

ದಾವಣಗೆರೆ: ದೇಶದ ಜನಸಂಖ್ಯೆಯ ಅರ್ಧದಷ್ಟಿರುವ ಮಕ್ಕಳ ಸಂಖ್ಯೆಗೆ ಸರ್ಕಾರ ಹೆಚ್ಚಿನ ಅನುದಾನ ಮೀಸಲಿಡುತ್ತಿಲ್ಲ ಎಂದು ಚಾಮರಾಜನಗರ ದೀನಬಂಧು ಟ್ರಸ್ಟ್‌ನ ಅಧ್ಯಕ್ಷ ಜಿ.ಎಸ್. ಜಯದೇವ ವಿಷಾದಿಸಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ, ಜೆ.ಎಚ್. ಪಟೇಲ್ ಫೌಂಡೇಷನ್, ಕರುಣಾ ಜೀವ ಕಲ್ಯಾಣ ಟ್ರಸ್ಟ್ ಸಹಯೋಗದಲ್ಲಿ ನಗರದ ಸಿದ್ಧ್ದಗಂಗಾ ವಿದ್ಯಾಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ಶಿಕ್ಷಣ ಮತ್ತು ಮಕ್ಕಳ ಮನೋವಿಕಾಸ’ ವಿಷಯ ಕುರಿತು ಉಪನ್ಯಾಸ ನೀಡಿದರು.
ವಿಶ್ವದಲ್ಲೇ ಅತಿ ಹೆಚ್ಚು ಮಕ್ಕಳು (400 ದಶಲಕ್ಷ) ಭಾರತದಲ್ಲಿದ್ದಾರೆ. ಆದರೆ, ಸರ್ಕಾರಗಳು ಬಜೆಟ್‌ನಲ್ಲಿ ಶೇ.4ರಷ್ಟನ್ನು ಮಾತ್ರ ಮೀಸಲಿಡುತ್ತಿರುವುದು ಏನಕ್ಕೂ ಸಾಲದು ಎಂದು ಹೇಳಿದರು.
ಸಾಮಾಜಿಕ ಸಮಸ್ಯೆಗಳನ್ನು ಬಗೆಹರಿಸುವ ಜತೆಗೆ ಮೌಲ್ಯಗಳನ್ನು ಕಲಿಸದ ಶಿಕ್ಷಣ ವ್ಯವಸ್ಥೆ, ತಾನೇ ಸಮಸ್ಯೆಯಲ್ಲಿದೆ. ಅನುಕಂಪ, ಕರುಣೆ, ಸಹಾನುಭೂತಿ, ಸಂವೇದನೆಯಂತಹ ಗುಣಗಳನ್ನು ಬೆಳೆಸದ ಶಿಕ್ಷಣ ವ್ಯವಸ್ಥೆ ಸಮಾಜಕ್ಕೆ ಕೆಡುಕನ್ನೇ ತರುತ್ತದೆ. ಇಂತಹ ಶಿಕ್ಷಣ ಇರುವುದಕ್ಕಿಂತ, ಇಲ್ಲದಿರುವುದೇ ವಾಸಿ ಎಂದು ತಿಳಿಸಿದರು.
ವೈದ್ಯರಿಂದ ಇಂಜಿನಿಯರ್‌ವರೆಗೆ, ಪೊಲೀಸರಿಂದ ಹಿಡಿದು ನರ್ಸ್‌ಗಳವರೆಗೆ ಎಲ್ಲರೂ ಶಿಸ್ತು-ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಸಮಾಜಕ್ಕೆ ಬಹುದೊಡ್ಡ ಕೊಡುಗೆ ನೀಡಿದಂತಾಗಲಿದೆ. ಆಗ ಸಮಾಜದ ಸಮಸ್ಯೆಗಳು ಬಗೆಹರಿಯಲಿವೆ. ಇಂತಹ ಗುಣಗಳನ್ನು ಶಿಕ್ಷಣ ಸಂಸ್ಥೆಗಳು ಬೆಳೆಸಬೇಕು ಎಂದು ಹೇಳಿದರು.
