ಇಂಗುಗುಂಡಿ, ನೆಡುತೋಪಲ್ಲಿ ಕೋಟಿ ಲೂಟಿ   ಅರಣ್ಯ ಇಲಾಖೆ ವಿರುದ್ಧ ಶಾಸಕ ಬಸವಂತಪ್ಪ ಆಕ್ರೋಶ

1000311897_20240814001328291.jpg
Published on

ದಾವಣಗೆರೆ: ನರೇಗಾ ಯೋಜನೆಯಡಿ ಸಾಮಾಜಿಕ ಅರಣ್ಯ ಇಲಾಖೆಯಿಂದ ಕೋಟ್ಯಂತರ ರೂ. ಅವ್ಯವಹಾರ ನಡೆದಿದೆ. ಅರಣ್ಯಪ್ರದೇಶದಲ್ಲಿ ಇಂಗುಗುಂಡಿ ನಿರ್ಮಾಣ, ರಸ್ತೆ ಬದಿ ಅರಣ್ಯೀಕರಣ ಕಾಮಗಾರಿ ದಾಖಲಾತಿಗಳಲ್ಲಿ ಉಳಿದಿವೆ ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಕಿಡಿ ಕಾರಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ದಾವಣಗೆರೆ ತಾಪಂ ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿ, ಗುಡ್ಡ ಪ್ರದೇಶಗಳಲ್ಲಿ ಇಂಗುಗುಂಡಿ ನಿರ್ಮಿಸಿದರೆ ಯಾರ ಕಣ್ಣಿಗೂ ಕಾಣುವುದಿಲ್ಲ ಎಂಬ ಮನಸ್ಥಿತಿ ಅಧಿಕಾರಿಗಳಲ್ಲಿ ಇದ್ದಂತಿದೆ. ತಲಾ ಇಂಗುಗುಂಡಿಗೆ 10 ಲಕ್ಷ ರೂ. ಬಳಸಲಾಗಿದೆ. ಮೂರು ವರ್ಷದಲ್ಲಿ ಎಷ್ಟು ಕಾಮಗಾರಿ ನಡೆದಿವೆ ಎಂಬುದು ನಿಗೂಢವಾಗಿದೆ ಎಂದು ತರಾಟೆಗೆ ತೆಗೆದುಕೊಂಡರು.
ಹೆಬ್ಬಾಳು, ಗುಡಾಳು, ಹುಲಿಕಟ್ಟೆ, ಬಾಡಾ, ನರಗನಹಳ್ಳಿ, ದೊಡ್ಡಬಾತಿ ಮೊದಲಾದ ಪಂಚಾಯಿತಿಗಳಲ್ಲಿ ಈ ಅವ್ಯವಹಾರ ನಡೆದಿದೆ. ರಸ್ತೆಬದಿ ನೆಡುತೋಪು ಹೆಸರಲ್ಲಿ 10 ಸಾವಿರ ಗುಂಡಿ ತೋಡಿರುವ ದಾಖಲಾತಿ ಇದ್ದರೂ ಅಷ್ಟು ಸಸಿಗಳು ಎಲ್ಲಿವೆ? ಕೆಲ ಅಧಿಕಾರಿಗಳು ೀ ಹಗರಣದಲ್ಲಿ ಶಾಮೀಲಾಗಿರುವ ಶಂಕೆ ಇದೆ. ಸ್ಥಳ ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮಕ್ಕೆ ನಿರ್ಧರಿಸಲಾಗುವುದು ಎಂದು ಶಾಸಕರು ತಿಳಿಸಿದರು.

ಮೋಟಾರ್ ಇದೆ ಟಿಸಿ ಇಲ್ಲ!
ಗಂಗಾ ಕಲ್ಯಾಣ ಯೋಜನೆಯಡಿ ಕಂದಗಲ್‌ನ ಫಲಾನುಭವಿಯೊಬ್ಬರ ಜಮೀನಿನಲ್ಲಿ ಕೊಳವೆಬಾವಿ ಕೊರೆಸಿದ್ದರೂ ಹೊಸ ವಿದ್ಯುತ್ ಪರಿವರ್ತಕದ ಹೆಸರಲ್ಲಿ 50 ಸಾವಿರ ರೂ. ಹಣ ಪಡೆದು ಹಳೆಯ ಟಿಸಿ ನೀಡಲಾಗಿದೆ.
