

ದಾವಣಗೆರೆ: ದೇವಸ್ಥಾನಗಳು ನಮಗೆ ಮನಃಶಾಂತಿ ನೀಡಿದರೆ ಗ್ರಂಥಾಲಯಗಳು ಅಜ್ಞಾನ, ಅಂಧಕಾರ ತೊಡೆದು ಶಿಕ್ಷಣವಂತರನ್ನಾಗಿ ಮಾಡುತ್ತದೆ ಎಂದು ಶಾಸಕ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಹೇಳಿದರು.
ಜಗಳೂರು ತಾಲೂಕಿನ ತಮಲೇಹಳ್ಳಿ ಗ್ರಾಮದಲ್ಲಿ ನೂತನ ಗ್ರಂಥಾಲಯ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಪರಿಶಿಷ್ಟ ಜಾತಿ, ಪಂಗಡ ಸಮುದಾಯವುಳ್ಳ ದೊಡ್ಡ ಗ್ರಾಮ ತಮಲೇಹಳ್ಳಿ. ತಾಲೂಕಿನಲ್ಲಿ ಅತಿ ಹೆಚ್ಚು ಸರ್ಕಾರಿ ನೌಕರರನ್ನು ಹೊಂದಿದ ಗ್ರಾಮ ಎಂಬ ಹೆಗ್ಗಳಿಕೆ ಹೊಂದಿರುವುದು ಸಂತಸದ ವಿಚಾರ ಎಂದರು.
ಪೊಲೀಸ್ ಅಧಿಕಾರಿ ಶಿವಕುಮಾರ್ ಬೇರೆ ಊರಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಹುಟ್ಟೂರನ್ನು ಮರೆಯದೆ ಇಲ್ಲಿನ ಬಡಮಕ್ಕಳು ಶಿಕ್ಷಣವಂತರಾಗಬೇಕು ಎನ್ನುವ ಉದ್ದೇಶದಿಂದ ವೈಯಕ್ತಿಕವಾಗಿ ಗ್ರಂಥಾಲಯ ನಿರ್ಮಿಸುತ್ತಿರುವುದು ಶ್ಲಾಘನೀಯ. ಸರ್ಕಾರದ ಅನುದಾನದಡಿ 5 ಲಕ್ಷ ರೂ. ವೈಯಕ್ತಿಕವಾಗಿ 1 ಲಕ್ಷ ರೂ. ನೀಡುವುದಾಗಿ ಶಾಸಕರು ಭರವಸೆ ನೀಡಿದರು.
ವಿದ್ಯಾರ್ಥಿಗಳು ಪುಸ್ತಕ ಹಿಡಿದು ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿದರೆ ಉನ್ನತ ಮಟ್ಟಕ್ಕೆ ತಲುಪಲು ಸಾಧ್ಯವಾಗಲಿದೆ. ಮುಂದೊಂದು ದಿನ ನೌಕರರ ಸಂಖ್ಯೆ ಮತ್ತಷ್ಟು ಹೆಚ್ಚಾಗುವಂತೆ ವಿದ್ಯಾಭ್ಯಾಸ ಮಾಡಿ. ನೌಕರಿ ಸಂಪಾದಿಸಿ ಎಂದು ಸಲಹೆ ನೀಡಿದರು.
ಮಾಜಿ ಶಾಸಕ ಎಚ್.ಪಿ. ರಾಜೇಶ್ ಮಾತನಾಡಿ, ತಮಲೇಹಳ್ಳಿ ಗ್ರಾಮಕ್ಕೆ ಹೊಸ ಗಾಳಿ ಬೀಸುತ್ತಿದೆ. ಸರಸ್ವತಿ ದೇವಸ್ಥಾನಕ್ಕೆ ಒಂದು ಅಡಿಗಲ್ಲು ಹಾಕಲಾಗಿದೆ. ಗ್ರಂಥಾಲಯ, ದೇವಸ್ಥಾನದಂತೆ ಪೂಜಿಸುವಂತಾಗಲಿ. ಶಾಸಕನಾಗಿದ್ದ ವೇಳೆ ಸಾಕಷ್ಟು ಅನುದಾನ ನೀಡಿ ಗ್ರಾಮ ಅಭಿವೃದ್ಧಿ ಪಡಿಸಿದ್ದೇನೆ. ಗ್ರಂಥಾಲಯಕ್ಕೆ ವೈಯಕ್ತಿಕವಾಗಿ 1ಲಕ್ಷ ರೂ. ಕೊಡುತ್ತೇನೆ ಎಂದರು.
