

ದಾವಣಗೆರೆ: ತ್ಯಾಜ್ಯ ನಿರ್ವಹಣೆ, ಮಳೆ ನೀರು ಕೊಯ್ಲು ಮೊದಲಾದ ಪರಿಸರ ಪೂರಕ ಚಟುವಟಿಕೆಗಳೊಂದಿಗೆ ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಮಹಿಳಾ ಸಂಘಟನೆಗಳು ಕೈಜೋಡಿಸಬೇಕು ಎಂದು ಹಿರಿಯ ಪ್ರಸೂತಿ ತಜ್ಞೆ ಡಾ. ಶಾಂತಾ ಭಟ್ ಹೇಳಿದರು.
ನಗರದ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕೇರಳ ಸಮಾಜದ ಮಹಿಳಾ ಘಟಕ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಕಳೆದ 25 ವರ್ಷದಲ್ಲಿ ಪರಿಸರವನ್ನು ನಮ್ಮ ಸ್ವಾರ್ಥದ ಕಾರಣಕ್ಕೆ ಹಾಳು ಮಾಡಿದ್ದೇವೆ. ಮಹಿಳೆಯರು ಮನೆಗೆ ಸೀಮಿತವಾದ ಮಾನಸಿಕ ಸ್ಥಿತಿಯಿಂದ ಹೊರಬಂದು ಊರು ಹಾಗೂ ದೇಶ ನಮ್ಮದು ಎಂಬ ಧ್ಯೇಯ ಇರಿಸಿಕೊಂಡು ಸಾಂಘಿಕವಾಗಿ ಕೆಲಸ ಮಾಡಬೇಕು. ಸಮಾಜಮುಖಿ ಕೆಲಸಗಳಲ್ಲಿ ಪರಿಸರ ಪೂರಕ ಚಿಂತನೆಗಳಿರಲಿ ಎಂದು ಕಿವಿಮಾತು ಹೇಳಿದರು.
ಕುಟುಂಬದ ಆರೋಗ್ಯ ಕಾಪಾಡಿಕೊಂಡರೆ ಸಮಾಜ, ದೇಶವೂ ಆರೋಗ್ಯಯುತವಾಗಲಿದೆ. ಗಿಡಮರಗಳ ಪಾಲನೆ, ಮನೆಯಲ್ಲೇ ಪೌಷ್ಟಿಕ ತೋಟ ನಿರ್ಮಾಣ, ಜೇನು ಸಾಕಣೆ ಮೊದಲಾದ ಕಾರ್ಯದಲ್ಲಿ ಗೃಹಿಣಿಯರು ತೊಡಗಬೇಕು. ಇದಕ್ಕೆ ಪೂರಕವಾಗಿ ಪರಿವರ್ತನಾ ವೇದಿಕೆ ಪೂರಕ ಮಾರ್ಗದರ್ಶನ ನೀಡಲಿದೆ ಎಂದು ತಿಳಿಸಿದರು.
ಮಹಿಳೆಯರಲ್ಲಿ ಕುಟುಂಬ ನಿರ್ವಹಣೆ ಜತೆಗೆ ವೃತ್ತಿಯಲ್ಲಿ ಅಚ್ಚುಕಟ್ಟಾದ ಸ್ಥಿತಿಗೆ ತಲುಪುವ ಹಂಬಲ ಬೇಕು. ಮಕ್ಕಳನ್ನು ನಾಗರಿಕರನ್ನಾಗಿ ಮಾಡಿದರೆ ನಾಗರಿಕ ಸಮಾಜ ತಂತಾನೇ ಸೃಷ್ಟಿಯಾಗಲಿದೆ. ಕುಟುಂಬವನ್ನು ನಿರ್ಲಕ್ಷಿಸಿ ಸಮಾಜ, ದೇಶದ ಪ್ರಗತಿ ಕಾಣಲು ಸಾಧ್ಯವಿಲ್ಲ. ಇದಕ್ಕಾಗಿ ಸಂಘಟಿತರಾಗಬೇಕು. ಮಾನಸಿಕ ದೃಢತೆ ಹಾಗೂ ಕೆಲ ವಲಯಗಳಲ್ಲಿ ತ್ಯಾಗ ಮಾಡಲೂ ಮಹಿಳೆ ಸಿದ್ಧರಾಗಬೇಕು ಎಂದರು.
ಜಿಲ್ಲಾ ಜಾಗೃತಿ ಮತ್ತು ನಿರ್ವಹಣಾ ಸಮಿತಿ ಸದಸ್ಯ ಡಾ. ಪಿ.ಎಸ್. ಅರವಿಂದನ್ ಮಾತನಾಡಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಇಂದು ಹೆಣ್ಣುಮಕ್ಕಳು ಮೇಲುಗೈ ಸಾಧಿಸುತ್ತಿದ್ದಾರೆ. ಸಂಸಾರ ನಿರ್ವಹಣೆ ಜತೆ ಕೆಲಸ ಮಾಡುತ್ತಿರುವ ಮಹಿಳೆಯರಲ್ಲಿ ವಿಶೇಷ ಶಕ್ತಿ ಇದೆ. ಉದ್ಯೋಗಸ್ಥ ಮತ್ತು ಗೃಹಸ್ಥ ಮಹಿಳೆಯರಲ್ಲೂ ಸಮಾನ ಸಮಸ್ಯೆಗಳಿವೆ ಎಂದು ಹೇಳಿದರು.
ಹೆತ್ತ ತಾಯಿಯನು ವೃದ್ದಾಪ್ಯ ಕಾಲದಲ್ಲಿ ಉಪವಾಸಕ್ಕೆ ತಳ್ಳದೆ ರಕ್ಷಣೆ ಮಾಡುವುದೇ ನಿಜವಾದ ತಾಯಂದಿರ ದಿನವಾಗಿದೆ. ಹೆತ್ತವರನ್ನು ಅಗೌರವದಿಮದ ಕಾಣಬಾರದು ಎಂದ ಅವರು, ಮಹಿಳೆಯಲ್ಲಿ ಅಧಿಕ ರಕ್ತದೊತ್ತಡ, ಗಾಬರಿ, ಕೂದಲು ಉದುರುವಿಕೆ ಮೊದಲಾದ ದೈಹಿಕ ಸಮಸ್ಯೆಗಳು ಕಂಡುಬರಲಿವೆ. ಹೀಗಾಗಿ ಪರಿಸರ, ಆರೋಗ್ಯದ ಜತೆಗೆ ಆಪ್ತ ಸಮಾಲೋಚನೆಯ ವಿಭಾಗವನ್ನೂ ತೆರೆಯಬೇಕು ಎಂದು ಸಲಹೆ ನೀಡಿದರು.
ಚಿತ್ರ ಕಲಾವಿದೆ ಕೀರ್ತನಾ ಆಲ್ಫೋನ್ಸಾ ಪರವಾಗಿ ಅವರ ತಾಯಿಯನ್ನು ಹಾಗೂ ಕರಾಟೆ ಮಾಸ್ಟರ್ ಕೆ.ಪಿ.ಜೋಸ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕೇರಳ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಪ್ರಸನ್ನ, ಕಾರ್ಯದರ್ಶಿಯಾಗಿ ಸೀಮಾ ಪ್ರಿಯ, ಪುರುಷರ ವಿಭಾಗದ ಅಧ್ಯಕ್ಷರಾಗಿ ಪವಿತ್ರನ್ ಕಾರ್ಯದರ್ಶಿಯಾಗಿ ಮಣಿಕುಟ್ಟನ್ ಅಧಿಕಾರ ವಹಿಸಿಕೊಂಡರು.