ಹುಲಿಕಟ್ಟೆಯ ರೈತರೊಬ್ಬರು 3 ವರ್ಷದ ಹಿಂದೆ ಬೋರ್‌ವೆಲ್ ಕೊರೆಸಿಕೊಂಡಿದ್ದು ಮೋಟಾರ್ ಪಂಪ್ ನೀಡಿರುವ ಬೆಸ್ಕಾಂ ಇಲಾಖೆ ಟಿಸಿ ಸಂಪರ್ಕ ಕಲ್ಪಿಸದೆ ಅಲೆದಾಡಿಸುತ್ತಿದೆ. ಅವರ ಹೆಸರಲ್ಲಿ ಬಂದ ವಿದ್ಯುತ್ ಪರಿವರ್ತಕ ಎಲ್ಲಿ ಹೋಯಿತು? ಎಂದು ಶಾಸಕರು ಪ್ರಶ್ನಿಸಿದರು. ಪರಿಶೀಲನೆ ನಡೆಸುವುದಾಗಿ ಬೆಸ್ಕಾಂ ಅಧಿಕಾರಿ ತಿಳಿಸಿದರು.
ನನ್ನ ಗಮನಕ್ಕೆ ತರದೆ ಕೆಲವು ನಿಗಮದ ಅಧಿಕಾರಿಗಳೇ ಸೌಲಭ್ಯಗಳ ವಿತರಿಸುತ್ತಿದ್ದಾರೆಂದು ಶಾಸಕರು ಅಸಮಾಧಾನ ಹೊರಹಾಕಿದರು. ಸಿದ್ಧನೂರಿಗೆ ಬಸ್ ಸೌಕರ್ಯವಿಲ್ಲದ್ದರಿಂದ ರಾತ್ರಿ ವೇಳೆ ನಡೆದುಹೋಗುತ್ತಿದ್ದ ಇಬ್ಬರು ಮಕ್ಕಳು ಅಪಘಾತದಲ್ಲಿ ಸಾವಿಗೀಡಾದರು. ಮಕ್ಕಳು, ಗ್ರಾಮಸ್ಥರಿಗಾಗಿ ಕರೊನಾ ಪೂರ್ವದಲ್ಲಿದ್ದ ಬಸ್ ಮಾರ್ಗಗಳನ್ನು ಮುಂದುವರಿಸಿ. ಹಳ್ಳಿಗಳಲ್ಲಿ ಅಕ್ರಮ ಮದ್ಯದ ಹಾವಳಿ ಹೆಚ್ಚಿದೆ. ಅಬಕಾರಿ ಅಧಿಕಾರಿಗಳು ದಾಳಿ ನಡೆಸಬೇಕು ಎಂದೂ ಸೂಚಿಸಿದರು.
ಕಗ್ಗಂಟಾದ ಜೆಜೆಎಂ
ಜಲಜೀವನ ಮೀಷನ್ ಯೋಜನೆಯಡಿ ಕಾಮಗಾರಿ ನಡೆದರೂ ಕೆಲ ಪಂಚಾಯ್ತಿ ಅಧ್ಯಕ್ಷರು, ಪಿಡಿಒಗೆ ಗುತ್ತಿಗೆದಾರರು ಮಾಹಿತಿ ನೀಡಿಲ್ಲ. ಹೊಸದಾಗಿ ನಿರ್ಮಾಣವಾದ ನೀರಿನ ಟ್ಯಾಂಕ್ ಸೋರುತ್ತಿದೆ. ಕೆಲವೆಡೆ  ಕಾಮಗಾರಿ ಸಮರ್ಪಕವಾಗಿಲ್ಲ ಎಂಬ ದೂರುಗಳಿಗೆ ಸಭೆ ಸಾಕ್ಷಿಯಾಯಿತು.
ಕೆಲವೆಡೆ ಎಚ್‌ಡಿ ಪೈಪ್‌ಗಳು ಹಾನಿಯಾಗಿರುವ ಕಡೆಗಳಲ್ಲಿ ಹೀಟಿಂಗ್ ಯಂತ್ರದ ಮೂಲಕ ದುರಸ್ತಿ ಮಾಡಬೇಕಿದೆ. ಪ್ರತಿ ಪಂಚಾಯ್ತಿಗೂ ಈ ಯಂತ್ರ ಅಗತ್ಯವಿದೆ ಎಂದು ಅಧಿಕಾರಿಗಳು ತಿಳಿಸಿದರು. ಜೆಜೆಎಂ ಯೋಜನೆಯಡಿ ಹೆಚ್ಚುವರಿ ಯೋಜನೆಗಳಿದ್ದಲ್ಲಿ ನೀಡುವಂತೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಈ ಬಗ್ಗೆ ಪ್ರಸ್ತಾಪಿಸುವುದಾಗಿ ಶಾಸಕರು ಭರವಸೆ ನೀಡಿದರು.
