

ದಾವಣಗೆರೆ: ನಗರದ ಪ್ರಧಾನ ಅಂಚೆ ಕಚೇರಿ ಸಮೀಪದ ತಾಲೂಕು ಕಚೇರಿಯ ನವೀಕೃತ ಕಟ್ಟಡವನ್ನು ಉದ್ಘಾಟಿಸಿ, ಕಾರ್ಯಾರಂಭ ಮಾಡುವಂತೆ ಆಗ್ರಹಿಸಿ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ವಾಹನ ಚಾಲಕರ ಜಿಲ್ಲಾ ಘಟಕದ ಪದಾಧಿಕಾರಿಗಳು, ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.
ಜಯದೇವ ವೃತ್ತದಿಂದ ಉಪವಿಭಾಗಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಅಲ್ಲಿನ ಸಿಬ್ಬಂದಿ ಮೂಲಕ ಜಿಲ್ಲಾಧಿಕಾರಿಗೆ ಮನವಿಪತ್ರ ಸಲ್ಲಿಸಿದರು.
ತಾಲೂಕು ಕಚೇರಿ ಕಟ್ಟಡ ಕಚೇರಿ ಅನೇಕ ವರ್ಷಗಳ ಬಳಿಕ ನವೀಕರಣಗೊಂಡಿದೆ. 2 ವರ್ಷದ ಹಿಂದೆಯೇ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು ಪೀಠೋಪಕರಣಗಳೂ ಅಳವಡಿಕೆಯಾಗಿವೆ. ಆದರೂ ಸಾರ್ವಜನಿಕರ ಉಪಯೋಗಕ್ಕೆ ಬಳಸದೆ ರೈತರ ಭವನದ ಕಟ್ಟಡಕ್ಕೆ ಬಾಡಿಗೆ ಹಣ ಪಾವತಿಸಿ ಸರ್ಕಾರದ ಹಣ ಪೋಲು ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.
ನವೀಕೃತ ಕಟ್ಟಡ ಉದ್ಘಾಟನೆಯಾಗದ ಹಿನ್ನೆಲೆಯಲ್ಲಿ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಕಟ್ಟಡ ಸೋರಿಕೆಯಾಗಿ ಕಳಪೆ ಕಾಮಗಾರಿಯಾಗಿರುವ ಕಾರಣಕ್ಕೆ ಇದುವರೆಗೆ ಕಟ್ಟಡ ಉದ್ಘಾಟನೆಯಾಗಿಲ್ಲ ಎಂಬ ಶಂಕೆ ಕಾಡುತ್ತಿದೆ.
ಹಳೆ ದಾವಣಗೆರೆ, ನಗರ ಹಾಗೂ ಗ್ರಾಮಾಂತ ಜನರಿಗೆ ಅನುಕೂಲವಾಗುವ ಸ್ಥಳ ಹೊರತಾಗಿ ರೈತರ ಭವನದ ಕಟ್ಟಡದಲ್ಲಿ ಇನ್ನು ಎಷ್ಟು ದಿನ ಕಚೇರಿ ಮುಂದುವರಿಯಲಿದೆ ಎಂಬುದು ತಿಳಿದಿಲ್ಲ. ಸಮೀಪದಲ್ಲಿನ ನವೀಕೃತ ಕಟ್ಟಡ ಕಾರ್ಯಾರಂಭ ಮಾಡಿದಲ್ಲಿ ಜನಸಾಮಾನ್ಯರು, ವಿದ್ಯಾರ್ಥಿಗಳಿಗೆ ವಿವಿಧ ಪ್ರಮಾಣಪತ್ರ ಪಡೆಯಲು ಅನುಕೂಲವಾಗಲಿದೆ. ಇಲ್ಲವಾದಲ್ಲಿ ಹಣ ತೆತ್ತು ಆಟೋ, ಬಸ್‌ನಲ್ಲಿ ರೈತರ ಭವನಕ್ಕೆ ಹೋಗುವ ಸ್ಥಿತಿ ಇದೆ ಎಂದು ಹೇಳಿದರು.
ಮೂಲ ಕಚೇರಿಯಲ್ಲೇ ತಾಲೂಕು ಕಚೇರಿ ಕೆಲಸ ಆರಂಭಿಸಲು ಜಿಲ್ಲಾಡಳಿತ ಗಮನ ಹರಿಸಬೇಕು. ಕಟ್ಟಡವನ್ನು ಶೀಘ್ರವೇ ಉದ್ಘಾಟನೆ ಮಾಡಬೇಕು. ಇಲ್ಲವಾದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಬಾಬುರಾವ್, ವಾಹನ ಚಾಲಕ ಜಿಲ್ಲಾ ಘಟಕದ ಅಧ್ಯಕ್ಷ ಇಸ್ಮಾಯಿಲ್ ಜಬೀವುಲ್ಲಾ, ಅಜಮ್ ರಜ್ವಿ, ಎನ್. ನವೀನ್, ಸೈಯದ್ ಶಹಬಾಜ್, ಚಂದ್ರಶೇಖರ ಗಣಪ, ರಮೇಶ್, ವಿ. ಗಿರೀಶ್, ಬಿ,ವಿ.ಮಂಜುನಾಥ, ಬ್ರಹ್ಮಾನಂದ, ಎಲ್‌ಐಸಿ ಮಂಜು. ಮಹ್ಮದ್ ಹನೀಫ್, ಗದಿಗೆಪ್ಪ, ಕೆಪಿ.ರಂಗನಾಥ್ ಇತರರಿದ್ದರು.