ಹಳೆಯ ಕಟ್ಟುಪಾಡುಗಳೇ ಹೆಣ್ಣುಮಕ್ಕಳ ಶತ್ರು

1000698736.jpg
Published on

ದಾವಣಗೆರೆ: ಹೆಣ್ಣುಮಕ್ಕಳಿಗೂ ಯೋಚನೆ ಮಾಡುವ ಶಕ್ತಿ ಇದೆ. ಹಳೆಯ ವಿಚಾರಗಳ ವಿರುದ್ಧ ಸೆಡ್ಡು ಹೊಡೆಯುವ ಜತೆಗೆ, ಅವರಲ್ಲಿನ ಅಸಹಾಯಕತೆ ದೂರ ಮಾಡಿ ಗಟ್ಟಿಗೊಳಿಸಬೇಕಿದೆ ಎಂದು ಎಐಎಂಎಸ್‌ಎಸ್ ರಾಜ್ಯ ಕಾರ್ಯದರ್ಶಿ ಎಸ್.ಶೋಭಾ ಹೇಳಿದರು.
ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಜಿಲ್ಲಾ ಸಮಿತಿಯಿಂದ ರೋಟರಿ ಬಾಲಭವ ನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಹಿಳೆಯರ ಎರಡನೇ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಮಹಿಳೆಗೆ ಮಹಿಳೆಯೇ ಶತ್ರುವಲ್ಲ. ಕಟ್ಟುಪಾಡಿನ ಹಳೆಯ ವಿಚಾರಗಳೇ ಆಕೆಯ ಶತ್ರು. ಇದರ ನಡುವೆಯೂ ಅನೇಕ ಮಹಿಳೆಯರು ಸಾಧನೆ ಮಾಡಿದ್ದಾರೆ. ನಾಲ್ಕು ಗೋಡೆಗಳ ಮಧ್ಯೆ ಜೀವನ ನಡೆಸಬೇಕೆಂದು ಬಿತ್ತರಿಸುವವರ ಸಂಖ್ಯೆ ಹೆಚ್ಚಿದೆ. ಸ್ತ್ರೀಯರ ಕೀಳರಿಮೆಗೆ ಬ್ರೇಕ್ ಹಾಕಬೇಕಿದೆ ಎಂದು ಆಶಿಸಿದರು.
ಸಮೀಕ್ಷೆಯೊಂದರ ಪ್ರಕಾರ ಪ್ರತಿ ಐವರು ಹೆಣ್ಣುಮಕ್ಕಳಲ್ಲಿ ಮೂವರು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಕೊಲೆ, ಅತ್ಯಾಚಾರ ಹೆಚ್ಚಿದ್ದು ಪುರುಷರ ಅಧಿಪತ್ಯದ ವಿರುದ್ಧ ಹೋರಾಟ ಮಾಡಬೇಕಿದೆ. ಸ್ತ್ರೀ-ಪುರುಷರು ಸಮನಾಗಿ ಹಾಗೂ ಗೌರವದಿಂದ ಬದುಕುವ ಸಮ ಸಮಾಜ ಕಟ್ಟಬೇಕಿದೆ ಎಂದರು.
ಹೆಣ್ಣೆಂದರೆ ಅಡುಗೆ ಮಾಡುವುದು, ಮಕ್ಕಳ ಹೆರುವುದಷ್ಟೇ ಅಲ್ಲ. ಹಳೆಯ ವಿಚಾರಗಳನ್ನು ಧಿಕ್ಕರಿಸುವತ್ತ ಎಐಎಂಎಸ್‌ಎಸ್ ಸಜ್ಜುಗೊಳಿಸಬೇಕಿದೆ. ಹೆಣ್ಣುಮಕ್ಕಳು ಉಡುಪು ಸರಿ ಇಲ್ಲ ಎಂಬ ನೆಪವೇ ಅತ್ಯಾಚಾರಕ್ಕೆ ನೀಡುವ ಪರವಾನಗಿಯಲ್ಲ. ಅವರಲ್ಲಿ ಸಭ್ಯತೆಯ ಪಾಠ ಕಲಿಸಲಿ, ಆದರೆ ಧರಿಸುವ ಉಡುಪಿನ ಬಗ್ಗೆ ತಲೆ ತುಂಬಿಸುವುದು ಬೇಡ ಎಂದು ಹೇಳಿದರು.
ಎಐಎಂಎಸ್‌ಎಸ್ ರಸ್ತೆಗಿಳಿದು ಪ್ರತಿಭಟಿಸುವುದಲ್ಲದೇ ಮಹಿಳೆಯರನ್ನು ಹೊಸ ವಿಚಾರವಂತರಾಗಿಸಬೇಕು. ಪದಾಧಿಕಾರಿಗಳು ಸ್ವತಃ ಹೊಸ ವಿಚಾರಗಳನ್ನು ಗ್ರಹಿಸಿ, ಕಾಲೇಜು, ಕಚೇರಿ, ಕಾರ್ಖಾನೆ ಇತ್ಯಾದಿಗಳಲ್ಲಿ ಬಿತ್ತರಿಸಬೇಕು. ಸಮಾಜದ ಯೋಚನೆ ಬದಲಾಯಿಸಿ ಹೆಣ್ಣುಮಕ್ಕಳು ಆತ್ಮಗೌರವದೊಂದಿಗೆ ಸಮಸಮಾಜ ಕಟ್ಟುವ ವಿಶ್ವಾಸ ಮೂಡಿಸಬೇಕು. ಹೆಣ್ಣು ಮೌನಿಯಲ್ಲ. ಸರ್ಕಾರದ ಮಹಿಳಾ ವಿರೋಧಿ, ಜನವಿರೋಧಿ ನಡೆಗಳನ್ನೂ ಪ್ರಶ್ನಿಸಬೇಕಿದೆ ಎಂದೂ ಹೇಳಿದರು.
