ಕಾರ್ಗಿಲ್ ವಿಜಯ ಎಲ್ಲರಲ್ಲೂ ದೇಶಪ್ರೇಮ ಮೊಳಗಿಸಲಿ

1000260951.jpg
Published on

ದಾವಣಗೆರೆ: ಕಾರ್ಗಿಲ್ ವಿಜಯ ದಿನವನ್ನು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಿಸಿದರೆ  ಸಾಲದು. ಎಲ್ಲ ಭಾರತೀಯರಲ್ಲಿ ದೇಶಭಕ್ತಿ, ಸಮಾಜಸೇವೆಯ ಮನೋಭಾವ ಮೂಡಿದರೆ ಅದುವೇ ಸೈನಿಕರ ತ್ಯಾಗಕ್ಕೆ ಸಲ್ಲುವ ನಿಜವಾದ ಗೌರವ ಎಂದು ದೇವಸ್ಥಾನ ಸಮರ್ಥನಾ ಸೇವಾ ಸಮಿತಿಯ ಸಂಚಾಲಕ ಮುನಿಯಪ್ಪ ಹೇಳಿದರು.
ಪ್ರೇರಣಾ ಯುವ ಸಂಸ್ಥೆ, ಜಿಲ್ಲಾ ಮಾಜಿ ಸೈನಿಕರ ವಿವಿಧೋದ್ದೇಶ ಸಂಘ, ಜಿಲ್ಲಾ ಪ್ಯಾರಾ ಮಿಲಿಟರಿ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿ ನಗರದ ಗುಂಡಿ ಮಹದೇವಪ್ಪ ಕಲ್ಯಾಣಮಂದಿರದಲ್ಲಿ ಹಮ್ಮಿಕೊಂಡಿದ್ದ ಕಾರ್ಗಿಲ್ ವಿಜಯದ 25ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಗಿಲ್ ಯುದ್ಧದ ವೇಳೆ ಅಂದಿನ ಪ್ರಧಾನಿ ವಾಜಪೇಯಿ ಆಸ್ಪತ್ರೆಗೆ ಭೇಟಿ ನೀಡಿದಾಗ ವಿಕಲಾಂಗ ಯೋಧನೊಬ್ಬ ‘ನನಗೆ ಇನ್ನೂ ಒಂದು ಕೈ, ಒಂದು ಕಾಲು ಇದೆ. ದೇಶಕ್ಕಾಗಿ ಮತ್ತೆ ಹೋರಾಟ ಮಾಡುವೆ’ ಎಂದು ಹೇಳಿದ. ಇಂತಹ ನೂರಾರು ಸೈನಿಕರ ದೇಶಭಕ್ತಿ, ದೇಶದ ಒಳಗಿನ ಜನರಲ್ಲೂ ಅಭಿವ್ಯಕ್ತವಾಗಲಿ ಎಂದು ಆಶಿಸಿದರು.
ಪಾಕಿಸ್ತಾನದ ಲಾಹೋರ್‌ಗೆ ಭಾರತದಿಂದ ತಾವೇ ಆರಂಭಿಸಿದ್ದ ಬಸ್‌ನಲ್ಲಿ ತೆರಳಿದ್ದ ಅಂದಿನ ಪ್ರಧಾನಿ ವಾಜಪೇಯಿ ಅವರಿಗೆ ಅಲ್ಲಿನ ಸೇನಾ ಮುಖ್ಯಸ್ಥ ಸೆಲ್ಯೂಟ್ ಮಾಡದೆ ಅವಮಾನಿಸಿದ್ದ. ಪಾಕಿಸ್ತಾನದ ಅಧ್ಯಕ್ಷ ಭಾರತಕ್ಕೆ ಬಂದಾಗ ಇದೇ ಕ್ರಮವನ್ನು ಅನುಸರಿಸುವ ಮೂಲಕ ಭಾರತೀಯ ಯೋಧರು ಸೇಡು ತೀರಿಸಿಕೊಂಡಿದ್ದರು ಎಂದು ಸ್ಮರಿಸಿದರು.
