

ದಾವಣಗೆರೆ: ಛಾಯಾಗ್ರಾಹಕರಿಗೆ ಕಾರ್ಮಿಕರ ಕಾರ್ಡ್ ನೀಡುವುದಾಗಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಇಂಗಿತ ವ್ಯಕ್ತಪಡಿಸಿದ್ದು, ಈ ಸಂಬಂಧ ಶೀಘ್ರವೇ ಸರ್ಕಾರಿ ಆದೇಶ ಹೊರಡಿಸುವಂತೆ ಸಚಿವರ ಜತೆ ಚರ್ಚಿಸುವುದಾಗಿ ಶಾಸಕ ಕೆ.ಎಸ್.ಬಸವಂತಪ್ಪ ಭರವಸೆ ನೀಡಿದರು.
ನಗರದ ಸದ್ಯೋಜಾತ ಶಿವಾಚಾರ್ಯ ಹಿರೇಮಠದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ದಾವಣಗೆರೆ ತಾಲೂಕು ಫೋಟೋ ಮತ್ತು ವೀಡಿಯೋಗ್ರಾಫರ್ಸ್ ಸಂಘದ 12ನೇ ವಾರ್ಷಿಕೋತ್ಸವ ಹಾಗೂ ವಿಶ್ವ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಛಾಯಾಗ್ರಾಹಕರ ಸಂಘದ ಸದಸ್ಯರು ದಿನಾಂಕ ನಿಗದಿಪಡಿಸಿದಲ್ಲಿ, ಕಾರ್ಮಿಕ ಸಚಿವರು ಸಾಧ್ಯವಾದಲ್ಲಿ ಸಿಎಂ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿಸಿ ಛಾಯಾಗ್ರಾಹಕರ ಬೇಡಿಕೆಗಳನ್ನು ಈಡೇರಿಸುವ ಸಂಬಂಧ ಒತ್ತು ನೀಡಲಾಗುವುದು. ರಾಜಕೀಯ ವಾತಾವರಣ ತಿಳಿಯಾದ ನಂತರ ನಿಯೋಗ ತೆರಳೋಣ ಎಂದರು.
ದಾವಣಗೆರೆ ತಾಲೂಕು ಮಟ್ಟದಲ್ಲಿ ನಿವೇಶನ ರಹಿತ ಛಾಯಾಗ್ರಾಹಕರು, ವೀಡಿಯೋಗ್ರಾಫರ್‌ಗಳು ಹಾಗೂ ಪತ್ರಕರ್ತರಿಗೆ ನಿವೇಶನ ಬೇಕಿದೆ. ಈ ಸಂಬಂಧ ಸಚಿವ ಎಸ್‌ಎಸ್ ಮಲ್ಲಿಕಾರ್ಜುನ್, ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅವರೊಂದಿಗೆ ಮಾತನಾಡಿ ದೂಡಾದಲ್ಲಿ ನಿವೇಶನ ಕಲ್ಪಿಸಿಕೊಡಲು ಪ್ರಯತ್ನಿಸುವುದಾಗಿ ಹೇಳಿದರು.
ಮೇಲ್ನೋಟಕ್ಕೆ ನಾವು ಸುಂದರವಾಗಿ ಇರದಿದ್ದರೂ ಮೇಕಪ್ ಮಾಡಿ ಫೋಟೋ ತೆಗೆಯುವವರು ಛಾಯಾಗಾಹಕರು. ಫೋಟೋ, ವೀಡಿಯೋಗ್ರಾಫರ್ ವೃತ್ತಿ ಬಾಂಧವರು ನಿರೀಕ್ಷಿತ ಆರ್ಥಿಕ ಲಾಭ ಗಳಿಸುವುದು ಕಡಿಮೆ ಎಂದೂ ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಣ್ವಕುಪ್ಪೆ ಗವಿಮಠದ ಡಾ. ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ, 185 ವರ್ಷದಿಂದಲೂ ಛಾಯಾಗ್ರಹಣ ಇತ್ತು ಎಂಬುದೇ ಅಚ್ಚರಿಯ ವಿಚಾರ. ನಾಲ್ಕೈದು ತಲೆಮಾರಿನ ಪೂರ್ವಜರ ಇತಿಹಾಸವನ್ನು ಪೋಟೋಗಳ ಮೂಲಕ ನೆನಪಿಸಿಕೊಡುವವರೇ ಛಾಯಾಗ್ರಾಹಕರು ಎಂದು ಅಭಿಮಾನ ವ್ಯಕ್ತಪಡಿಸಿದರು.