ಮೈಕ್ರೋಫೈನಾನ್ಸ್ ಕಿರುಕುಳಕ್ಕೆ ಮಹಿಳೆಯರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.  ಕೋಟ್ಯಂತರ ತೆರಿಗೆ ಕಟ್ಟದವರು ಆರಾಮಾಗಿದ್ದಾರೆ.  ಒಂದೆರಡು ಲಕ್ಷ ಕಟ್ಟದ ಜನಸಾಮಾನ್ಯರು ಸಂಕಷ್ಟ ಎದುರಿಸುವಂತಾಗಿದೆ. ಮೈಕ್ರೋಫೈನಾನ್ಸ್ ವಿರುದ್ಧ ಸರ್ಕಾರ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಬೇಕಿದೆ ಎಂದೂ ಆಶಿಸಿದರು.
50 ಸಾವಿರ ಕೋಟಿ ರೂ.ಗಳಷ್ಟು ವ್ಯವಹಾರ ನಡೆಸುವ ಉದ್ಯಮಿಗಳು ಅತಿ ಹೆಚ್ಚಿನ ದುಡಿಮೆ ಮಾಡುವಂತೆ ಹೇಳಿಕೆ ನೀಡುವುದು ಸಹಜ. ಆದರೆ ತಲಾ 8 ತಾಸು ನಿದ್ದೆ, ಕೆಲಸ ಹಾಗೂ ಕುಟುಂಬದ ಜತೆ ಕಾಲ ಕಳೆಯದಿದ್ದರೆ ದುಡಿಮೆಯಾದರೂ ಏತಕ್ಕೆ? ಒತ್ತಡದ ಬದುಕು ಸಲ್ಲದು ಎಂದೂ ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘಟನೆ ಜಿಲ್ಲಾಧ್ಯಕ್ಷೆ ರಶ್ಮಿ ತಡಗ, ಮಹಿಳಾ ಸಮಾನತೆ, ಸ್ವಾತಂತ್ರೃ ಎಂಬುದು ಭಾಷಣದ ಸರಕಾಗಿದೆ. ಮಹಿಳೆಯರ ಮೇಲೆ ಮಿತಿ ಮೀರಿದ ದೌರ್ಜನ್ಯ ನಡೆಯುತ್ತಿದೆ. ಎಐಎಂಎಸ್‌ಎಸ್ ಇದರ ವಿರುದ್ಧ ನಿಲ್ಲುವ ಜತೆಗೆ ಸಾಂಸ್ಕೃತಿಕ ಮೌಲ್ಯ ಎತ್ತಿ ಹಿಡಿಯುವ ನಿಟ್ಟಿನಲ್ಲಿ ಮಹಾನ್ ನಾಯಕರ, ದಾರ್ಶನಿಕರ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷೆ ಎನ್.ಎಂ.ಮಂಜುಳಾ, ಜಿಲ್ಲಾ ಕಾರ್ಯದರ್ಶಿ ಕೆ. ಭಾರತಿ, ಎಸ್‌ಯುಸಿಐ(ಸಿ) ಜಿಲ್ಲಾ ಕಾರ್ಯದರ್ಶಿ ಮಂಜುನಾಥ ಕೈದಾಳೆ ಇದ್ದರು.
ನಿರ್ಣಯಗಳು
ಹೆಣ್ಣುಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಭ್ರೂಣಹತ್ಯೆ, ಮರ್ಯಾದಾ ಹತ್ಯೆ, ಅತ್ಯಾಚಾರ  ತಡೆಯಬೇಕು.
ಬಾಲ್ಯವಿವಾಹದ ವಿರುದ್ದ ಜಾಗೃತಿ ಕಾರ್ಯಕ್ರಮ ರೂಪಿಸಬೇಕು.
ಹೆಚ್ಚಿನ ಹೆರಿಗೆ ಆಸ್ಪತ್ರೆಗಳನ್ನು ತೆರೆಯಬೇಕು.ಜಿಲ್ಲಾಸ್ಪತ್ರೆಗಳಿಗೆ ಮೂಲಸೌಕರ್ಯ ಕಲ್ಪಿಸಬೇಕು.
ಕಾರ್ಖಾನೆಗಳಲ್ಲಿ ದುಡಿಮೆಯ ಅವಧಿ ಹೆಚ್ಚಿಸುವ ಮಸೂದೆ ಜಾರಿಗೆ ತರಬಾರದು.
ಮಹಿಳೆಯರಿಗೆ ಸಮಾನ ಹಕ್ಕು ಹಾಗೂ ಭದ್ರತೆ ಖಾತ್ರಿಪಡಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net