ಅಕ್ಕನ ವಚನಗಳು ಮಹಿಳೆಯರಿಗೆ ಶಕ್ತಿ ಅನಿತಾ ದೊಡ್ಡಗೌಡರ್ ಅಭಿಮತ ಉಪನ್ಯಾಸ ಕಾರ್ಯಕ್ರಮ

IMG-20240426-WA0262.jpg
Published on

ದಾವಣಗೆರೆ: ಆಧುನಿಕ ಜಗತ್ತಿನಲ್ಲಿ ಮಹಿಳಾ ಅಸ್ಮಿತೆ ಆತಂಕಕ್ಕೆ ಒಳಗಾದಾಗೆಲ್ಲ ಅಕ್ಕಮಹಾದೇವಿ ವಚನಗಳು ಶಕ್ತಿ ತುಂಬಲಿವೆ ಎಂದು ಎಸ್‌ಎಸ್‌ಎಂಬಿ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ. ಅನಿತಾ ದೊಡ್ಡಗೌಡರ್ ಹೇಳಿದರು.
ಶರಣ ಸಾಹಿತ್ಯ ಪರಿಷತ್ತು ದಾವಣಗೆರೆ ತಾಲೂಕು ಹಾಗೂ ನಗರ ಘಟಕದ ಸಹಯೋಗದಲ್ಲಿ ನಗರದ ಕೆ.ಎಸ್.ಎಸ್. ಶಿಕ್ಷಣ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ವೈರಾಗ್ಯ ನಿಧಿ ಅಕ್ಕಮಹಾದೇವಿ ಜಯಂತಿ ಮತ್ತು ಚಿಕ್ಕಬಾಸೂರು ಉಜ್ಜಮ್ಮ ಕೂಗುಲು ಬಾವಿ ನಿಂಗಪ್ಪ ದತ್ತಿ ಮತ್ತು ಕಲ್ಲಿಹಾಳ್ ಶಿವಲಿಂಗಮ್ಮ ಮತ್ತು ಶಾನುಬೋಗ ಹಾಲಯ್ಯ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಚಿಕ್ಕ ವಯಸ್ಸಿನಲ್ಲಿಯೇ ಶರಣಸತಿ ಲಿಂಗಪತಿ ತತ್ವ ಅಳವಡಿಸಿಕೊಂಡಿದ್ದ ಅಕ್ಕಮಹಾದೇವಿ, ಒಬ್ಬ ಆದರ್ಶಪತಿ ಚನ್ನಮಲ್ಲಿಕಾರ್ಜುನಂತೆ ಇರಬೇಕೆಂದು ಜಗತ್ತಿಗೆ ಸಾರಿದರು. ಅಕ್ಕನ ಅಂತರಂಗದ ಪಯಣ ಜಗತ್ತಿನ ಮಾನವ ಕೋಟಿಗೆ ಆದರ್ಶಪ್ರಾಯವಾಗಿದೆ ಎಂದು ತಿಳಿಸಿದರು.
ಅಕ್ಕಮಹಾದೇವಿಯು ಪ್ರಪಂಚದ ಪ್ರಥಮ ವೈರಾಗ್ಯ ನಿಧಿ ಹಾಗೂ ಅರಿವಿನ ಬೆರಗು ಆಗಿದ್ದಾರೆ. ಮಹಿಳೆಯ ಬದುಕಿಗೆ ಎತ್ತರದ ಸ್ಥಾನವನ್ನು ಸಮಾನತೆಯ ಮೂಲಕ ತಂದುಕೊಟ್ಟದ್ದು ವಚನ ಚಳವಳಿ ಎಂದು ಹೇಳಿದರು.
ಕೆಎಸ್‌ಎಸ್ ಶಿಕ್ಷಣ ಮಹಾವಿದ್ಯಾಲಯದ ವ್ಯವಸ್ಥಾಪಕ ನಿರ್ದೇಶಕ  ಎಚ್.ಕೆ. ಬಸವರಾಜ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯಗಳನ್ನು ಸಂವರ್ಧನೆಗೊಳಿಸುವ ಇಂತಹ ಕಾರ್ಯಕ್ರಮಗಳು ಅಗತ್ಯ ಎಂದು ತಿಳಿಸಿದರು.
ಕಾಲೇಜಿನ ಪ್ರಾಚಾರ್ಯ ಬಿ.ಎಸ್. ಚನ್ನಬಸಪ್ಪ ಮಾತನಾಡಿ, ವಚನಗಳು ಕನ್ನಡ ಸಾಹಿತ್ಯದ ಮೇರು ಪರ್ವತಗಳು ವಿದ್ಯಾರ್ಥಿಗಳು ತಮ್ಮ ಬಿಡುವಿನ ಸಮಯದಲ್ಲಿ ಈ ವಚನಗಳನ್ನು ಅಧ್ಯಯನ ಮಾಡಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಸಾಪ ನಗರ ಘಟಕದ ಗೌರವಾಧ್ಯಕ್ಷ ಎಂ.ಎಸ್. ನಾಗರಾಜಪ್ಪ, ಅಧ್ಯಕ್ಷ ಎಂ. ಪರಮೇಶ್ವರಪ್ಪ ಸಿರಿಗೆರೆ, ತಾಲೂಕು ಮಹಿಳಾ ಕದಳಿ ವೇದಿಕೆಯ ಅಧ್ಯಕ್ಷೆ ಮಮತಾ ನಾಗರಾಜ್,ಕೆ. ಎಸ್.ಗಂಗಾಧರ್ ಮಾತನಾಡಿದರು.
ಸೌಮ್ಯಾ ಸತೀಶ್ ತಂಡದಿಂದ ವಚನ ಪ್ರಾರ್ಥನೆ ನಡೆಯಿತು. ಶಿಕ್ಷಕ ನಾಗರಾಜ್ ಸ್ವಾಗತಿಸಿದರು. ಭರ್ಮಪ್ಪ ಮೈಸೂರು ಪ್ರಾಸ್ತಾವಿಕ ಮಾತನಾಡಿದರು. ಕಲಿವೀರ್ ಕಳ್ಳಿಮನಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳಿಗೆ ಮತದಾನ ಪ್ರತಿಜ್ಞಾವಿಧಿ ಬೋಧಿಸಲಾಯಿತು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net