

ದಾವಣಗೆರೆ: ವಿವಿಧ ಪಕ್ಷದಲ್ಲಿ ಗುರುತಿಸಿಕೊಂಡಿರುವ ಕುರುಬ ಸಮಾಜದ ಕಾರ್ಯಕರ್ತರನ್ನು ಎರಡನೇ ಹಂತದ ನಾಯಕರಾಗಿ ಬೆಳೆಸುವ ದಿಸೆಯಲ್ಲಿ ಹಾಲುಮತ ಮಹಾಸಭಾದಿಂದ ಅ.26ರಂದು ನಗರದ ಕುವೆಂಪು ಕನ್ನಡ ಭವನದಲ್ಲಿ ಅ.26ರಂದು ‘ನೀವೂ ನಾಯಕರಾಗಿ’ ಎಂಬ ರಾಜ್ಯ ಮಟ್ಟದ ಚಿಂತನ-ಮಂಥನ ಸಭೆ ನಡೆಯಲಿದೆ.
ಮುಂಬರುವ ತಾಪಂ, ಜಿಪಂ, ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಸ್ಪರ್ಧಾಕಾಂಕ್ಷಿಗಳ ವಿವರ ಕ್ರೋಡೀಕರಿಸಿ, ಟಿಕೆಟ್ ನೀಡುವಂತೆ ಆಯಾ ಪಕ್ಷದ ರಾಜ್ಯಾಧ್ಯಕ್ಷರಿಗೆ ಒತ್ತಾಯಿಸಲಾಗುವುದು. ಅಪೇಕ್ಷಿತರಿಗೆ ಚುನಾವಣಾ ತಯಾರಿ ಮಾಹಿತಿ ನೀಡಲಾಗುವುದು ಎಂದು ಹಾಲುಮತಾ ಮಹಾಸಭಾದ ರಾಜ್ಯ ಸಂಚಾಲಕ ರಾಜು ಮೌರ್ಯ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕುರುಬ ಸಮಾಜ ರಾಜಕೀಯ ಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ಗುರುತಿಸಿಕೊಂಡಿಲ್ಲ. ಸಿದ್ದರಾಮಯ್ಯ ನಂತರದಲ್ಲಿ 2ನೇ ಹಂತದ ನಾಯಕರ ಕೊರತೆ ನೀಗಬೇಕಿದೆ. ಹೀಗಾಗಿ ಸಾಮಾಜಿಕ ಜಾಲತಾಣ, ಕೃತಕ ಬುದ್ಧಿಮತ್ತೆ ಬಳಕೆ, ಕ್ಷೇತ್ರವಾರು ಸಮಸ್ಯೆಗಳು, ಮತದಾರರನ್ನು ತಲುಪುವ ಬಗೆ, ರಾಜಕೀಯ ವಿಶ್ಲೇಷಕರಿಂದ ಮಾಹಿತಿ ಕಾರ್ಯಕ್ರಮ, ನಾಯಕತ್ವ ಶಿಬಿರ, ಭಾಷಣ ಕಲೆ ಕಲಿಸುವ ಉದ್ದೇಶವಿದೆ ಎಂದರು.
ನಿಗಮ ಮಂಡಳಿ ಅಧ್ಯಕ್ಷರು, ಇತರರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ್, ವಿಜಯಪುರ ಮೇಯರ್ ಮಡಿವಾಳಪ್ಪ ಕರಡಿ, ನಿಕೇತ್‌ರಾಜ್ ಮೌರ್ಯ, ಜಿ.ಬಿ. ವಿನಯ್‌ಕುಮಾರ್, ಯಾದಿಗಿರಿಯ ಶರಣಪ್ಪ ಸಂಗಾಪುರ, ಎಂ. ಗಣೇಶ್, ಐಶ್ವರ್ಯ ಮಹದೇವ್, ಎಚ್.ಬಿ.ಮಂಜಪ್ಪ ಇತರರು ಪಾಲ್ಗೊಳ್ಳುವರು ಎಂದು ಮಾಹಿತಿ ನೀಡಿದರು.
ಬೆಳಗ್ಗೆ 10-30ರಿಂದ ಮಧ್ಯಾಹ್ನ 2-30ರವರೆಗೆ ಈ ವಿಚಾರಗೋಷ್ಠಿ ನಡೆಯಲಿದೆ. ಮಧ್ಯಾಹ್ನ 3ರ ನಂತರದಲ್ಲಿ ಕುರುಬರ ಎಸ್ಟಿ ಮೀಸಲಾತಿ ಕುರಿತು ಮಾಹಿತಿ ಜಾಗೃತಿ ಸಭೆ ನಡೆಯಲಿದೆ. ನಾಲ್ಕು ವಿಭಾಗಾವಾರು ಉದ್ದೇಶಿತ ಸಭೆಗಳ ಹಿನ್ನೆಲೆಯಲ್ಲಿ ಮಹಾಸಭಾದ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಗುಳಿ ಅಧ್ಯಕ್ಷತೆಯಲ್ಲಿ ಈ ಪೂರ್ವಭಾವಿ ಸಭೆ ಆಯೋಜಿಸಲಾಗಿದೆ ಎಂದರು.
ಕರ್ನಾಟಕದ ಕುರುಬರಿಗೆ ಎಸ್ಟಿ ಮೀಸಲಾತಿ ವಿಸ್ತರಿಸುವಂತೆ ಕಾಗಿನೆಲೆ ಸಂಸ್ಥಾನದ ಶ್ರೀಗಳ ನೇತೃತ್ವದಲ್ಲಿ 10 ವರ್ಷದ ನಿರಂತರ ಹೋರಾಟ, ಸರ್ಕಾರಗಳ ಜತೆಗಿನ ಮಾತುಕತೆಗಳಿಂದ ರಾಜ್ಯ ಸರ್ಕಾರದಿಂದ 2023ರಲ್ಲೇ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ.
1976, 1986, 1991ರಲ್ಲಿ ಮೀಸಲಾತಿ ಕೈತಪ್ಪಿದ್ದರ ಬಗ್ಗೆ ಹಾಗೂ ಪ್ರಸ್ತುತ ಆಗುತ್ತಿರುವ ಬೆಳವಣಿಗೆಗಗಳು, ಮುಂದಿನ ಪ್ರಕ್ರಿಯೆಗಳು ಹಾಗೂ ಹೋರಾಟದ ಬಗ್ಗೆ ಈ ಸಭೆಯಲ್ಲಿ ಚರ್ಚಿಸಲಾಗುತ್ತಿದೆ. ಸಮಾಜದ ಎಲ್ಲ ಸಂಘ ಸಂಸ್ಥೆಗಳು ಸಭೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಹಾಸಭಾ ಜಿಲ್ಲಾಧ್ಯಕ್ಷ ಸಿ. ವೀರಣ್ಣ, ಕಾರ್ಯಾಧ್ಯಕ್ಷ ಚಂದ್ರು ದೀಟೂರು, ಉಪಾಧ್ಯಕ್ಷ ಜಿ. ಷಣ್ಮುಖಪ್ಪ, ಕಾರ್ಯದರ್ಶಿ ಎಸ್.ಎಂ. ಸಿದ್ದಲಿಂಗಪ್ಪ, ಸಂಚಾಲಕ ಐ.ಎಂ.ಗಿರೀಶ್ ಇತರರಿದ್ದರು