

ದಾವಣಗೆರೆ: ನಿರಂತರ ನೋವು ಸಹಿಸಿಯೂ ಸುಮ್ಮನಿರುವ ಜನರು ಸಮಾಜದಲ್ಲಿದ್ದಾರೆ. ಅಂಥವರನ್ನು ಹುಡುಕಿ ಸರ್ಕಾರದ ಯೋಜನೆಗಳನ್ನು ತಲುಪಿಸುವ ಅನಿವಾರ್ಯತೆ ಇದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿಗಳೂ ಆದ ರವಿ ವಿ.ಹೊಸಮನಿ ಆಶಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕಾನೂನು ಸಲಹಾ ಕೇಂದ್ರಗಳಿಗೆ ಚಾಲನೆ ನೀಡಿ ಮಾತನಾಡಿದರು.
ಸರ್ಕಾರದ ಪ್ರಯತ್ನದ ನಡುವೆಯೂ ಕೆಲವರು ಸೌಲಭ್ಯಗಳ ವಿಚಾರದಲ್ಲಿ ಸ್ಪಂದಿಸುವುದಿಲ್ಲ. ಪ್ರತಿ ಮನೆಯಲ್ಲೂ ಎಲ್ಲರನ್ನೂ ಸಮಾನ ಸ್ಥಿತಿಯಲ್ಲಿ ಪಾಲನೆ ಮಾಡಲಾಗದ ಸಹಜ ಸ್ಥಿತಿ ಇದೆ. ಎಲ್ಲ ನಾಗರಿಕರಿಗೂ ತಮಗಿರುವ ಹಕ್ಕುಗಳ ಬಗ್ಗೆ ಮಾಹಿತಿ ಅರಿವಿದ್ದಲ್ಲಿ ಬೇಕೆ ಬೇಡವೆ ಎಂಬುದನ್ನು ನಿರ್ಧರಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.
ಯಾವುದೇ ಸರ್ಕಾರಿ ಯೋಜನೆಗಳ ಲಾಭ ಅರ್ಹರಿಗೆ ಸಿಗದೇ ಉಳ್ಳವರ ಪಾಲಾದರೆ ವ್ಯತ್ಯಾಸ ದ್ವಿಗುಣ ಆಗಬಹುದು. ಸೌಲಭ್ಯ ಹೊಂದಿದವರು ಮತ್ತು ವಂಚಿತರ ನಡುವಿನ ವ್ಯತ್ಯಾಸ ಹೆಚ್ಚಬಹುದು. ಇದು ಆಗಕೂಡದು ಎಂದು ಸೂಕ್ಷ್ಮವಾಗಿ ಹೇಳಿದರು.
ನ್ಯಾಯಾಲಯದ ಮೂಲಕವಲ್ಲದೆ ಜನರ ಬಳಿಗೇ ತೆರಳಿ ಹಕ್ಕುಗಳನ್ನು ಕಲ್ಪಿಸುವುದು ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ ಉದ್ದೇಶವಾಗಿದೆ. ಕೋರ್ಟ್‌ಗೆ ಬರಲಾಗದ ದೈಹಿಕ ಕ್ಷಮತೆ ಇಲ್ಲದವರು, ಹಕ್ಕು ವಂಚಿತರಿಗೆ ಪ್ರಾಧಿಕಾರ ನೆರವಾಗಲಿದೆ ಎಂದರು.
ಭಾರತದ ಸಂವಿಧಾನ ಮತ್ತು ಅದರ ಪೀಠಿಕೆ ಹತ್ತಿಯ ಹೂವಿನಂತೆ ಸುಂದರವಾಗಿವೆ. ಕಲ್ಯಾಣ ರಾಜ್ಯದ ಉದ್ದೇಶದಡಿ ಸಂವಿಧಾನವು ನಮಗೆ ಮೂಲಭೂತ ಹಕ್ಕುಗಳನ್ನಲ್ಲದೇ ನಿರ್ದೇಶಕ ತತ್ವಗಳನ್ನೂ ನೀಡಿದೆ. ಸಂವಿಧಾನ ಕಲ್ಪಿಸಿದ ಪ್ರಜಾಪ್ರಭುತ್ವದ ಆಶಯದಡಿ ಎಲ್ಲರೂ ಭಾಗಿಧಾರಿಗಳಾಗಬೇಕು ಎಂದು ಹೇಳಿದರು.
