ಲಿನ ‘ವೈಜ್ಞಾನಿಕ ಧರ್ಮಗಳು’ ಎಂಬ ಅಧ್ಯಾಯದಡಿ ಇಸ್ಲಾಂ ಧರ್ಮವನ್ನು ಪ್ರತ್ಯೇಕವಾಗಿ ವೈಜ್ಞಾನಿಕ ಧರ್ಮ ಎಂಬುದಾಗಿ ಬೋಧಿಸಲಾಗುತ್ತಿದೆ. ಅನುವಾದಕರ ಕೀಳರಿಮೆಯಿಂದಾಗಿ, ಹಿಂದು ಧರ್ಮದಲ್ಲಿ ಮೌಢ್ಯಗಳಿವೆ ಎಂಬುದಾಗಿ ಮತ್ತೊಂದು ಅಧ್ಯಾಯದಲ್ಲಿ ತಪ್ಪಾಗಿ ಬಿಂಬಿಸಲಾಗಿದೆ ಎಂದೂ ಪ್ರಸ್ತಾಪಿಸಿದರು. ಮಾತೃಭಾಷೆಯಲ್ಲಿ ನಾನು ಕಾದಂಬರಿ ಬರೆದಾಗ ಅದಕ್ಕೆ ‘ಸ್ವ’ತ್ವದ ಬಲ ಖಂಡಿತವಾಗಿಯೂ ಸಿಕ್ಕಿದೆ. ಆರಂಭದಲ್ಲಿ ಮಂಗಳೂರು ಭಾಷೆ ಬಳಸಿದ್ದೆ. ನೂರು ವರ್ಷದ ಹಿಂದಿನ ಕಥಾನಕವಾದ್ದರಿಂದ ಗ್ರಾಂಥಿಕ ಭಾಷೆ ಬದಲಾಗಿ ನಮ್ಮ ಧಾರವಾಡದ ಭಾಷೆಯಲ್ಲೇ ಬರೆದದ್ದರಿಂದ ತೂಕ ಹೆಚ್ಚಿತು ಎಂದು ಧಾರವಾಡದ ಸಾಹಿತಿ ದೀಪಾ ಜೋಷಿ ಸಮರ್ಥಿಸಿಕೊಂಡರು. ಕಲಿಕೆಯ ಅಥವಾ ಪ್ರೀತಿಯ ಭಾಷೆಯಲ್ಲಿ ಅಭಿವೃಕ್ತಿಪಡಿಸಿದರೆ ಅದರಲ್ಲಿ ಪರಿಪೂರ್ಣತೆ ಸಾಧಿಸಬಹುದು ಎಂದು ಬೆಳಗಾವಿಯ ವಿಮರ್ಶಕಿ ನೀತಾರಾವ್ ಪ್ರತಿಪಾದಿಸಿದರು. ವ್ಯಕ್ತಿ, ಭಾಷೆ ಹಾಗೂ ಪ್ರದೇಶವಾರು ಸಾಂಸ್ಕೃತಿಕ ಭಿನ್ನತೆ ಕಾರಣಕ್ಕೆ ಕೆಲವು ಸಾಹಿತಿಗಳ ಪುಸ್ತಕ ಹಿಡಿಸಲೂ ಬಹುದು, ಇಷ್ಟ ಪಡದಿರಲೂ ಬಹುದು ಎಂದು ಸೂರ್ಯಪ್ರಕಾಶ್ ವಾದಿಸಿದರು. 1935ರವರೆಗೂ ಆನಂದವೇ ನಮ್ಮ ಪರಮಮೌಲ್ಯವಾಗಿತ್ತು. ನಾಟಕ, ಇತರೆ ಕಲೆಗಳು ನೀಡುತ್ತಿದ್ದ ಆನಂದ ನಮ್ಮ ಬೆಂಚ್ ಮಾರ್ಕ್ ಆಗಿದ್ದವು. ಆದರ ಆನಂತರದ ಬೌದ್ಧಿಕ ಕಸರತ್ತಿಗೆ ಇಳಿದಿದ್ದೇವೆ. ರಸ ಸ್ವಾದನೆಗೆ ಪೂರಕವಾಗಿ ಆನಂದ ನೀಡುವುದನ್ನು ಸ್ವೀಕರಿಸಬೇಕು. ಪಾಶ್ಚಾತ್ಯ ಸಾಹಿತ್ಯದ ಅನುಕರಣೆ ಸಕಾರಾತ್ಮಕವಾಗಿರಬೇಕು ಎಂದು ಬೆಂಗಳೂರಿನ ಸಾಹಿತಿ ಸಹನಾ ವಿಜಯಕುಮಾರ್ ಹೇಳಿದರು. ಭಾರತೀಯ ಸಂಸ್ಕೃತಿಯನ್ನು ವಾಸ್ತವದಿಂದ ನೋಡಬೇಕಿದೆ. ಹೆಚ್ಚಿದ ವೃದ್ಧಾಶ್ರಮಗಳ ಬಗ್ಗೆ ಸಿನಿಮಾ ಮಾಡಿದರೆ ಸಂಸ್ಕೃತಿಗೆ ವಿರುದ್ಧವಾದೀತೆ? ಆರ್‌ಸಿಬಿ ವಿಜಯೋತ್ಸವಕ್ಕೆ ಪುಟ್ಟ ಮಕ್ಕಳನ್ನು ಕರೆತಂದದ್ದನ್ನು ಸಂಸ್ಕೃತಿ ಎನ್ನಬೇಕೆ? ಭಾರತೀಯ ಸಂಸ್ಕೃತಿಗೆ ಪ್ರಶ್ನೆಗಳನ್ನು ಎದುರಿಸುವ ತಾಕತ್ತಿದೆ. ಇದನ್ನು ಮಕ್ಕಳಲ್ಲಿ ಕಲಿಸಬೇಕು ಎಂದು ಸೂರ್ಯಪ್ರಕಾಶ್ ಹೇಳಿದರು. ಮಾದಕ ವಸ್ತು, ಕೌಟುಂಬಿಕ ಸಮಸ್ಯೆ ವಸ್ತುವಿನ ಬದಲಾಗಿ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಗಾಗಿ ಮೇರಿ ಕೋಮ್‌ನಂಥ ಸಾಧಕರ ಸಿನಿಮಾಗಳನ್ನು ಮಾಡುವವರು ಹೆಚ್ಚಿದ್ದಾರೆ ಎಂದು ಸುಧಾಕರ್ ವಿಷಾದಿಸಿದರು. ಸಾಹಿತಿ ರೋಹಿತ್ ಚಕ್ರತೀರ್ಥ ಗೋಷ್ಠಿಯ ಸಮನ್ವಯಕಾರರಾಗಿ ಕಾರ್ಯ ನಿರ್ವಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net