

ದಾವಣಗೆರೆ: ಹರಿಹರ ನಗರದ ಹಿಂದು ರುದ್ರಭೂಮಿಗೆ ಹೆಚ್ಚುವರಿ ಭೂಮಿ ಮಂಜೂರು ಮಾಡುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಶೆಟ್ಟಿ ಬಣ) ಪದಾಧಿಕಾರಿಗಳು ಗ್ರೇಡ್2 ತಹಸೀಲ್ದಾರ್ ಸಿ.ಪುಷ್ಪಾವತಿ ಅವರಿಗೆ ಮನವಿ ಸಲ್ಲಿಸಿದರು.
ಕೈಲಾಸ ನಗರದಲ್ಲಿನ ರುದ್ರಭೂಮಿಯಲ್ಲಿ ಆರೇಳು ದಶಕಗಳಿಂದ ಅಂತ್ಯಸಂಸ್ಕಾರ ಮಾಡಲಾಗುತ್ತಿದೆ. ಕಾಲಕ್ರಮೇಣ ನಗರ ಬೆಳೆದಂತೆ ಜನ ಸಂಖ್ಯೆಯೂ ಹೆಚ್ಚಳವಾಗಿದೆ ಎಂದರು.
ನಗರದಲ್ಲಿರುವ ರುಧ್ರಭೂಮಿ ಚಿಕ್ಕದಾಗಿದೆ. ಹೀಗಾಗಿ ಶವ ಸಂಸ್ಕಾರ ಮಾಡಿದ ಸ್ಥಳದಲ್ಲಿಯೇ ಮರು ಅಂತ್ಯಕ್ರಿಯೆ ಮಾಡುದ ದುಸ್ಥಿತಿ ಬಂದಿದೆ. ಜನಸಂಖ್ಯೆಗೆ ತಕ್ಕಂತೆ ರುದ್ರಭೂಮಿ ಇಲ್ಲದಿರುವುದೇ ಸಮಸ್ಯೆಗೆ ಕಾರಣವಾಗಿದೆ.
ರುದ್ರಭೂಮಿ ಸ್ಥಳವನ್ನು ವಿಸ್ತಾರ ಮಾಡುವಂತೆ ಹಲವಾರು ಸಂಘ ಸಂಸ್ಥೆಗಳು ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಒಂದು ಹಂತದಲ್ಲಿ ರುದ್ರಭೂಮಿ ಪಕ್ಕದ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳುವ ಪ್ರಯತ್ನವಾಗುತ್ತಿದೆ. ಈ ಪ್ರಕ್ರಿಯೆ ಎಲ್ಲಿಗೆ ಬಂತು ಎಂದು ಪ್ರಶ್ನಿಸಿದರು.
ತಾಲೂಕು ಆಡಳಿತ ನಗರದ ಹಿಂದು ರುದ್ರಭೂಮಿಯ ಪಕ್ಕ ಆಥವಾ ಇದಕ್ಕೆ ಹೊಂದಿಕೊಂಡಿರುವ ಜಮೀನನ್ನು ಖರೀದಿಸಿ ರುದ್ರಭೂಮಿಯನ್ನು ನಗರದ ಜನಸಂಖ್ಯೆಗೆ ಅನುಗುಣವಾಗಿ ವಿಸ್ತರಿಸ ಬೇಕೆಂದು ಒತ್ತಾಯಿಸಿದರು.
ರುದ್ರಭೂಮಿ ಅವ್ಯವಸ್ಥೆಯ ಗೂಡಾಗಿದೆ. ಮರ ಗಿಡಗಳು ಬೆಳೆದು ನಿಂತಿದ್ದು, ಅವುಗಳ ಮೇಲೆ ಹೈ ಟೆನ್ಷನ್ ವಿದ್ಯುತ್ ವೈರ್‌ಗಳು ಹಾದು ಹೋಗಿವೆ. ಅಂತ್ಯಕ್ರಿಯೆಗೆ ಹೋದ ಸಾರ್ವಜನಿಕರು ಆನಾಹುತಕ್ಕೆ ಒಳಗಾಗುವ ಮುನ್ನವೇ ಅಗತ್ಯ ಮುಂಜಾಗ್ರತಾ ಕ್ಮ ವಹಿಸಬೇಕೆಂದು ಕೋರಿದರು.
ಪ್ರತಿಭಟನೆಯಲ್ಲಿ ವೇದಿಕೆಯ ತಾಲೂಕು ಅಧ್ಯಕ್ಷ ರಮೇಶ್ ಮಾನೆ, ನಗರ ಘಟಕದ ಅಧ್ಯಕ್ಷ ಪ್ರೀತಮ್‌ಬಾಬು, ಗೌರವ ಸಲಹೆಗಾರ ಬಿ. ಮುಗ್ದುಮ್, ವಕೀಲರಾದ ಹಾಲೇಶ್, ಅಲಿ ಅಕ್ಬರ್, ರಾಜು, ರುದ್ರೇಶ್, ಮಹೇಶ್, ಅಕ್ರಂ ಇತರರು ಭಾಗವಹಿಸಿದ್ದರು.