ಕಮಲ್ ಕ್ಷಮೆ ಕೇಳದಿದ್ದರೆ ಸಿನಿಮಾ ಬಹಿಷ್ಕಾರ ಕರವೇ ಪ್ರತಿಭಟನೆ

1000914974.jpg
Published on

ದಾವಣಗೆರೆ: ಚಿತ್ರನಟ ಕಮಲ್‌ಹಾಸನ್ ನೀಡಿದ ವಿವಾದಿತ ಹೇಳಿಕೆ ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ (ಜಿ. ನಾರಾಯಣಗೌಡ ಬಣ) ಜಿಲ್ಲಾ ಘಟಕದ ಪದಾಧಿಕಾರಿಗಳು ನಗರದ ಜಿಲ್ಲಾ ಗುರುಭವನ ಬಳಿ ಪ್ರತಿಭಟನೆ ನಡೆಸಿದರು.

ಕನ್ನಡ, ತಮಿಳು ಭಾಷೆಯಿಂದ ಹುಟ್ಟಿದ್ದು ಎಂಬ ಹೇಳಿಕೆ ನೀಡಿರುವ ಕಮಲ್‌ಹಾಸನ್ ಎರಡು ರಾಜ್ಯಗಳ ನಡುವೆ ಸಂಘರ್ಷಕ್ಕೆ ಕಾರಣವಾಗಿದ್ದು ಇದರ ವಿರುದ್ಧ ಕರ್ನಾಟಕ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಪದಾಧಿಕಾರಿಗಳು ಆಗ್ರಹಿಸಿದರು.

ನೀಡಿದ ಹೇಳಿಕೆ ಬಗ್ಗೆ ಕ್ಷಮೆ ಯಾಚಿಸಬೇಕು. ಇಲ್ಲವಾದಲ್ಲಿ ಕರ್ನಾಟಕದಲ್ಲಿ ಆತನ ಚಿತ್ರಗಳ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಕಮಲ್ ಹಾಸನ್ ಭಾವಚಿತ್ರ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ ಮಾತನಾಡಿ ಕನ್ನಡದ ಅನ್ನ ತಿಂದ ಕಮಲ್‌ಹಾಸನ್ ದ್ರೋಹ ಬಗೆದಿದ್ದಾರೆ. ಆಕ್ಷೇಪಾರ್ಹ ಹೇಳಿಕೆ ನೀಡಿದ ಈತನನ್ನು ಕರ್ನಾಟಕದಿಂದ ಬಹಿಷ್ಕರಿಸಬೇಕು. ಆತನ ಚಿತ್ರಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಬಾರದು. ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಅವರು ಈಗಾಗಲೆ ಮನವರಿಕೆ ಮಾಡಿದ್ದು, ಇದನ್ನೂ ಮೀರಿ ಚಿತ್ರಗಳ ಪ್ರದರ್ಶನವಾದಲ್ಲಿ ಚಿತ್ರಮಂದಿರಗಳಿಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕಮಲ್‌ಹಾಸನ್ ನಾಡದ್ರೋಹಿ ಹೇಳಿಕೆ ನೀಡುವಾಗ, ವೇದಿಕೆ ಬಳಿಯೇ ಇದ್ದ ನಟ ಶಿವರಾಜ್‌ಕುಮಾರ್ ವಿರೋಧ ಮಾಡದಿರುವುದು ಬೇಸರದ ಸಂಗತಿ. ಕಮಲ್ ಹಾಸನ್ ಅವರ ಹೇಳಿಕೆ ಸಮರ್ಥಿಸಿಕೊಳ್ಳುವಂತೆ ನಟರು ಹೇಳಿಕೆ ನೀಡುವುದು ಖಂಡನೀಯ ಎಂದರು.

ಕನ್ನಡಿಗರ ಮೇಲೆ ಉತ್ತರ ಭಾರತೀಯರ ಕಾಟ ಹೆಚ್ಚಿದ್ದು, ಅವರಿಗೆ ಕನ್ನಡಿಗರು ತಕ್ಕ ಉತ್ತರ ನೀಡುತ್ತಾ ಬಂದಿದ್ದಾರೆ. ಕಾವೇರಿ ವಿಚಾರ ಬಂದಾಗ ತಮಿಳುನಾಡು ವಿರುದ್ಧ ಹೋರಾಟ ನಡೆಸುವುದು ಕರ್ನಾಟಕಕ್ಕೆ ಅನಿವಾರ್ಯ. ಕಮಲ್ ವಿರುದ್ಧ ಕ್ರಮವಾಗಬೇಕು. ಕರ್ನಾಟಕದಲ್ಲಿ ಆತನ ಪ್ರವೇಶಕ್ಕೆ ಅವಕಾಶ ನೀಡಬಾರದು. ಜೂ. 5ರಂದು ಬಿಡುಗಡೆ ಅಗಲಿರುವ ಥಗ್ ಲೈಫ್ ಸಿನಿಮಾ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಪದಾಧಿಕಾರಿಗಳಾದ ಬಸಮ್ಮ ಮಂಜುಳಾ ಮಹಾಂತೇಶ್, ಮಂಜುಳಾ ಗಣೇಶ್ ಶಾಂತಮ್ಮ ,ಸಾಕಮ್ಮ. ರವಿ ಕುಮಾರ್ . ಗಿರೀಶ್ ಕುಮಾರ್, ಗೋಪಾಲ್ ದೇವರಮನೆ.ಬಾಷಾ, ಸುರೇಶ್ .ಚಂದ್ರು. ಮಹೇಶ್ವರಪ್ಪ .ವಾಸುದೇವ ರಾಯ್ಕರ್, ಈಶ್ವರ್, ಜಿ.ಎಸ್.ಸಂತೋಷ್ ಜಿ.ಎಸ್. ನಾಗರಾಜ್, ತುಳಸಿ ರಾಮ್, ಪರಮೇಶ್, ಮಂಜು, ಧರ್ಮರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net