ಮಹಿಳೆಯರೇ ಎಳೆದರು ಕರಿಬಸಜ್ಜಯ್ಯನ ರಥವ..

pixlr_20241201123740468.jpg
Published on

ದಾವಣಗೆರೆ: ಹೊರವಲಯದ ಯರಗುಂಟೆ ಕ್ಷೇತ್ರದ ಶ್ರೀ ಗುರು ಕರಿಬಸವೇಶ್ವರ ಸ್ವಾಮಿ ರಥೋತ್ಸವ, ಶನಿವಾರ ಸಾಂಗವಾಗಿ ನೆರವೇರಿತು. ಪ್ರತಿವರ್ಷದ ವಾಡಿಕೆಯಂತೆ ಮಹಿಳೆಯರೇ ತೇರು ಎಳೆದು ಅಜ್ಜಯ್ಯನಿಗೆ ಭಕ್ತಿ ಸಲ್ಲಿಸಿದರು.
ಜಮಾಯಿಸಿದ್ದ ನೂರಾರು ಮಹಿಳೆಯರು ಹೂವಿನಲಂಕೃತ ತೇರಿನತ್ತ ಕೈಮುಗಿದರು. ತಮ್ಮ ಇಷ್ಟಾರ್ಥ ನೆರವೇರಿಸುವಂತೆ ಪ್ರಾರ್ಥನೆ ಮಾಡಿಕೊಂಡರು. ನಂತರ ಸಾಲಲ್ಲಿ ನಿಂತು ರಥದ ಹಗ್ಗ ಎಳೆದರು. ಪುರುಷರು ಸಹಕಾರ ನೀಡಿದರು.
ಕರಿಬಸವೇಶ್ವರ ಸ್ವಾಮಿ ಗದ್ದಿಗೆ ಮಠದ ಆವರಣದಿಂದ ಹೊರಟ ರಥ, ಅನತಿ ದೂರದವರೆಗೆ ಸಾಗಿ, ಅದೇ ದಾರಿಯಲ್ಲಿ ಹಿಂತಿರುಗಿ ಸ್ವಸ್ಥಾನಕ್ಕೆ ಮರಳಿತು. ಸಮಾಳ, ತಮಟೆ ಸದ್ದು, ವೀರಗಾಸೆ ತಂಡಗಳು ರಥೋತ್ಸವಕ್ಕೆ ಮೆರುಗು ನೀಡಿದವು.
ರಥೋತ್ಸವದ ಆರಂಭದಲ್ಲಿ ಮುಕ್ತಿಬಾವುಟ, ಹೂವಿನಹಾರ, ಈಡುಗಾಯಿಗಳ ಹರಾಜು ಪ್ರಕ್ರಿಯೆ ನಡೆಸಲಾಯಿತು. ದಾವಣಗೆರೆ ಅಲ್ಲದೆ ಅಕ್ಕಪಕ್ಕದ ಜಿಲ್ಲೆಗಳ ಜನರು ರಥೋತ್ಸವ ಕಣ್ತುಂಬಿಕೊಂಡರು.
* ಒಗ್ಗಟ್ಟಿನ ಜಾಗೃತಿಗೆ ಬೇಕು ಜಾತ್ರೆಗಳು
ಇದಕ್ಕೂ ಮುನ್ನ ಆಯೋಜಿಸಿದ್ಧ ಧರ್ಮ ಜಾಗೃತಿ ಸಮಾರಂಭವನ್ನು ಉಜ್ಜಿನಿ ಪೀಠದ ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಉದ್ಘಾಟಿಸಿದರು.
ಸಂಪತ್ತು, ಅಧಿಕಾರ, ಜಾತಿ, ಸ್ಥಾನಮಾನದ ತಾರತಮ್ಯವಿಲ್ಲದೆ ಎಲ್ಲರನ್ನೂ ಒಂದುಗೂಡಿಸುವುದೇ ಧರ್ಮ ಮತ್ತು ದೇವರು. ನಮ್ಮಲ್ಲಿನ ಅಹಂಕಾರ ನೀಗಿ, ಒಗ್ಗಟ್ಟಿನ ಭಾವ ಮೂಡಲು ಜಾತ್ರೆ, ಧಾರ್ಮಿಕ ಕಾರ್ಯಕ್ರಮಗಳು ಅವಶ್ಯಕ ಎಂದು ಶ್ರೀಗಳು ಪ್ರತಿಪಾದಿಸಿದರು.
ಶರಣರು, ಸ್ವಾಮೀಜಿಗಳ ಜೀವನ ಸುಖದ ಸುಪ್ಪತ್ತಿಗೆಯಲ್ಲ, ಮುಳ್ಳಿನ ಹಾಸಿಗೆ. ಕೇಡು ಮಾಡುವವರಿಗೂ ಒಳಿತು ಬಯಸುವವರು, ನಡೆ-ನುಡಿ ಒಂದಾಗಿ ಬದುಕಿದವು, ಇತರರ ತಪ್ಪನ್ನು ಕ್ಷಮಿಸಿ ತಮ್ಮ ತಪ್ಪಿಗೆ ಶಿಕ್ಷೆ ಅನುಭವಿಸುವವರೇ ಮಹಾತ್ಮರು. ಜೀವನದಲ್ಲಿ ನಿಂದೆ, ಟೀಕೆ, ಅಪಮಾನ ಸಹಿಸಿದ ಬಳಿಕವೇ ಅವರು ಮಹಾತ್ಮರ ಸ್ಥಾನಕ್ಕೆ ಬಂದಿದ್ಧಾರೆ. ಅವರಲ್ಲಿ ಕರಿಬಸವೇಶ್ವರರೂ ಒಬ್ಬರು ಎಂದರು.
