ದಾವಣಗೆರೆಗೆ ಪ್ರತ್ಯೇಕ ಟರ್ಫ್ ಮ್ಯಾಟ್ ಸಂಸದೆ ಪ್ರಭಾ ಭರವಸೆ

1001273270.jpg
Published on

ದಾವಣಗೆರೆ: ದಾವಣಗೆರೆಯಲ್ಲಿ ಆಯೋಜಿಸುವ ಮುಂದಿನ ಖೋಖೋ ಪಂದ್ಯಾವಳಿಗಳಿಗೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ನೇತೃತ್ವದಲ್ಲಿ 10 ಲಕ್ಷ ರೂ. ವೆಚ್ಚದ ಪ್ರತ್ಯೇಕ ಟರ್ಫ್ ಮ್ಯಾಟ್ ವ್ಯವಸ್ಥೆ ಮಾಡುವುದಾಗಿ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಭರವಸೆ ನೀಡಿದರು.

ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ, ದಕ್ಷಿಣ ಭಾರತ ಮಟ್ಟದ 31ನೇ ಹಿರಿಯರ ಖೋ-ಖೋ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿ, ಟರ್ಫ್ ಮ್ಯಾಟನ್ನು ಸ್ಥಳೀಯ ಕ್ರೀಡಾಪಟುಗಳು, ತರಬೇತುದಾರರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಖೋ-ಖೋ ಭಾರತೀಯ ಸಾಂಪ್ರದಾಯಿಕ ಕ್ರೀಡೆಯಾಗಿದ್ದು 36 ರಾಷ್ಟ್ರಗಳು ಸದ್ಯಕ್ಕೆ ಇದನ್ನು ಆಡುತ್ತಿವೆ. ಇದರ ಮೂಲಕ ಅನೇಕ ಕ್ರೀಡಾಪಟುಗಳು ವೈದ್ಯಕೀಯ, ಇಂಜಿನಿಯರಿಂಗ್, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಪಡೆಯುತ್ತಿದ್ದಾರೆ ಎಂದರು.

ನವದೆಹಲಿಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಖೋಖೋ ವಿಶ್ವಕಪ್‌ನಲ್ಲಿ ಭಾರತ ಗೆಲುವು ಸಾಧಿಸಿ ವಿಶ್ವ ಮಟ್ಟದಲ್ಲಿ ಹೆಸರು ಮಾಡಿದೆ. ಚೈತ್ರಾ, ಗೌತಮ್ ಉತ್ತಮ ಪ್ರದರ್ಶನ ನೀಡಿ ಕರ್ನಾಟಕಕ್ಕೆ ಹೆಮ್ಮೆ ತಂದಿದ್ದಾರೆ ಎಂದು ಹೇಳಿದರು.

ಬೆಣ್ಣೆನಗರಿ ಮೊದಲ ಬಾರಿಗೆ ದಕ್ಷಿಣ ಭಾರತ ಮಟ್ಟದ ಖೋ-ಖೋ ಪಂದ್ಯಾವಳಿಯ ಆತಿಥ್ಯ ವಹಿಸಿದೆ. ಮುಂಬರುವ ಟೂರ್ನಿಗಳಲ್ಲಿ ಕ್ರೀಡಾಂಗಣದ ತುಂಬಾ ಪ್ರೇಕ್ಷಕರು ಹೆಚ್ಚಲಿ. ಜೀವನದಲ್ಲಿ ಶಿಕ್ಷಣದಷ್ಟೇ ಕ್ರೀಡೆಯೂ ಅತಿಮುಖ್ಯ. ಇದರಿಂದ ದೈಹಿಕ ಆರೋಗ್ಯ ಕಾಪಾಡಿಕೊಳ್ಳುವ ಜತೆಗೆ ಉತ್ತಮ ಮೌಲ್ಯಗಳ ಲಾಭವೂ ಸಿಗಲಿವೆ ಎಂದು ಹೇಳಿದರು.

