

ದಾವಣಗೆರೆ: ಬಡವರು, ಹಿಂದುಳಿದ ವರ್ಗ, ಆದಿವಾಸಿಗಳು, ದಲಿತರು ಭೂ ಮಾಲಿಕತ್ವದಿಂದ ವಂಚಿತರಾಗದಿರಲು ರಾಜ್ಯ ಸರ್ಕಾರ ಆರನೇ ಕಾರ್ಯಕ್ರಮವಾಗಿ ಭೂ ಗ್ಯಾರಂಟಿ ಯೋಜನೆ ಜಾರಿಗೊಳಿಸಿದೆ. ಹಂತ ಹಂತವಾಗಿ ಹಕ್ಕುಪತ್ರ ವಿತರಿಸಲಾಗುವುದು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ಭಾನುವಾರ, ಮಾಯಕೊಂಡ ಕ್ಷೇತ್ರ ವ್ಯಾಪ್ತಿಯ ಮತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ, ಕಂದಾಯ ಗ್ರಾಮ ಘೋಷಿತ ದಾಸಪ್ಪ ನಗರ ಮರು ನಾಮಕರಣದ ಫಲಕ ಉದ್ಘಾಟನೆ ಸಮಾರಂಭದಲ್ಲಿ ಗ್ರಾಮಸ್ಥರಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದರು.
ಹೊಸಪೇಟೆಯಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಸರ್ಕಾರದ ಎರಡನೇ ವರ್ಷದ ಸಾಧನಾ ಸಮಾವೇಶದಲ್ಲಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಪ್ರಕಟಿಸಿದಂತೆ ಭೂ ಗ್ಯಾರಂಟಿ ಯೋಜನೆಗೆ ಆದ್ಯತೆ ನೀಡಲಾಗಿದೆ. ಕರ್ನಾಟಕದಲ್ಲಿ ಭೂ ಗ್ಯಾರಂಟಿ ಮೂಲಕ ರೈತರಿಗೆ ನೆರವು ನೀಡಲಾಗುವುದು ಎಂದು ತಿಳಿಸಿದರು.
ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಿಂದ ಜನರು ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗಿದೆ. ಸಾಮಾಜಿಕ ನ್ಯಾಯ ನೀಡುವ ಗುರಿಯೂ ಇದೆ. ಗ್ರಾಮೀಣ ಭಾಗದಲ್ಲಿ ದಾನಿಗಳು ದಾನವಾಗಿ ನೀಡಿದ್ದ ಜಾಗಗಳಲ್ಲಿ ಇರುವ ಕೆಲವು ಸರ್ಕಾರಿ ಶಾಲೆಗಳು ಇಂದಿಗೂ ಸರ್ಕಾರದ ಹೆಸರಿನಲ್ಲಿ ನೋಂದಣಿ ಆಗಿಲ್ಲ. ಅಂಥವನ್ನು ಗುರುತಿಸಿ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಸಲಹೆ ನೀಡಿದರು.
ಜಲಜೀವನ್ ಮಿಷನ್ ಯೋಜನೆಯಡಿ ದಾವಣಗೆರೆ ಕ್ಷೇತ್ರದ ಪ್ರತಿ ಹಳ್ಳಿಗೂ ನೀರೊದಗಿಸುವ ಕೆಲಸ ಮಾಡಲಾಗುತ್ತಿದೆ. ಈಗಾಗಲೇ ನಾಗರಸನಹಳ್ಳಿ ಹಾಗೂ ಕನಗೊಂಡನಹಳ್ಳಿ ಗ್ರಾಮದಲ್ಲಿ 24-7 ನೀರಿನ ವ್ಯವಸ್ಥೆ ಮಾಡಲಾಗಿದೆ. ಸರ್ಕಾರದ ಕೆಲಸ ಬಗ್ಗೆ ಜನರು ತಿಳಿಯಬೇಕು. ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು.ಎಂದರು.
