ಸಮಾಜಕ್ಕೆ ಬೇಕು ಪ್ರಬುದ್ಧ ಕಾವ್ಯ   ಡಾ.ಗಂಗಾಧರ ಅತ್ರೇಯ ಆಶಯ

1000263943.jpg
Published on

ದಾವಣಗೆರೆ: ಇಂದಿನ ಸಮಾಜಕ್ಕೆ ಪ್ರಬುದ್ಧ ಮತ್ತು ಗಟ್ಟಿತನದ ಕಾವ್ಯ ರಚನೆಯ ಅಗತ್ಯವಿದೆ ಎಂದು ಸಾಗರದ ಶಿಕ್ಷಣ ಚಿಂತಕ ಡಾ. ಗಂಗಾಧರ ವ.ಮ. ಅತ್ರೇಯ ಆಶಿಸಿದರು.
ರಾಜ್ಯ ಕರುನಾಡ ಹಣತೆ ಕವಿ ಬಳಗ ಮತ್ತು ಸಾಂಸ್ಕತಿಕ ಕಲಾ ತಂಡ ಚಿತ್ರದುರ್ಗ ಹಾಗೂ ದಾವಣಗೆರೆ ಸಮಿತಿ ಸಹಯೋಗದಲ್ಲಿ ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬೆಣ್ಣೆನಗರಿ ಸಾಹಿತ್ಯ ಸಂಭ್ರಮ- ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಷಟ್ಪದಿ, ರಗಳೆೆ ಹಾಗೂ ಕಂದ ಪದ್ಯ ಮೊದಲಾದ ಚೌಕಟ್ಟಿನ ಮಾದರಿಯ ಕಾವ್ಯ ರಚನೆಗೆ ಈಗಿನ ತಲೆಮಾರಿನ ಕವಿಗಳು ಪ್ರಯತ್ನ ಮಾಡಬೇಕು. ಕಾವ್ಯದಲ್ಲಿ ಗಟ್ಟಿತನ ಬರಬೇಕು. ಕೇವಲ ಭಾವನಾತ್ಮಕ ವಿಚಾರಗಳಿಂದ ಕನ್ನಡದ ಬೆಳವಣಿಗೆ ಆಗದು. ನಮ್ಮ ಕಾರ್ಯಕ್ಷೇತ್ರಗಳಿಗೆ ಸಂಬಂಧಿಸಿದಂತೆ ಕಾವ್ಯ, ಕತೆ ಮೊದಲಾದ ಸಾಹಿತ್ಯವನ್ನು ಜನರಿಗೆ ಉಣಬಡಿಸಬೇಕು ಎಂದರು.
ಕೇಂದ್ರ ಸರ್ಕಾರ ನಡೆಸುವ ಕೆಲವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಭಾಷೆ ನಿಗದಿಪಡಿಸಿದ್ದರೂ ಅಭ್ಯರ್ಥಿಗಳಲ್ಲಿ ತಾರ್ಕಿಕ ಶಕ್ತಿಯೂ ಅಗತ್ಯವಿದೆ. ಇಂಗ್ಲಿಷ್ ಒಂದಿದ್ದರೆ ಎಲ್ಲವನ್ನೂ ಪಡೆಯಬಹುದೆಂಬ ಮನೋಭಾವ ಪಾಲಕರಲ್ಲಿ ಬೇಡ. ಆಂಗ್ಲ ಭಾಷೆ ಬೇಕು. ಆದರೆ ಅದೇ ಉಸಿರಲ್ಲ ಎಂಬ ಭಾವನೆ ಬೆಳೆದಲ್ಲಿ ಅಂದಿನಿಂದಲೇ ಕನ್ನಡ ಚಿಗುರೊಡೆಯಲಿದೆ ಎಂದು ಹೇಳಿದರು.
ಆಶಯ ನುಡಿಯಾಡಿದ ಸಂಘದ ರಾಜ್ಯ ಉಪಾಧ್ಯಕ್ಷ ಡಾ.ಎಸ್. ಎಚ್. ಶಫೀವುಲ್ಲಾ, ಕೇಂದ್ರ ಸರ್ಕಾರ ಬಲವಂತವಾಗಿ ಹಿಂದಿಯನ್ನು ಹೇರುತ್ತಿದೆ. 2500 ವರ್ಷಗಳ ಇತಿಹಾಸವುಳ್ಳ ಕನ್ನಡಕ್ಕಿಂತಲೂ 700 ವರ್ಷಗಳಷ್ಟು ಇತಿಹಾಸದ ಹಿಂದಿ ಭಾಷೆಗೆ ಪ್ರಾಧಾನ್ಯ ನೀಡಲಾಗುತ್ತಿದೆ. ನಾವು ಕನ್ನಡವನ್ನು ಸಮರ್ಥವಾಗಿ ಬಳಸುತ್ತಿಲ್ಲ. ಅದರ ಜಾಗದಲ್ಲಿ ಇಂಗ್ಲಿಷ್, ಹಿಂದಿಯನ್ನು ಬಳಸುವ ಕಾರಣಕ್ಕೆ ಕನ್ನಡ ತುಳಿತಕ್ಕೆ ಒಳಗಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಇಂದು ಸರ್ಕಾರಿ ಕಚೇರಿ, ಸಂಸ್ಥೆಗಳಲ್ಲೂ ಕನ್ನಡ ಉಳಿದಿಲ್ಲ. ಬ್ಯಾಂಕ್‌ಗಳಲ್ಲೂ ಕನ್ನಡ ಮಾತಾಡುವವರಿಲ್ಲ. ರಾಜಧಾನಿ ಬೆಂಗಳೂರಲ್ಲೂ ಶೇ.70ರಷ್ಟು ಮಂದಿ ಅನ್ಯ ಭಾಷಿಕರಿದ್ದಾರೆ. ಕರ್ನಾಟಕದಲ್ಲಿದ್ದು ಕನ್ನಡ ಬಾರದವರು ಅದನ್ನು ಕಲಿಯಬೇಕಿದೆ. ಕನ್ನಡ ಅನ್ನದ ಭಾಷೆಯಾಗಬೇಕಿದೆ. ರಾಜ್ಯ ಸರ್ಕಾರ ಇದಕ್ಕೆ ಒತ್ತು ನೀಡಬೇಕು. ಕನ್ನಡಿಗರನ್ನು ಬದುಕಿಸಿದರೆ ಕನ್ನಡ ಉಳಿಯಲಿದೆ ಎಂದು ಹೇಳಿದರು.
ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಮಾತನಾಡಿ ಸಾಹಿತ್ಯ ಕೃತಿಗಳು ರಚನೆಕಾರರಿಗೆ ವೈಯಕ್ತಿಕ ತೃಪ್ತಿ ನೀಡಿದರೆ ಸಾಲದು. ಸಾರ್ವತ್ರಿಕ ಹಾಗೂ ಜನಮಾನಸದಲ್ಲಿ ಉಳಿಯುವಂತೆ ಆದಲ್ಲಿ ಸಾಹಿತ್ಯ ಲೋಕದಲ್ಲಿ ಸ್ಥಿರವಾಗಿ ಇರಲಿದೆ. ಸಾಹಿತ್ಯ ಕೃತಿಗಳು ಮಾನವನ ಪರಿವರ್ತನೆಗೆ ಕಾರಣವಾಗಲಿವೆ ಎಂದರು.
ಒಂದು ಕಾಲದಲ್ಲಿ ಧಾರವಾಡ ಸಾಹಿತ್ಯ ದಿಗ್ಗಜರ ಜಿಲ್ಲೆಯಾಗಿತ್ತು. ಈಗ ಮಧ್ಯಕರ್ನಾಟಕ ಜಿಲ್ಲೆ ದಾವಣಗೆರೆ ಸಾಹಿತ್ಯ ಕ್ಷೇತ್ರದಲ್ಲಿ  ಹೆಸರು ಮಾಡಿದೆ. ನನ್ನ ಅವಧಿಯಲ್ಲಿ ಕುವೆಂಪು ಭವನದಲ್ಲಿ ಇದುವರೆಗೆ 80 ಕೃತಿಗಳು ಬಿಡುಗಡೆಯಾಗಿವೆ ಎಂದು ಹೇಳಿಕೊಂಡರು.
ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಸಹಾಯಕ ಪ್ರಾಧ್ಯಾಪಕಿ ಡಾ.ಶ್ರೀದೇವಿ ಸೂರ್ಯ ಸುವರ್ಣಖಂಡಿ ಅವರ ‘ಶ್ರಾವ್ಯ’ ಹಾಗೂ ಸಂಘದ ಜಿಲ್ಲಾಧ್ಯಕ್ಷ ಎಸ್.ವಿ.ಶಾಂತಕುಮಾರ್ ಪಲ್ಲಾಗಟ್ಟೆ ಅವರ ‘ಕನಸು ಚಿಗುರೊಡೆಯಿತು’ ಕವನ ಸಂಕಲನಗಳು ಬಿಡುಗಡೆಯಾದವು.
ಹುಬ್ಬಳ್ಳಿಯ ಸಾಹಿತಿ ಶಾಂತಾ ಬಸವರಾಜ್ ಮಾತನಾಡಿ ಕವಿಗಳಲ್ಲಿ ನಾನು, ನನ್ನಿಂದಲೇ ಎಂಬ ಪ್ರತಿಷ್ಠೆ ಇರಬಾರದು. ನಾವು ಎಂಬ ಮನೋಭಾವ ಬಂದಲ್ಲಿ ಸಮಾಜಕ್ಕೂ ಅನುಕೂಲ ಎಂದು ಸೂಕ್ಷ್ಮವಾಗಿ ಹೇಳಿದರು.
ಶಿವಮೊಗ್ಗದ ಸಾಹಿತಿ ನಂದಾ ಪ್ರೇಮಕುಮಾರ್, ಹಿರಿಯ ಸಾಹಿತಿ ಎನ್.ಟಿ.ಯರ‌್ರಿಸ್ವಾಮಿ, ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಕನಕ ಪ್ರೀತೀಶ್, ಸುಜಾತಮ್ಮ ರಾಜು, ರೇಖಾ ಶಿವರಾಮಭಟ್, ಕಾರ್ತಿಕ್ ಆಚಾರ್ಯ, ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಗೌಡರ್, ಡಾ.ಎಸ್. ವೀರೇಶಕುಮಾರ್, ಅಭಿಮಾನ ಫೌಂಡೇಷನ್ ಸದಸ್ಯ ನಿಶ್ಚಯಕುಮಾರ್, ಎಂ.ರಾಜಪ್ಪ ವ್ಯಾಸಗೊಂಡನಹಳ್ಳಿ ಇತರರಿದ್ದರು. ಮಕ್ಕಳಿಂದ ಮನರಂಜನೆ ಕಾರ್ಯಕ್ರಮ ನಡೆದವು. ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net