ದೆಹಲಿಯ ಕೆಕೆಎಫ್‌ಎ ಆಡಳಿತಾಧಿಕಾರಿ ಎಂ.ಎಸ್. ತ್ಯಾಗಿ ಮಾತನಾಡಿ ಖೋಖೋ ಇದೊಂದು ಜಾಣ್ಮೆಯ ಆಟವಾಗಿದೆ. ವಿಶ್ವಕಪ್‌ನಲ್ಲಿ ಭಾರತ ಜಯ ಗಳಿಸಿ ಗಮನ ಸೆಳೆದಿದೆ. ನವೆಂಬರ್ 29ರಿಂದ ಡಿ.2ರವರೆಗೆ ಅಲ್ಟಿಮೇಟ್ ಖೋಖೋ ಲೀಗ್ ಪಂದ್ಯಾವಳಿ ನಡೆಯಲಿದೆ. ಕಾಮನ್‌ವೆಲ್ತ್ ಕೂಟಕ್ಕೂ ಇದು ಪ್ರವೇಶ ಪಡೆಯುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಪಂದ್ಯಾವಳಿಗೆ ಸಹಕಾರ ನೀಡಿರುವ ಸಿದ್ಧಗಂಗಾ ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿಸೋಜ ಮಾತನಾಡಿ, ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಅವರು ದೆಹಲಿ ಯಾತ್ರೆ ಮಾಡಿಸುತ್ತಿದ್ದು, ಇದರಲ್ಲಿ ಸಿದ್ಧಗಂಗಾ ಶಾಲೆಯ ನಾಲ್ವರು ಮಕ್ಕಳಿದ್ದಾರೆ ಎಂದರು.

ದಕ್ಷಿಣ ಭಾರತ ಖೋ-ಖೋ ಕಮಿಟಿ, ಕರ್ನಾಟಕ ಹಾಗೂ ದಾವಣಗೆರೆ ಜಿಲ್ಲಾ ಖೋ-ಖೋ ಸಂಸ್ಥೆಗಳ ಸಹಯೋಗ ಹಾಗೂ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ದೂಡಾ ಸಹಕಾರದೊಂದಿಗೆ ಪಂದ್ಯಾವಳಿ ನಡೆಯುತ್ತಿದ್ದು ಕರ್ನಾಟಕ, ತಮಿಳುನಾಡು, ಆಂದ್ರಪ್ರದೇಶ, ಕೇರಳ, ಪುದುಚೇರಿ ಹಾಗೂ ತೆಲಂಗಾಣ ರಾಜ್ಯದ ಒಟದ್ಟು 90 ಕ್ರೀಡಾಪಟುಗಳು ಭಾಗಿಯಾಗಿದ್ದಾರೆ.

ದಕ್ಷಿಣ ಭಾರತ ಖೋಖೋ ಕಮಿಟಿ ಕನ್ವೀನಿಯರ್ ನೆಲ್ಸನ್ ಸ್ಯಾಮುಯೆಲ್, ಕರ್ನಾಟಕ ಖೋ-ಖೋ ಸಂಸ್ಥೆ ಅಧ್ಯಕ್ಷ ಲೋಕೇಶ್ವರ, ಜಿಲ್ಲಾ ಖೋ-ಖೋ ಸಂಸ್ಥೆ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಕೆ.ಎಸ್.ಕೆ.ಕೆ.ಎ. ಉಪಾಧ್ಯಕ್ಷ ಸೀತರಾಮ ರೆಡ್ಡಿ, ದಕ್ಷಿಣ ಭಾರತ ಖೋ-ಖೋ ಕಮಿಟಿ ಚೇರ್ಮನ್ ಜಂಗರಾಘವ ರೆಡ್ಡಿ, ಅರ್ಜುನ ಪ್ರಶಸ್ತಿ ವಿಜೇತೆ ಶೋಭಾ ನಾರಾಯಣ, ರಾಜ್ಯ ಸಂಘದ ಕಾರ್ಯದರ್ಶಿ ಜಿ.ರಾಮಲಿಂಗಪ್ಪ, ಯುವಜನ ಸಬಲೀಕರಣ ಇಲಾಖೆ ಅಧಿಕಾರಿ ಶ್ರೀಹರ್ಷ, ಜಯರಾಂ, ಮಲ್ಲಿಕಾರ್ಜುನ್, ವೆಂಕಟರಾಜ್, ನಟರಾಜ್, ಕರಿಬಸಪ್ಪ, ರಘು, ಎನ್. ಕೆ. ಕೊಟ್ರೇಶ್, ಗೋಪಾಲಕೃಷ್ಣ, ಸಿದ್ದೇಶ್, ಲಿಂಗರಾಜ್, ಚಂದ್ರಶೇಖರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net