ಈ ಗ್ರಾಮ ಮೂಲದ ನೌಕರರು ಸರ್ಕಾರಿ ನೌಕರರ ಸಂಘ ಕಟ್ಟಿಕೊಂಡು ವಿದ್ಯಾರ್ಥಿಗಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿ ಇನ್ನೂ ಉನ್ನತ ಮಟ್ಟಕ್ಕೆ ನೌಕರಿ ತೆಗೆದುಕೊಳ್ಳಲು ನೆರವಾಗಬೇಕು. ಪರಿಶ್ರಮದಿಂದ ಸಂಘವನ್ನು ಕಟ್ಟಿ ಹಲವು ವಿದ್ಯಾರ್ಥಿಗಳಿಗೆ ನವೋದಯ ಮುರಾರ್ಜಿ ಹಾಗೂ ವಿವಿಧ ತರಬೇತಿ ಕೊಡಿಸುತ್ತಿರುವುದು ಪುಣ್ಯದ ಕೆಲಸ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಯಚೂರು ಜಿಲ್ಲಾ ಅಪರ ಪೊಲೀಸ್ ಅಧೀಕ್ಷಕ ಶಿವಕುಮಾರ್ ಮಾತನಾಡಿ, ಲೋಕದಲ್ಲಿ ಎಷ್ಟೇ ಆಸ್ತಿ, ಅಂತಸ್ತು ಗಳಿಸಿದರೂ ಲಾಭ ವಿಲ್ಲ. ಆದರೆ, ಮಕ್ಕಳಿಗೆ ಶಿಕ್ಷಣ ಕೊಡಿಸಿದರೆ ತಲೆಮಾರುಗಳವರೆಗೂ ವಿದ್ಯಾವಂತರನ್ನಾಗಿ ಮಾಡುವ ಶಕ್ತಿ ಇದೆ. ಗ್ರಾಮೀಣ ಮಕ್ಕಳಲ್ಲಿ ಪ್ರತಿಭೆಗಳಿವೆ. ಸಹಕಾರ ನೀಡಿದರೆ ಒಳ್ಳೆಯ ಅಧಿಕಾರಿಗಳಾಗಿ ಹೊರ ಬರಬಹುದು ಎಂದರು.
ಗ್ರಾಮದಲ್ಲಿ ನೌಕರ ಸಂಘವನ್ನು ಕಟ್ಟಿ ಒಂದು ವರ್ಷ ಪೂರೈಸಿದ್ದು, ಸುಸಜ್ಜಿತ ಕಟ್ಟಡವಾಗುತ್ತಿದೆ. ಒಂದೇ ವರ್ಷದಲ್ಲಿ ಎಂಟು ವಿದ್ಯಾರ್ಥಿಗಳು ಮುರಾರ್ಜಿ ಶಾಲೆಗೆ ಹೋಗಿದ್ದಾರೆ. ಇತರೆ ವಿದ್ಯಾರ್ಥಿಗಳಿಗೆ ಮುರಾರ್ಜಿ, ಕಿತ್ತೂರು ರಾಣಿ ಚನ್ನಮ್ಮ, ಸೈನಿಕ ಶಾಲೆಯ ಮಕ್ಕಳಿಗೆ ವಿವಿಧ ತರಬೇತಿ ಕೊಡಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ನೌಕರರ ಸಂಘದ ಅಧ್ಯಕ್ಷರಾದ ನಾಗೇಂದ್ರಪ್ಪ, ಡಾ. ಪ್ರಕಾಶ್, ಮಾಜಿ ಸದಸ್ಯ ತಿಮ್ಮಣ್ಣ, ಹನುಮಂತಪ್ಪ, ರಮೇಶ್, ಶ್ರೀನಿವಾಸ್, ಬಸವರಾಜ್, ಓಬಣ್ಣ, ಹನುಮಂತಪ್ಪ, ಪರಮೇಶ್ ಇತರರಿದ್ದರು.