ವಸತಿ, ಶಿಕ್ಷಣ ಕ್ಷೇತ್ರಗಳಿಗೆ ಹೆಚ್ಚಲಿ ಸಾಲ ನೀಡಿಕೆ ಪ್ರಮಾಣ

Davangere, Lead Bank, Meeting, NABARD
Published on

ದಾವಣಗೆರೆ: ಇತರ ಆದ್ಯತಾ ವಲಯಗಳಲ್ಲಿ ಬರುವ ವಸತಿ, ಶಿಕ್ಷಣ ಇನ್ನಿತರ ಕ್ಷೇತ್ರಗಳಲ್ಲಿ ಸಾಲ ವಿತರಣೆಯನ್ನು ಚುರುಕು ಗೊಳಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ. ವಿಜಯ ಮಹಾಂತೇಶ ದಾನಮ್ಮನವರ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು. ಲೀಡ್ ಬ್ಯಾಂಕ್‌ನಿಂದ ಜಿ.ಪಂ. ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಪುನರಾವಲೋಕನ ಸಮಿತಿ ಸಭೆಯಲ್ಲಿ ಮಾತನಾಡಿದರು.

ಇದಕ್ಕೆ ಧ್ವನಿಗೂಡಿಸಿದ ಲೀಡ್ ಬ್ಯಾಂಕ್ ವಿಭಾಗೀಯ ವ್ಯವಸ್ಥಾಪಕ ಸುಶೃತ್ ಶಾಸ್ತ್ರಿ, ಎರಡು ವರ್ಷಗಳಿಂದ ಇತರ ಆದ್ಯತಾ ವಲಯದ ಗುರಿಯನ್ನು ಕಡಿಮೆ ಮಾಡಿದ್ದರೂ ಸಾಲ ನೀಡಿಕೆ ಸುಧಾರಣೆಯಾಗುತ್ತಿಲ್ಲ ಎಂದು ಹೇಳಿದರು. ವಸತಿ ಸಾಲ ಮಂಜೂರು ಮಾಡಬೇಕಾದರೆ ಅರ್ಜಿದಾರರು ಎನ್‌ಕಂಬರೆನ್ಸ್ ಸರ್ಟಿಫಿಕೇಟ್ ನೀಡಬೇಕಾಗುತ್ತದೆ. ಆದರೆ ಉಪ ನೋಂದಣಾಧಿಕಾರಿ ಕಚೇರಿಯಿಂದ ಆ ಪ್ರಮಾಣಪತ್ರ ಬರಲು ವಿಳಂಬವಾಗುತ್ತಿದ್ದು ಈ ಕಾರಣಕ್ಕೆ ಮಂಜೂರಾತಿ ನಿಧಾನವಾಗುತ್ತಿದೆ ಎಂದು ಬ್ಯಾಂಕ್ ಅಧಿಕಾರಿಗಳು ವಿವರಿಸಿದರು.

ಹಾಗಿದ್ದರೆ ಈ ಬಗ್ಗೆ ಕ್ರಮ ಕೈಗೊಳ್ಳಲು ಉಪ ನೋಂದಣಾಧಿಕಾರಿಗೆ ಪತ್ರ ಬರೆಯಲಾಗುವುದು ಎಂದು ಸಿಇಒ ತಿಳಿಸಿದರು. ಶಿಕ್ಷಣ ಸಾಲ ನೀಡಿಕೆಯೂ ವಿಳಂಬವಾಗದಂತೆ ನೋಡಿಕೊಳ್ಳಬೇಕು ಎಂದು ಸುಶೃತ್ ಶಾಸ್ತ್ರಿ ಹೇಳಿದರು. ಆತ್ಮನಿರ್ಭರ ಭಾರತ ಅಭಿಯಾನದಡಿ ಕೇಂದ್ರ ಸರ್ಕಾರ ಆಹಾರ ಸಂಸ್ಕರಣೆ ಉದ್ಯಮಗಳಿಗೆ ಪ್ರೋತ್ಸಾಹಿಸುತ್ತಿದ್ದು ಅಂಥ ಘಟಕಗಳ ಸ್ಥಾಪನೆಗೆ ಸಾಲಕ್ಕಾಗಿ ಸಲ್ಲಿಸಿದ ಅರ್ಜಿಗಳನ್ನು ವಿಲೇವಾರಿ ಮಾಡುವಲ್ಲಿ ಬೆಂಗಳೂರು ನಗರ ಜಿಲ್ಲೆಯ ನಂತರ ದಾವಣಗೆರೆ ಜಿಲ್ಲೆಯು ರಾಜ್ಯದಲ್ಲಿ 2ನೇ ಸ್ಥಾನದಲ್ಲಿದೆ. ಆದರೆ ತಿರಸ್ಕೃತ ಅರ್ಜಿಗಳ ಸಂಖ್ಯೆ ಹೆಚ್ಚಾಗಿದೆ ಎಂದು ವಿಜಯ ಮಹಾಂತೇಶ ತಿಳಿಸಿದರು. ಬ್ಯಾಂಕುಗಳ ಸಾಲ ಮತ್ತು ಠೇವಣಿ ಅನುಪಾತ ಕಡಿಮೆ ಇರುವ ಬಗ್ಗೆಯೂ ಸಭೆಯಲ್ಲಿ ಚರ್ಚೆಗೆ ಬಂದಿತು. ಭಾರತೀಯ ರಿಜರ್ವ್ ಬ್ಯಾಂಕಿಗೆ ವರದಿ ನೀಡಬೇಕಿರುವುದರಿಂದ ಸುಧಾರಣೆ ಮಾಡಿಕೊಳ್ಳಿ ಎಂದು ಬ್ಯಾಂಕ್ ಅಧಿಕಾರಿಗೆ ಸಿಇಒ ಸೂಚಿಸಿದರು.

7970 ಕೋಟಿ ಸಾಲದ ಕರಡು ಯೋಜನೆ: ಜಿಲ್ಲೆಯ ಬ್ಯಾಂಕುಗಳಿಂದ 2022-23ನೇ ಸಾಲಿನಲ್ಲಿ 7970 ಕೋಟಿ ರೂ.ಗಳ ಸಾಲ ನೀಡಲು ಯೋಜಿಸಲಾಗಿದೆ. ಅದರಲ್ಲಿ ಕೃಷಿಗೆ 4307 ಕೋಟಿ, ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳಿಗೆ 1193 ಕೋಟಿ ರೂ.ಗಳು ಸೇರಿವೆ.

ಇದೇ ವೇಳೆ ನಬಾರ್ಡ್‌ನ 2022-23ನೇ ಸಾಲಿನ ಸಾಲ ಯೋಜನೆಯನ್ನು ಬಿಡುಗಡೆ ಮಾಡಲಾಯಿತು. ನಬಾರ್ಡ್‌ನ ಎ.ಜಿ.ಎಂ. ವಿ. ರವೀಂದ್ರ, ಕೆನರಾ ಬ್ಯಾಂಕ್ ವಿಭಾಗೀಯ ವ್ಯವಸ್ಥಾಪಕ ಬಿ.ಜಿ. ದೊಡ್ಡಮನಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net