

ದಾವಣಗೆರೆ: ನಗರದ ಪಿ.ಜೆ. ಬಡಾವಣೆಯ ಪೊಲೀಸ್ ವಸತಿಗೃಹ ಬಳಿಯ ‘ಪೊಲೀಸ್ ಚಿಣ್ಣರ ಅಂಗಳ’ ಶಾಲೆಯಲ್ಲಿ ಪುಟ್ಟ ಮಕ್ಕಳಿಗೆ ಸೋಮವಾರ ಅಕ್ಷರಾಭ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ವಿದ್ಯಾಧಿದೇವತೆ ಸರಸ್ವತಿ ಪೂಜೆಯೊಂದಿಗೆ ಅಕ್ಷರಾಭ್ಯಾಸದ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಲಾಯಿತು. ಪುಟ್ಟ ಮಕ್ಕಳೊಂದಿಗೆ ಕುಳಿತ ತಂದೆ-ತಾಯಂದಿರು ತಟ್ಟೆಯ ಮೇಲೆ ಹರಡಿದ ಅಕ್ಷತೆಯಲ್ಲಿ ಅರಿಶಿಣದ ಕೊಂಬಿನಿಂದ ತಮ್ಮ ಮಕ್ಕಳ ಕೈಹಿಡಿದು ಸ್ವಸ್ತಿಕ್ ಚಿಹ್ನೆ ಬರೆಸಿದರು.
ಆನಂತರ ಸ್ಲೇಟ್ ಮೇಲೆ ಬಳಪದಿಂದ ಓಂ ಮತ್ತು ಶ್ರೀಕಾರ ಬರೆಸಿದ ನಂತರ ಅಕ್ಷರಾಭ್ಯಾಸ ಮಾಡಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರೂ ಮಗುವೊಂದರ ಕೈಹಿಡಿದು ಅಕ್ಷರ ಬರೆಸಿದ್ದು ವಿಶೇಷವಾಗಿತ್ತು. ಶಿವಕುಮಾರ್ ಭಟ್ ಧಾರ್ಮಿಕ ವಿಧಿ ನಡೆಸಿಕೊಟ್ಟರು.
ಈ ವೇಳೆ ಉಮಾ ಪ್ರಶಾಂತ್ ಮಾತನಾಡಿ, ಕರ್ನಾಟಕ ಪೊಲೀಸ್ ವೆಲ್‌ಫೇರ್ ಆ್ಯಂಡ್ ಎಜ್ಯುಕೇಷನ್ ಟ್ರಸ್ಟ್‌ನಡಿ ಶಾಲೆಯಲ್ಲಿ ಮಕ್ಕಳಿಗೆ ಗುಣಮಟ್ಟದ ಹಾಗೂ ಮೌಲ್ಯಾಧಾರಿತ ಶಿಕ್ಷಣ ನೀಡಲಾಗುವುದು ಎಂದು ತಿಳಿಸಿದರು.
ಚಿಕ್ಕಂದಿನಲ್ಲೇ ಮಕ್ಕಳಿಗೆ ಸಂಸ್ಕಾರ, ಉತ್ತಮ ಮೌಲ್ಯಗಳನ್ನು ಬಿತ್ತಬೇಕು. ಪ್ರತಿ ಮಗುವಿನಲ್ಲೂ ಇರುವ ಪ್ರತಿಭೆ ಹೊರತರುವುದೇ ನಿಜವಾದ ಶಿಕ್ಷಣ. ಪೊಲೀಸರ ಮಕ್ಕಳು ಉತ್ತಮ ವ್ಯಾಸಂಗ ಮಾಡುತ್ತಿದ್ದಾರೆ ಎಂದು ಪ್ರಶಂಸಿಸಿದರು.
‘ಪೊಲೀಸ್ ಚಿಣ್ಣರ ಅಂಗಳ’ ಶಾಲೆಯಲ್ಲಿ ಪ್ಲೇಹೋಮ್, ಎಲ್‌ಕೆಜಿ ಹಾಗೂ ಯುಕೆಜಿ ತರಗತಿ ಆರಂಭಿಸಲಾಗಿದೆ. 70:30 ಆಧಾರದಲ್ಲಿ ಪೊಲೀಸರು ಮತ್ತು ಸಾರ್ವಜನಿಕರ ಮಕ್ಕಳಿಗೆ ಅವಕಾಶ ಕಲ್ಪಿಸಲಾಗಿದೆ. ಶಾಲೆಗೆ 45 ಮಕ್ಕಳು ಸೇರ್ಪಡೆಯಾಗಿದ್ದಾರೆ ಎಂದು ಪೊಲೀಸ್ ಪಬ್ಲಿಕ್ ಸ್ಕೂಲ್ ಪ್ರಾಚಾರ್ಯ ಎಚ್.ವಿ. ಯತೀಶ್ ಮಾಹಿತಿ ನೀಡಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ವಿಜಯಕುಮಾರ್ ಎಂ. ಸಂತೋಷ್, ಮಂಜುನಾಥ್, ಡಿವೈಎಸ್‌ಪಿ ಮಲ್ಲೇಶ್ ದೊಡ್ಮನಿ, ನಿವೃತ್ತ ಪೊಲೀಸ್ ಅಧಿಕಾರಿ ರವಿನಾರಾಯಣ್ ಇತರರು ಇದ್ದರು. ಆರ್‌ಪಿಐ ಎನ್.ಸೋಮಶೇಖರ್ ಸ್ವಾಗತಿಸಿದರು.
----