ಮೊದಲ ಸ್ಥಾನ ಗಳಿಸಲಿಕ್ಕೆ ಸಾಕಷ್ಟು ಶಿಕ್ಷಣ ಸಂಸ್ಥೆಗಳು ಆದ್ಯತೆ ನೀಡುತ್ತಿವೆ. ಇದರಿಂದಾಗಿ ಸ್ಪರ್ಧೆಗೆ ಬಿದ್ದ ಶಾಲೆಯ ಸಹಪಾಠಿಗಳೇ ಸಹಶತ್ರುಗಳಾಗುತ್ತಿದ್ದಾರೆ. ಎಲ್ಲರನ್ನೂ ಹಿಮ್ಮೆಟ್ಟಿಸಿ ಮುಂದೆ ಬರಬೇಕೆಂಬ ಮನೋಭಾವವೇ ಸಮಸ್ಯೆಗೆ ಮೂಲ ಕಾರಣ. ಸ್ಪರ್ಧೆ ಹುಟ್ಟು ಹಾಕಿ, ಹೆೆಚ್ಚು ಅಂಕ ಪಡೆಯುವ ವಿದ್ಯಾರ್ಥಿಗಳನ್ನು ವೈಭವೀಕರಿಸುವ ಶಿಕ್ಷಣ ಸಂಸ್ಥೆಗಳು ಮಾನದಂಡ ಸರಿಯಲ್ಲ ಎಂದರು.
ಮಕ್ಕಳನ್ನು ಸ್ಪರ್ಧೆಗೆ ಒಡ್ಡುವ ಬದಲು ಅವರಲ್ಲಿನ ಪ್ರತಿಭೆಗಳನ್ನು ಹುಡುಕಿ ಪ್ರೋತ್ಸಾಹಿಸಬೇಕು. ಅವರು ದೊಡ್ಡವರಾದ ಮೇಲೆ ಎಂಥದೇ ಹುದ್ದೆಗೆ ಹೋದರೂ ಶಿಸ್ತು, ಪ್ರಾಮಾಣಿಕತೆ ಹಾಗೂ ಕರ್ತವ್ಯ ನಿಷ್ಠೆಯಿಂದ ಕೆಲಸ ಮಾಡಬೇಕು. ಆಗ ಮಾತ್ರ ಸಮಾಜ ಬೆಳೆಯುತ್ತದೆ ಎಂದವರು ತಿಳಿಸಿದರು.
ಮಕ್ಕಳನ್ನು ವೈದ್ಯ ಇಲ್ಲವೇ ಇಂಜಿನಿಯರ್ ಹುದ್ದೆಗಳಿಗೆ ಸೀಮಿತಗೊಳಿಸಬಾರದು. ಬಡಿಗೆಯವರಿಂದ ಹಿಡಿದು ಕಲಾವಿದರವರೆಗೆ ಯಾವುದೇ ಕೆಲಸದಲ್ಲಿ ಆಸಕ್ತಿ ತೋರಿದರೂ ಉತ್ತೇಜಿಸಬೇಕು. ಯಾವ ಕೆಲಸವೂ ಕೀಳಲ್ಲ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿದ್ಧಗಂಗಾ ವಿದ್ಯಾಸಂಸ್ಥೆ ಅಧ್ಯಕ್ಷೆ ಜಸ್ಟಿನ್ ಡಿಸೋಜ, ಜಿ.ಎಸ್. ಜಯದೇವ ಅವರ ತಂದೆ ಖ್ಯಾತ ಸಾಹಿತಿ ಜಿ.ಎಸ್. ಶಿವರುದ್ರಪ್ಪ ಅವರು ನಮ್ಮ ಶಾಲೆಗೆ ಭೇಟಿ ನೀಡಿದ್ದರು. ಆಗ ಮಕ್ಕಳು 150 ಕವನಗಳ ಸಂಕಲನ ರೂಪಿಸಿ ಅರ್ಪಿಸಿದ್ದರು ಎಂದು ಸ್ಮರಿಸಿದರು.
ವಿಜಯಪುರ ಶರಣತತ್ವ ಚಿಂತಕ ಡಾ. ಜೆ.ಎಸ್.ಪಾಟೀಲ ‘ಬಸವವಾದ ಮತ್ತು ಸಂವಿಧಾನದ ಆಶಯಗಳು’ ವಿಷಯ ಕುರಿತು ಉಪನ್ಯಾಸ ನೀಡಿದರು.