ಪಾಕಿಸ್ತಾನ, ಭಾರತದ ಆರು ಮಂದಿ ಯೋಧರ ವಿರುದ್ಧ ಹಿಂಸಿಸಿ ಪೈಶಾಚಿಕ ಕೃತ್ಯ ಎಸಗಿತ್ತು. ಆದರೆ 1971ರ ಯುದ್ಧದಲ್ಲಿ ಪಾಕ್‌ನ 93 ಸಾವಿರ ಮಂದಿಯನ್ನು ಬಂಧಿಸಿಯೂ ಅವರೆಲ್ಲರಿಗೂ ಊಟ ನೀಡಿದವರು ನಮ್ಮ ಸೈನಿಕರು. ಭಾರತದ ಶಾಂತಿಪ್ರಿಯತೆಗೆ ಇದು ದೊಡ್ಡ ಸಾಕ್ಷಿ ಎಂದರು.
ಭಾರತದೊಳಗೆ ನುಸುಳಿದ್ದ ಅಕ್ರಮ ನುಸುಳುಕೋರರನ್ನು ಸದೆಬಡಿಯಲು ತೆರಳಿದ್ದ ಯುದ್ಧ ವಿಮಾನವನ್ನು ಪಾಕಿಸ್ತಾನಿ ಸೈನಿಕರು ಆಕಾಶದಲ್ಲೇ ಹೊಡೆದುರುಳಿಸಿದ್ದರು. ಅದರಲ್ಲಿದ್ದ ಯೋಧ ಅಜಯ್ ಅಹುಜಾ ಮೃತಪಟ್ಟಾಗ ಅವರ ತಾಯಿ ‘ನನ್ನ ಮಗ ಆಕಾಶದಲ್ಲಿ ಮೃತಪಟ್ಟಿದ್ದಾನೆ. ಆತ ಭಾರತೀಯರ ಹೃದಯ ಗೆದ್ದಿದ್ದಾನೆ. ಅವನ ಬಗ್ಗೆ ಹೆಮ್ಮೆ ಇದೆ. ನಾನು ಅಳುವುದಿಲ್ಲ’ ಎಂದಿದ್ದರು. ಎಲ್ಲ ಯೋಧರ ಮನೆಗಳಲ್ಲೂ ಇದೇ ಭಾವವಿದೆ ಎಂದು ಅಭಿಮಾನ ಪಟ್ಟರು.
ಕಿವಿ-ಮೂಗು-ಗಂಟಲು ತಜ್ಞ ಡಾ.ಎ.ಎಂ. ಶಿವಕುಮಾರ್, ಕಾರ್ಗಿಲ್‌ನಂತಹ ಎತ್ತರದ ಪ್ರದೇಶದಲ್ಲಿ ಭಾರತದ ಯೋಧರು ದೇಶದ ಧ್ವಜ ಹಾರಿಸಿದ್ದೇ ಕೌತುಕ. ಯೋಧರು ಬಂದಾಗ ಅವರ ಕೆಲಸಕ್ಕೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.
ಕಾರ್ಗಿಲ್ ಯುದ್ಧದಲ್ಲಿ ವೈದ್ಯಕೀಯ ಸೇವೆ ಸಲ್ಲಿಸಿದ್ದ ಡಾ.ಕೆ.ಪಿ.ಸುನಿಲ್‌ಕುಮಾರ್ ಅಂದಿನ ಕ್ಷಣಗಳ ಮೆಲುಕು ಹಾಕಿದರು. ದೇಶದ ಯುವಕರು, ಸೈನಿಕರ ಪ್ರತಿಯೊಂದು ಜೀವನಗಾಥೆಯನ್ನು ಓದಿದರೆ ಜೀವನದಲ್ಲಿ ಸಾಧಿಸುವ ಛಲ ಬರಲಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪ್ಯಾರಾ ಮಿಲಿಟರಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಂಜಾನಾಯ್ಕ, ಪ್ರೇರಣಾ ಸಂಸ್ಥೆ ಅಧ್ಯಕ್ಷ ಎಸ್.ಟಿ.ವೀರೇಶ್, ಮಹೇಶ್‌ಶೆಟ್ಟಿ, ಗಣೇಶ್ ಕಿರಣ್ ಇದ್ದರು. ಮಾನಸಾ ತಂಡದವರು ದೇಶಭಕ್ತಿಗೀತೆಗಳನ್ನು ಹಾಡಿದರು. ರಘು ಆರ್ ಡಿಎಕ್ಸ್ ತಂಡದಿಂದ ನೃತ್ಯರೂಪಕ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net