ಕೃಷಿಹೊಂಡಕ್ಕೆ ಆದ್ಯತೆ ನೀಡಿ
ಕೃಷಿಹೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ಕೂಸು. ಹಿಂದಿನ ಸರ್ಕಾರ ಸ್ಥಗಿತಗೊಳಿಸಿದ್ದ ಯೋಜನೆಯನ್ನು ಈಗಿನ ಸಿಎಂ ಮರು ಜಾರಿಗೊಳಿಸಿದ್ದಾರೆ. ನೀರಿನ ಸಂರಕ್ಷಣೆಗಾಗಿ ಕೃಷಿ ಹೊಂಡಗಳ ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಎಂದು ಶಾಸಕರು ಕೃಷಿ, ತೋಟಗಾರಿಕೆ ಅಧಿಕಾರಿಗಳಿಗೆ ಸೂಚಿಸಿದರು. ಮಳೆಯಾಗದ ಕಡೆ ನಿಗಾವಹಿಸುವಂತೆ ಆಡಳಿತಾಧಿಕಾರಿ ಎಲ್.ಎ.ಕೃಷ್ಣಾನಾಯ್ಕ ಹೇಳಿದರು.
ತಾಲೂಕಿನಲ್ಲಿ ಪ್ಯಾಕ್‌ಹೌಸ್ ಘಟಕಗಳಿಗೆ ಹೆಚ್ಚಿನ ಬೇಡಿಕೆ ಇದೆ. ತಾಲೂಕಿಗೆ ಕೇವಲ ಐದಕ್ಕೆ ಗುರಿ ನೀಡಲಾಗಿದೆ. ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಇದನ್ನು ಹೆಚ್ಚಿಸಬೇಕು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ಮನವಿ ಮಾಡಿದರು.
ಸರ್ಕಾರಿ ಶಾಲೆಗಳನ್ನು ಉಳಿಸಿ
ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದೆ. ಶಿಕ್ಷಣಾಧಿಕಾರಿಗಳು ನಿಯಮಿತವಾಗಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿಲ್ಲ. ಇದರಿಂದ ಶಿಕ್ಷಣ ಕುಂಠಿತವಾಗಲಿದೆ. ನಿರಂತರ ಭೇಟಿಯೊಂದಿಗೆ ಸರ್ಕಾರಿ ಶಾಲೆಗಳನ್ನು ಉಳಿಸಿ ಎಂದು ಶಾಸಕರು ಸೂಚಿಸಿದರು. ಕೆಲವೆಡೆ ಶಿಕ್ಷಕರು ಬೆಳಗ್ಗೆ- ಮಧ್ಯಾಹ್ನ ಎರಡೂ ಅವಧಿಯ ಹಾಜರಾತಿ ಒಮ್ಮೆಗೆ ಹಾಕಿದ ನಿದರ್ಶನಗಳಿವೆ ಎಂದೂ ತಹಸೀಲ್ದಾರ್ ಡಾ.ಬಿ.ಎನ್. ಅಶ್ವಥ್ ದೂರಿದರು.
ದಾವಣಗೆರೆ ದಕ್ಷಿಣ ವಲಯದಲ್ಲಿ ಅತಿಥಿ ಶಿಕ್ಷಕರನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ ಎಂದು ದೂರಿದ ಶಾಸಕರು, ದಾವಣಗೆರೆ ಉತ್ತರ ವಲಯದ ಬಿಇಒ ಬದಲಿಗೆ ಕೆಳ ಹಂತದ ಸಿಬ್ಬಂದಿ ಸಭೆಗೆ ಹಾಜರಾಗಿದ್ದಕ್ಕೆ ಬೇಸರ ವ್ಯಕ್ತಪಡಿಸಿದರು.
ಅಧಿಕಾರಿಗಳಿಗೆ ನೋಟಿಸ್
ದಾವಣಗೆರೆ ಉತ್ತರ, ದಕ್ಷಿಣ ವಲಯದ ಬಿಇಒ, ಬಿಸಿಎಂ, ಬೆಸ್ಕಾಂ ದಾವಣಗೆರೆ ಉಪ ವಿಭಾಗ, ಗ್ರಾಮೀಣ ನೀರು ಪೂರೈಕೆ ವಿಭಾಗದ ಅಧಿಕಾರಿಗಳು ಅನುಪಾಲನಾ ವರದಿ ನೀಡದ್ದಕ್ಕೆ ಶಾಸಕರು ಕಿಡಿ ಕಾರಿದರು. ಈ ಬಾರಿ ವಿನಾಯಿತಿ ನೀಡಲಾಗಿದ್ದು ಮುಂದಿನ ಸಲ ಕ್ರಮ ಅನಿವಾರ್ಯವಾಗಲಿದೆ ಎಂದು ಆಡಳಿತಾಧಿಕಾರಿ ಹೇಳಿದರು. ಸಭೆಗೆ ಗೈರಾಗಿದ್ದ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿಗೆ ಶೋಕಾಸ್ ನೋಟಿಸ್ ನೀಡುವುದಾಗಿ ಇಒ ರಾಮಭೋವಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net