

ದಾವಣಗೆರೆ: ಬೆಣ್ಣೆನಗರಿಯಲ್ಲಿ ಶುಕ್ರವಾರ ಶುಭಾರಂಭವಾದ ದಕ್ಷಿಣ ಭಾರತ ಮಟ್ಟದ 31ನೇ ಹಿರಿಯರ ಖೋ-ಖೋ ಪಂದ್ಯಾವಳಿಯಲ್ಲಿ ಆತಿಥೇಯ ಕರ್ನಾಟಕದ ಪುರುಷರು, ಮಹಿಳಾ ತಂಡಗಳು ಮುನ್ನಡೆ ಸಾಧಿಸಿವೆ.
ಜಿಲ್ಲಾ ಕ್ರೀಡಾಂಗಣದಲ್ಲಿ ಸಂಜೆ ನಿಗದಿಯಾಗಿದ್ದ ಹೊನಲು ಬೆಳಕಿನ ಪಂದ್ಯಾಟದಲ್ಲಿ ಕರ್ನಾಟಕ ತಂಡದ ಮಹಿಳೆಯರು ಏಕಪಕ್ಷೀಯ ಪ್ರದರ್ಶನ (41-02) ದೊಂದಿಗೆ ಆಂಧ್ರ ತಂಡವನ್ನು ಮಣಿಸಿ ಗೆಲುವಿನ ಹೊನಲು ಬೆಳಗಿಸಿದರು.
ವಿಶ್ವಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಕರ್ನಾಟಕದ ಉದಯೋನ್ಮುಖ ಆಟಗಾರ್ತಿ ಬಿ.ಚೈತ್ರಾ ನಾಲ್ಕು ನಿಮಿಷಗಳ ಕಾಲ ರಕ್ಷಣಾತ್ಮಕ ಆಟದೊಂದಿಗೆ ಗಮನ ಸೆಳೆದರು.
ಸಹ ಆಟಗಾರ್ತಿಯರಾದ ದಿವ್ಯಾ, ಮೋನಿಕಾ ಹಿಡಿತಗಾರ್ತಿಯರಾಗಿ ಉತ್ತಮ ಪ್ರದರ್ಶನ ನೀಡಿ ತಂಡದ ಎರಡನೇ ಗೆಲುವಿಗೆ ಕಾರಣರಾದರು. ಇದೇ ಮಹಿಳಾ ಪಡೆ ಬೆಳಗ್ಗೆ ನಡೆದ ಮೊದಲ ಪಂದ್ಯದಲ್ಲೂ ತೆಲಂಗಾಣ ತಂಡವನ್ನು 40-06 ಪಾಯಿಂಟ್ಸ್ ಅಂತರದಲ್ಲಿ ಮಣಿಸಿತ್ತು.
ಕರ್ನಾಟಕದ ಪುರುಷರು ಮೊದಲ ಪಂದ್ಯದಲ್ಲಿ ತೆಲಂಗಾಣ ತಂಡವನ್ನು 16-23 ಪಾಯಿಂಟ್ಸ್ ಅಂತರದಲ್ಲಿ ಮಣಿಸಿದರು. ಕರ್ನಾಟಕ ತಂಡದ ಮರಿಯಪ್ಪ ಮೂರು ನಿಮಿಷದ ಓಟ ಸಹಿತ ರಕ್ಷಣಾತ್ಮಕ ಆಟವಾಡಿದರು. ಆದಿತ್ಯ ಪಾಟೀಲ್, ಐಮನ್, ಸುಹಾಸ್ ಕೂಡ ಉತ್ತಮ ಪ್ರದರ್ಶನ ನೀಡಿದರು. ಹಿಡಿತಗಾರರಾಗಿ ಶ್ರೀನಿವಾಸ್, ಆದಿತ್ಯ, ಮಹ್ಮದ್ ತಾಸೀನ್ ಗಮನ ಸೆಳೆದರು. ಆಂಧ್ರದೊಂದಿಗೆ ಕರ್ನಾಟಕ ತಂಡದ ಎರಡನೇ ಪಂದ್ಯ ಮಳೆಯಿಂದಾಗಿ ತಡವಾಗಿ ಶುರುವಾಯಿತು.
ಕೇರಳ ಮತ್ತು ತಮಿಳುನಾಡು ಮಹಿಳಾ ಪಂದ್ಯಾಟ ರೋಚಕತೆಗೆ ಸಾಕ್ಷಿಯಾಗಿತ್ತು. ಸಮಬಲದ ಪೈಪೋಟಿ ನಡುವೆಯೂ ಗೆಲುವು (27-21) ಕೇರಳದ ಪಾಲಾಯಿತು. ಈ ತಂಡ ಪುದುಚೆರಿ ವಿರುದ್ಧದ ಮತ್ತೊಂದು ಪಂದ್ಯ(52-08)ದಲ್ಲೂ ಗೆಲುವು ಪಡೆದುಕೊಂಡಿತು.
ಮಹಿಳಾ ವಿಭಾಗದಲ್ಲಿ ಆಂಧ್ರ ಪ್ರದೇಶ, ಎದುರಾಳಿ ಪುದುಚೆರಿಯನ್ನು (32-04) ಸೋಲಿಸಿದರೆ, ತಮಿಳುನಾಡು ತೆಲಂಗಾಣವನ್ನು (09-28) ಪರಾಭವಗೊಳಿಸಿತು.
ಪುರುಷರ ವಿಭಾಗದಲ್ಲಿ ಕೇರಳ, ತಮಿಳುನಾಡನ್ನು 41-25 ಪಾಯಿಂಟ್ಸ್‌ನಿಂದ ಬಗ್ಗುಬಡಿಯಿತು. ತೆಲಂಗಾಣ- ತಮಿಳುನಾಡಿನ ಸಮಬಲದ ಹೋರಾಟದಲ್ಲಿ ಅಂತಿಮವಾಗಿ ತೆಲಂಗಾಣ (30-27) ವಿಜಯ ಸಾಧಿಸಿತು.
ದಕ್ಷಿಣ ಭಾರತ ಖೋ-ಖೋ ಕಮಿಟಿ, ಕರ್ನಾಟಕ ಹಾಗೂ ಜಿಲ್ಲಾ ಖೋ-ಖೋ ಸಂಸ್ಥೆಗಳ ಸಹಯೋಗದಲ್ಲಿ ಟೂರ್ನಿ ಆರಂಭವಾಗಿದ್ದು, ಆರು ರಾಜ್ಯಗಳ 90 ಪಟುಗಳು ಭಾಗಿಯಾಗಿದ್ದಾರೆ. ಮೊದಲ ದಿನ ಮಳೆಯ ಸಿಂಚನ, ಮೋಡ ಕವಿದ ವಾತಾವರಣದ ನಡುವೆಯೂ ಮೂರು ಅಂಕಣಗಳಲ್ಲಿ ರೌಂಡ್ ರಾಬಿನ್ ಮಾದರಿ, ರಾಷ್ಟ್ರೀಯ ಖೋ-ಖೋ ಫೆಡರೇಷನ್‌ನ ಹೊಸ ನಿಯಮದನ್ವಯ ಪಂದ್ಯಗಳು ನಡೆದವು.
----