ಎನ್‌ಆರ್‌ಎಲ್‌ಎಂ ಯೋಜನೆಯಡಿ ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ನೀಡಲಾಗುತ್ತಿದ್ದು ಗ್ರಾಮೀಣ ಮಹಿಳೆಯರು ತರಬೇತಿ ಪಡೆದು ಆರ್ಥಿಕವಾಗಿ ಸಬಲರಾಗಬೇಕು. ಪ್ರಧಾನಮಂತ್ರಿ ವಸತಿ ಆವಾಸ್ ಯೋಜನೆಯಡಿ ಗ್ರಾಮೀಣ ಜನರು ಮನೆ ನಿರ್ಮಾಣ ಮಾಡಿಕೊಂಡಂತೆ ಹಂತಹಂತವಾಗಿ ಅನುದಾನ ಬರಲಿದೆ. ಫಲಾನುಭವಿಗಳು ಇದರ ಲಾಭ ಪಡೆದುಕೊಳ್ಳಬೇಕು ಎಂದು ಹೇಳಿದರು.
ಶಾಸಕ ಕೆ.ಎಸ್ ಬಸವಂತಪ್ಪ ಮಾತನಾಡಿ ಮಾಯಕೊಂಡವನ್ನು ನಕಾಶೆ ದಾರಿ ಒತ್ತುವರಿಮುಕ್ತ ಕ್ಷೇತ್ರವನ್ನಾಗಿಸಲು ಪಣ ತೊಟ್ಟಿದ್ದು, ನಕಾಶೆ ದಾರಿಯನ್ನು ಯಾರೇ ಪ್ರಭಾವಿಗಳು ಒತ್ತುವರಿ ಮಾಡಿದ್ದರೂ ಮುಲಾಜಿಲ್ಲದೇ ತೆರವುಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಾಯಕೊಂಡ ಕ್ಷೇತ್ರ, ರಾಜ್ಯದಲ್ಲೇ ಅತೀ ಹೆಚ್ಚು ನಕಾಶೆ ದಾರಿಗಳನ್ನು ಹೊಂದಿದೆ. ನಕಾಶೆ ದಾರಿಗೆ ಒಂದೆಡೆ ಖಾಸಗಿ ಭೂಮಿಯನ್ನೂ ಕೊಡುತ್ತಿಲ್ಲ. ಖಾಸಗಿಯವರು ಒಪ್ಪಂದದಂತೆ ಜಾಗವನ್ನೂ ಕೊಡುತ್ತಿಲ್ಲ. ಮತ್ತೊಂದೆಡೆ ಸರ್ಕಾರಿ ನಕಾಶೆೆ ದಾರಿಯೂ ಒತ್ತುವರಿಯಾಗುತ್ತಿದೆ. ಹೀಗಾಗಿ ರೈತರು ಹೊಲ-ಮನೆಗಳಿಗೆ ಓಡಾಡುವುದು ಸಮಸ್ಯೆ ಆಗಿದೆ. ತಹಸೀಲ್ದಾರ್ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಮತ್ತಿ ಗ್ರಾಪಂ ಅಧ್ಯಕ್ಷ ಕೆ.ಬಿ.ಮಂಜುನಾಥ್, ರೈತ ಮುಖಂಡರಾದ ತೇಜಸ್ವಿ ಪಟೇಲ್, ಎನ್.ಡಿ.ಮುರಿಗೆಪ್ಪ, ಜಯಪಾಲ್, ತ್ಯಾವಣಗಿ ಗೋವಿಂದಸ್ವಾಮಿ, ತಾಪಂ ಮಾಜಿ ಅಧ್ಯಕ್ಷ ಕೆ.ಎನ್. ಮಂಜುನಾಥ್, ಮಾಜಿ ಉಪಾಧ್ಯಕ್ಷ ಹುಲಿಕಟ್ಟೆ ಶಿವಣ್ಣ, ಕುಕ್ಕವಾಡ ಮಾಜಿ ಪ್ರಧಾನ ಡಿ.ಮಲ್ಲೇಶಪ್ಪ, ತಹಸೀಲ್ದಾರ್ ಡಾ.ಎಸ್. ಬಿ.ಅಶ್ವಥ್, ಪಿಡಿಒ ವನಿತಾಬಾಯಿ, ಮುಖಂಡರಾದ ಹೂವಿನಮಡು ಚಂದ್ರಣ್ಣ, ಹೂವಿನಮಡು ಹಾಲೇಶಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಕೊಳೇನಹಳ್ಳಿ ಸತೀಶ್, ಕಂದಗಲ್ಲು ಮಲ್ಲಿಕಾರ್ಜುನಗೌಡ್ರು, ವಕೀಲ ಮತ್ತಿ ಹನುಮಂತಪ್ಪ ಇತರರಿದ್ದರು.