ತಳಮಟ್ಟದಿಂದಲೇ ಎಲ್ಲರಲ್ಲೂ ಕಾನೂನು-ನ್ಯಾಯದ ಬಗ್ಗೆ ಜಾಗೃತಿ, ಮಾಹಿತಿ ಮತ್ತು ಪಾರದರ್ಶಕತೆ ಮೂಡಿಸಬೇಕಿದೆ. ಇದಕ್ಕಾಗಿ ಶಾಲಾ ಮಕ್ಕಳು, ಜನರು ಕಾನೂನು ಸಲಹಾ ಕೇಂದ್ರಗಳ ನೆರವು ಪಡೆಯಬಹುದು. ಸಹಾಯವಾಣಿ ನಂ.15100 ಇಲ್ಲಿಗೆ ಕರೆಮಾಡಿ ತಮ್ಮ ಮನೆ, ಪ್ರದೇಶವಾರು ಸಮಸ್ಯೆಗಳ ಬಗ್ಗೆ ತಿಳಿಸಿ ಸಹಾಯ ಪಡೆಯಬಹುದು. ಅಗತ್ಯವಿದ್ದವರಿಗೆ ಇದನ್ನು ತಲುಪಿಸಲು ನ್ಯಾಯಾಂಗದ ಜತೆಗೆ ರಾಜಕೀಯ ವ್ಯವಸ್ಥೆಯೂ ಸ್ಪಂದಿಸಬೇಕು ಎಂದರು.
ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಮಾತನಾಡಿ, ಜಿಪಂ ಹಾಗೂ ಜಿಲ್ಲಾ ಪೊಲೀಸ್ ಸಂಯೋಜನೆಯೊಂದಿಗೆ ಶಾಲೆಗಳಲ್ಲಿ ಪ್ಲಾಸ್ಟಿಕ್ ಜಾಗೃತಿ ಮೂಡಿಸಿ ಪರಿಸರ ರಕ್ಷಣೆಗೆ ಗಮನ ನೀಡಲಾಗಿದೆ. ರಸ್ತೆ ಸುರಕ್ಷತೆ ಅರಿವು ಮೂಡಿಸಿದ ಪರಿಣಾಮ ಹಿಂದಿನ ವರ್ಷಕ್ಕಿಂತ ಶೇ.30ರಷ್ಟು ರಸ್ತೆ ಅಪಘಾತ ಕಡಿಮೆಯಾಗಿದೆ. ಅಪಘಾತ ಪರಿಹಾರ ಕೊಡಿಸಲಾಗುತ್ತಿದೆ. ಭೂ ವ್ಯಾಜ್ಯ ಪ್ರಕರಣ ವಿಲೇ ಮಾಡಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ಶಾಲೆ ಇನ್ನಿತರೆ ಹಂತದಲ್ಲಿ ತೆರೆಯಲಾದ ಕಾನೂನು ಸಲಹಾ ಕೇಂದ್ರಗಳ ಮೂಲಕ ನಿರ್ದೇಶಿತ ಕಾರ್ಯಗಳನ್ನು ನಿರ್ವಹಿಸುವ ಜತೆಗೆ ಇನ್ನಷ್ಟು ಉತ್ತಮ ಕೆಲಸ ಮಾಡಲಿದ್ದೇವೆ ಎಂದೂ ಹೇಳಿದರು.
ಎಸ್ಪಿ ಉಮಾ ಪ್ರಶಾಂತ್ ಮಾತನಾಡಿ ಜಿಲ್ಲೆಯಲ್ಲಿ ಸೈಬರ್ ಪ್ರಕರಣಗಳು ಹೆಚ್ಚುತ್ತಿವೆ. ವಿದ್ಯಾವಂತರೇ ಇದಕ್ಕೆ ಬಲಿಯಾಗುತ್ತಿದ್ದಾರೆ. ಕಾನೂನು ಸಲಹಾ ಕೇಂದ್ರಗಳ ಮೂಲಕ ಇಲಾಖೆಗಳ ಸಮನ್ವಯದೊಂದಿಗೆ ಕೆಲಸ ನಿರ್ವಹಿಸಿದರೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್ ಮಾತನಾಡಿ ಕೆಲವರ ಬ್ಲಾೃಕ್‌ಮೇಲ್‌ಗೆ ಒಳಗಾಗುತ್ತಿರುವ ಅಧಿಕಾರಿ-ಸಿಬ್ಬಂದಿಗೂ ಕಾನೂನು ಸಲಹಾ ಕೇಂದ್ರಗಳು ನೆರವಿಗೆ ಬರಲಿವೆ ಎಂದು ತಿಳಿಸಿದರು.
ಜಿಲ್ಲಾಡಳಿತ, ಜಿಪಂ, ಜಿಲ್ಲಾ ವಕೀಲರ ಸಂಘ, ಶಾಲಾ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಕೀಲರ ಸಂಘದ ಜಿಲ್ಲಾಧ್ಯಕ್ಷ ಟಿ.ಆರ್. ಗುರುಬಸವರಾಜ್, ಡಿಎಚ್‌ಒ ಡಾ.ಎಸ್. ಷಣ್ಮುಖಪ್ಪ ಇತರರಿದ್ದರು. ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶೆ ಡಿ.ಕೆ. ವೇಲಾ ಸ್ವಾಗತಿಸಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ.ಕರೆಣ್ಣವರ ವಂದಿಸಿದರು.
---