ಕೊಳೆಗೇರಿ ಜನರಿಗೆ ನೀಡಿ ಹಕ್ಕುಪತ್ರ

1001212810.jpg
Published on

ದಾವಣಗೆರೆ: ಕೊಳೆಗೇರಿ ಜನರ ಭೂಮಿ ಹಾಗೂ ಮೂಲ ಸೌಕರ್ಯಗಳ ಸಮಸ್ಯೆ ನಿವಾರಣೆಗೆ ಮಹಾನಗರ ಪಾಲಿಕೆ, ಸ್ಲಂ ಬೋರ್ಡ್ ಮತ್ತು ಜಿಲ್ಲಾಡಳಿತದ ಅಧಿಕಾರಿಗಳು ಸಮನ್ವಯದಿಂದ ಬಗೆಹರಿಸಿ ಹಕ್ಕುಪತ್ರ ನೀಡಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ ಮ. ಕರೆಣ್ಣವರ ಹೇಳಿದರು.

ದೇವರಾಜ ಅರಸು ಬಡಾವಣೆಯ ನೆರಳು ಬೀಡಿ ಕಾರ್ಮಿಕರ ಕಚೇರಿ ಆವರಣದಲ್ಲಿ ಮಂಗಳವಾರ ಕೊಳೆಗೇರಿ ನಿವಾಸಿಗಳಿಗಾಗಿ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಗರ ಕೊಳಚೆ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರ ಜೀವನಮಟ್ಟ ಸುಧಾರಿಸಲು ಸರ್ಕಾರ ಕರ್ನಾಟಕ ಕೊಳಚೆ ಪ್ರದೇಶ ಅಭಿವೃದ್ಧಿ ಮತ್ತು ನಿರ್ಮೂಲನೆ ಕಾಯ್ದೆ ಜಾರಿಗೊಳಿಸಿದೆ. ಆ ಮೂಲಕ ಸ್ಲಂಗಳ ಮೂಲ ಸೌಕರ್ಯಗಳಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ದಾವಣಗೆರೆಯ 49 ಕೊಳೆಗೇರಿ ಜನರು ಇದರ ಲಾಭ ಪಡೆಯಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯ ಕಾರ್ಯಪಾಲಕ ಇಂಜಿನಿಯರ್ ಗೋಪಾಲರೆಡ್ಡಿ ಮಾತನಾಡಿ, ಮಂಡಳಿ ಹಮ್ಮಿಕೊಂಡಿರುವ ಯೋಜನೆಗಳನ್ನು ಸಮರ್ಪಕವಾಗಿ ಕಾರ್ಯರೂಪಕ್ಕೆ ತರಲಾಗುವುದು ಎಂದರು.

ಮಹಾನಗರ ಪಾಲಿಕೆಯ ಉಪ ಆಯುಕ್ತೆ ಮಂಜುಳಾ ಮಾತನಾಡಿ, ಸ್ಲಂ ಜನರ ಅಭಿವೃದ್ಧಿಗಾಗಿ ಮಹಾನಗರ ಪಾಲಿಕೆ ಅಧಿಕಾರಿಗಳು ಅವಿರತ ಶ್ರಮಿಸುತ್ತಿದ್ದಾರೆ ಎಂದರು.

ಹಿರಿಯ ವಕೀಲ ಎಲ್.ಎಚ್. ಅರುಣ್‌ಕುಮಾರ್ ಮಾತನಾಡಿ, ಸರ್ಕಾರದ ಆದೇಶದಂತೆ ದಾವಣಗೆರೆಯ ಎಲ್ಲಾ ಸ್ಲಂಗಳಲ್ಲಿ ಆರ್ಥಿಕ, ಸಾಮಾಜಿಕ ಸಮೀಕ್ಷೆಗಳನ್ನು ಕೈಗೊಂಡು ಹಕ್ಕುಪತ್ರಗಳನ್ನು ನೀಡಬೇಕು. ರಾಮಕೃಷ್ಣ ಹೆಗಡೆ ನಗರದಿಂದ ಸ್ಥಳಾಂತರಗೊಂಡ ಜನರಿಗೆ 475 ಮನೆಗಳನ್ನು ಕಟ್ಟಿಕೊಡಲು ಸ್ಲಂಬೋರ್ಡ್ ಯೋಜನೆಗಳನ್ನು ರೂಪಿಸಬೇಕು ಎಂದರು.

ನೆರಳು ಬೀಡಿ ಕಾರ್ಮಿಕರ ಯೂನಿಯನ್ ಅಧ್ಯಕ್ಷೆ ಜಬೀನಾ ಖಾನಂ ಮಾತನಾಡಿ, ದಾವಣಗೆರೆಯ ಅಘೋಷಿತ ಸ್ಲಂಗಳನ್ನು ಘೋಷಿತ ಸ್ಲಂಗಳಾಗಿ ಘೋಷಿಸಬೇಕು. ಸ್ಲಂ ನಿವಾಸಿಗಳ ಹಕ್ಕುಗಳನ್ನು ಕಾಪಾಡಬೇಕೆಂದು ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಸ್ಲಂ ಜನರ ಸಂಘಟನೆ ಕರ್ನಾಟಕ, ನೆರಳು ಬೀಡಿ ಕಾರ್ಮಿಕರ ಯೂನಿಯನ್, ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ, ಮಹಾನಗರ ಪಾಲಿಕೆ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಎಂ. ಕರಿಬಸಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net