ಕರಿಬಸವೇಶ್ವರರಿಗೆ ಬೇಡಿದ್ದನ್ನೆಲ್ಲವನ್ನು ಕೊಡುವ ಶಕ್ತಿ ಇದೆ. ನಮ್ಮೆಲ್ಲರ ದುಃಖ ನಿವಾರಿಸುವ ಶಕ್ತಿ ಜತೆಗೆ ಕ್ಷಮಾ ಗುಣವೂ ಅವರಲ್ಲಿದೆ. ಅಜ್ಜಯ್ಯನ ರಥವನ್ನು ಪ್ರತಿವರ್ಷ ಮಹಿಳೆಯರು ಎಳೆಯುವುದೇ ಅದ್ಭುತ. ಜಗತ್ತಿನಲ್ಲೇ ಒಂದು ರಾಷ್ಟ್ರವನ್ನು ತಾಯಿಗೆ ಹೋಲಿಸಿದರೆ ಅದು ಭಾರತ ಮಾತ್ರ. ಭೂಮಿ, ಅನ್ನ, ಕುಡಿವ ನೀರು ಎಲ್ಲವನ್ನೂ ಸಂಸ್ಕೃತಿಯ ಪ್ರತಿಪಾದಕರು ತಾಯಿಗೆ ಹೋಲಿಸಿದ್ದಾರೆ ಎಂದು ಹೇಳಿದರು.
ಕಳಶವಿರಿಸಿ ಚೆಂದವಾಗಿ ಅಲಂಕರಿಸಿದ ರಥವನ್ನು ಎಳೆಯುವಂತೆಯೂ ಜೀವನದ ರಥವನ್ನೂ ಎಳೆಯುವ ಸಾರ್ಥಕ ಪ್ರಜ್ಞೆ ಹಾಗೂ ಎಚ್ಚರಿಕೆ ಭಾವ ಎಲ್ಲರಲ್ಲೂ ಬೇಕು. ಮತ್ತೊಬ್ಬರಿಗೆ ತೊಂದರೆ ನೀಡದ, ನಮ್ಮೊಳಗೆ ದುಶ್ಚಟ, ದುಷ್ಟತನ ಕಳೆದುಕೊಂಡ ಜಾತ್ರೆಗೆ ಅರ್ಥ ಬರಲಿದೆ ಎಂದರು.
ಚನ್ನಗಿರಿಯ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಮಹಿಳೆಯರಿಗೆ ಬಸವಣ್ಣನವರ ಕಾಲದಲ್ಲಿಯೇ ಸ್ವಾತಂತ್ರೃ ಸಿಕ್ಕಿದೆ. ಇದನ್ನು ಸಂಸಾರದ ನೆಮ್ಮದಿಗಾಗಿ ಬಳಸಬೇಕು ಎಂದು ಸೂಚ್ಯವಾಗಿ ಹೇಳಿದರು.
ಮುಖಂಡ ಕೋಗಲೂರು ಎಸ್. ಶರಣಪ್ಪ ಮಾತನಾಡಿ ಯಾರಿಗೂ ಮೋಸ ಮಾಡದ ವರ್ಗವೇ ರೈತರು. ಆದರೆ, ಅವರ ಮಕ್ಕಳಿಗೆ ಕನ್ಯೆ ಕೊಡಬೇಕು. ಮಗಳಿಗೆ ಅತ್ತೆ ಇಲ್ಲದ ಮನೆ ಹುಡುಕುವ ಪ್ರತೀತಿ ಹೋಗಬೇಕು ಎಂದು ಆಶಿಸಿದರು.
ಶಿಕ್ಷಕಿ ಕಲ್ಪನಾ ರವಿ ಮಾತನಾಡಿ ಮಹಿಳೆಯರು ತಲೆ ಎತ್ತಿ ನಡೆಯಲು ಭಾರತೀಯ ಸಂಸ್ಕೃತಿ ಅವಕಾಶ ಮಾಡಿಕೊಟ್ಟಿದೆ. ತಾಯಂದಿರು ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿ ಬಿತ್ತಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಚನ್ನಗಿರಿಯ ಡಾ. ಬಸವಜಯಚಂದ್ರ ಸಾಮೀಜಿ, ಮುತ್ತಗಿಯ ಶಿವಯೋಗಿ ಹಾಲಸ್ವಾಮೀಜಿ, ಯರಗುಂಟೆಯ  ಪರಮೇಶ್ವರ ಸ್ವಾಮೀಜಿ, ಬೆಣ್ಣೆಹಳ್ಳಿಯ ಸ್ವಾಮೀಜಿ, ಉಜ್ಜಿನಿಯ ಸೈಯದ್ ರಹಮತ್ ಉಲ್ಲಾ, ಕಲ್ಲೂರಿನ ಮಹಾಂತೇಶ ಶಾಸ್ತ್ರಿ, ಶಸಾಪ ಜಿಲ್ಲಾ ಘಟಕದ ಕಾರ್ಯದರ್ಶಿ ಎನ್.ಎಸ್. ರಾಜು ಇತರರಿದ್ದರು. ಎಚ್.ಕೆ.ಲಿಂಗರಾಜು, ಶಿವಯೋಗಿ ಹಿರೇಮಠ ಸೇರಿ ಹಲವರಿಗೆ ಇದೇ ವೇಳೆ ಕರ್ನಾಟಕ ಚೇತನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
--

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net