25 ವರ್ಷದ ಹಿಂದಿನ ವ್ಯವಸ್ಥೆ ಈಗಿಲ್ಲ. ವಿದ್ಯೆ, ಹಣ, ದವಸಧಾನ್ಯದ ಕೊರತೆ ಇದ್ದರೂ ಅಂದಿನ ಜನರಲ್ಲಿ ಆರೋಗ್ಯ, ನೆಮ್ಮದಿ ಇತ್ತು. ಇಂದು ಇವರೆಡೂ ಮಾಯವಾಗಿವೆ. ಸಾತ್ವಿಕ ಆಹಾರ ವ್ಯವಸ್ಥೆ ಇಲ್ಲದ್ದರಿಂದಾಗಿ ಸಾಮಾಜಿಕವಾಗಿ ಈ ವ್ಯತ್ಯಾಸವಾಗಿದೆ ಎಂದು ಹೇಳಿದರು. ಯಾವ ಕಾಲದಲ್ಲಾದೂ ನಮ್ಮ ಸಾವು ಬರಬಹುದು. ಹಾಗಾಗಿ ಪ್ರತಿಯೊಬ್ಬರೂ ಧರ್ಮಮಾರ್ಗದಲ್ಲಿ ನಡೆಯಬೇಕು ಎಂದೂ ಕಿವಿಮಾತು ಹೇಳಿದರು.
ಪತ್ರಕರ್ತ ನಾಗರಾಜ ಬಡದಾಳ್ ಮಾತನಾಡಿ ಪತ್ರಕರ್ತರಷ್ಟೇ ಛಾಯಾಗ್ರಾಹಕರ ಬದುಕು ಸಂಕೀರ್ಣವಾಗಿದೆ. ಸೀಜನ್ ಹೊರತಾಗಿ ಉಳಿದ ದಿನಗಳಲ್ಲಿ ದುಡಿಮೆ ಕಷ್ಟಕರ. ಇಂದಿನ ಫೋಟೋಗ್ರಾಪರ್‌ಗಳಿಗೆ ಸಾಕಷ್ಟು ಅವಕಾಶಗಳಿವೆ. ನಿಮ್ಮ ವೃತ್ತಿಯಲ್ಲಿ ಸೃಜನಶೀಲತೆ ಉಳಿಸಿಕೊಳ್ಳಿ. ವೃತ್ತಿಗೌರವ ಕಾಪಾಡಿ. ದುಶ್ಚಟಗಳಿಗೆ ಬಲಿಯಾಗದೆ ನಿಮ್ಮ ಕುಟುಂಬದ ಕಡೆ ಗಮನ ನೀಡಿ ಎಂದು ಮನವಿ ಮಾಡಿದರು.
ಫೋಟೋಗ್ರಾಫರ್ಸ್ ಸಂಘದ ತಾಲೂಕು ಅಧ್ಯಕ್ಷ ಎಂ. ಮನು ಮಾತನಾಡಿ ಛಾಯಾಗ್ರಹಣ ಅಕಾಡೆಮಿ ಆಗಬೇಕು. ಛಾಯಾಗ್ರಾಹಕರಿಗೆ ಎಲ್ಲೆಡೆ ಶೇ.30ರಷ್ಟು ನಿವೇಶನ ಕಾಯ್ದಿರಿಸಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಕನ್ನಡ ಸಮರ ಸೇನೆ ರಾಜ್ಯಾಧ್ಯಕ್ಷ ಎಂ.ಎಸ್. ಸಿದ್ದೇಶ್ ಕೋಟಿಹಾಳ್, ಅನುಷ್ಠಾನ ಫೌಂಡೇಷನ್ ಸದಸ್ಯೆ ಎಸ್.ಟಿ.ಸುಷ್ಮಾ, ಬಿಜೆಪಿ ಮುಖಂಡ ಗುಮ್ಮನೂರು ಶ್ರೀನಿವಾಸ್, ಫೋಟೋಗ್ರಾಫರ್ಸ್ ಸಂಘದ ತಾಲೂಕು ಗೌರವಾಧ್ಯಕ್ಷ ಬಿ. ಮಂಜುನಾಥ, ಗ್ರಾಮಾಂತರ ಅಧ್ಯಕ್ಷ ರಾಜಶೇಖರ ಕೊಂಡಜ್ಜಿ, ಸಂತೋಷ್ ದೊಡ್ಮನಿ ಇತರರಿದ್ದರು. ಇದೇ ವೇಳೆ ಅತ್ಯುತ್ತಮ ಛಾಯಾಗ್ರಾಹಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.