

ದಾವಣಗೆರೆ: ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಮೇಲೆ ಶೂ ಎಸೆದಿರುವ ಪ್ರಕರಣ ಖಂಡಿಸಿ, ಸೂಕ್ತ ಕ್ರಮಕ್ಕೆ ಆಗ್ರಹಿಸಿ ವಕೀಲರ ಸಂಘದ ಸದಸ್ಯರು ಗುರುವಾರ ತೋಳುಗಳಿಗೆ ಕೆಂಪು ಪಟ್ಟಿ ಧರಿಸಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಜಿಲ್ಲಾ ವಕೀಲರ ಸಂಘದ ತುರ್ತು ಸಭೆ ನಡೆಸಿ ಖಂಡನಾ ನಿರ್ಣಯ ಕೈಗೊಳ್ಳಲಾಗಿದ್ದು, ಬಲಗೈ ತೋಳಿಗೆ ಕೆಂಪು ಪಟ್ಟಿ ಧರಿಸಿ ನ್ಯಾಯಾಲಯದ ಕಲಾಪಗಳಲ್ಲಿ ಭಾಗವಹಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಡಳಿತದ ಮೂಲಕ ರಾಜ್ಯ, ಕೇಂದ್ರ ಸರ್ಕಾರಗಳು, ರಿಜಿಸ್ಟ್ರಾರ್ ಆಫ್ ಹೈಕೋರ್ಟ್, ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಲಾಯಿತು.
ಸಂಘದ ಉಪಾಧ್ಯಕ್ಷ ಕೆ.ಜಿ.ಕೆ ಸ್ವಾಮಿ ಮಾತನಾಡಿ, ಸುಪ್ರೀಂ ನ್ಯಾಯಮೂರ್ತಿಗಳ ಮೇಲೆ ವಕೀಲ ರಾಕೇಶ್ ಕಿಶೋರ್ ಎಂಬಾತ ಶೂ ಎಸೆದು ಅನುಚಿತ ವರ್ತನೆ ತೋರಿರುವುದು ಖಂಡನೀಯ. ಸಂಘದ ಸದಸ್ಯರ ತುರ್ತು ಸಭೆಯಲ್ಲಿ ಘಟನೆ ಬಗ್ಗೆ ವಿರೋಧ ವ್ಯಕ್ತಪಡಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಖಜಾಂಚಿ ಜೆ.ಇ. ವನಜಾಕ್ಷಿ, ಕಾರ್ಯದರ್ಶಿ ಎಸ್.ಮಂಜು, ಗುಮ್ಮನೂರು ಮಲ್ಲಿಕಾರ್ಜುನ, ಕೆ. ಮಂಜುಳಾ, ಎಂ. ಚೌಡಪ್ಪ, ಕೆ. ಅಣ್ಣಪ್ಪ, ಕೆ.ಎಸ್. ರೇವಣಸಿದ್ದಪ್ಪ, ಎಚ್.ಕೆ. ಅಮೃತಾ ಇತರರಿದ್ದರು.
---