

ಡಿ.ಎಂ.ಮಹೇಶ್, ದಾವಣಗೆರೆ:
ರಾಜ್ಯದಲ್ಲಿ ಪ್ರತಿವರ್ಷ ಬಾಗಿಲು ಹಾಕುವ ಕನ್ನಡ ಶಾಲೆಗಳ ಸಂಖ್ಯೆ ಹೆಚ್ಚಿವೆ. ಮರು ಚಾಲನೆಗೊಂಡಿದ್ದು ಕಡಿಮೆ. ಈ ಬಾರಿ ದಾವಣಗೆರೆ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಭರವಸೆಯ ಕಾಮನಬಿಲ್ಲು ಮೂಡಿದೆ!
ದಾವಣಗೆರೆ ತಾಲೂಕಿನ ನರಗನಹಳ್ಳಿ ಗ್ರಾಪಂನ ಓಬಣ್ಣನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಮುಚ್ಚಿದ್ದ 16 ವರ್ಷದ ನಂತರ ಬಾಗಿಲು ತೆರೆದು ’ಕಲಿಯೋಣು ಬಾರಾ’ ಎನ್ನಲು ಸಜ್ಜಾಗಿದೆ.
ಕೂಲಿಕಾರ್ಮಿಕರೇ ಹೆಚ್ಚಿರುವ ಈ ಗ್ರಾಮದಲ್ಲಿ, ಸ್ಥಳೀಯರ ಒತ್ತಾಸೆಯಂತೆ ಕೇವಲ 10 ದಿನದಲ್ಲಿ ಶಾಲೆ ಸ್ವಚ್ಛಗೊಂಡಿದೆ. ಶುಕ್ರವಾರ ಮರು ಆರಂಭವಾಗಲಿರುವ ಶಾಲೆಗೆ ಶುಕ್ರದೆಸೆ ಶುರುವಾಗಿದೆ.
65 ಮನೆಗಳಿರುವ ಈ ಕುಗ್ರಾಮಕ್ಕೆ ಬಸ್ ಸೌಕರ್ಯ, ನ್ಯಾಯಬೆಲೆ ಅಂಗಡಿಯಿಲ್ಲ. ಎಲ್ಲದಕ್ಕೂ ಒಂದು ಕಿಮೀ ಆಸುಪಾಸಿನ ಹಳ್ಳಿಗಳಿಗೆ ಸ್ವಂತ ವಾಹನದಲ್ಲೇ ಹೋಗಿಬರಬೇಕು. ಶಾಲೆ ಶುರುವಾಗುತ್ತಿರುವ ಕಾರಣಕ್ಕೆ ಗ್ರಾಮದಲ್ಲಿ ಮಿಂಚಿನ ಸಂಚಾರ ಆರಂಭವಾಗಿದೆ. ಹಬ್ಬದ ಕಳೆಗಟ್ಟಿದೆ!
1969ರಲ್ಲಿ ತಾಲೂಕು ಅಭಿವೃದ್ಧಿ ಮಂಡಳಿಯಿಂದ ನಿರ್ಮಿಸಿದ್ದ ಶಾಲೆಯಿದು. ಮಹಾತ್ಮಗಾಂಧೀಜಿ ಜನ್ಮಶತಾಬ್ಧಿ ಅಂಗವಾಗಿ ನಿರ್ಮಿತವಾಗಿತ್ತು ಎಂಬುದಕ್ಕೆ ಇಲ್ಲಿರುವ ಶಿಲಾಫಲಕವೇ ಸಾಕ್ಷಿಯಾಗಿದೆ. ಅರ್ಧ ಶತಮಾನ ಪೂರೈಸಿದ ಈ ಶಾಲೆ ಆರಂಭದಲ್ಲಿ ಒಳ್ಳೆಯ ದಾಖಲಾತಿ ಇತ್ತು. ಉತ್ತಮ ಶಿಕ್ಷಕರೂ ಇದ್ದರು.
2006-07ರಲ್ಲಿ 42 ಮಕ್ಕಳಿದ್ದ ಶಾಲೆ ಬರುವ ವರ್ಷ 32ಕ್ಕೆ ಕುಸಿಯಿತು. ಅಕ್ಕ ಪಕ್ಕದ ಊರುಗಳ ಖಾಸಗಿ ಶಾಲೆಗಳ ಪ್ರಭಾವದಿಂದಾಗಿ ಈ ಸರ್ಕಾರಿ ಶಾಲೆ 2008-09ರಲ್ಲಿ ದಾಖಲಾತಿಯಲ್ಲಿ ಶೂನ್ಯ ದಾಖಲಿಸಿತು. ಬರುವ ವರ್ಷವೇ ಶಾಲೆಗೆ ಬೀಗ ಜಡಿಯಲಾಗಿತ್ತು.
ಖಾಸಗಿ ಶಾಲೆಗಳಲ್ಲಿ ಓದಿಸುವಷ್ಟು ನಾವು ಶಕ್ತರಲ್ಲ. ಹೀಗಾಗಿ ನಮ್ಮೂರಿನ ಶಾಲೆ ಮರು ಆರಂಭಿಸಬೇಕೆಂದು ಬಿಇಒ ಶೇರ್ ಅಲಿ ಅವರಿಗೆ ಗ್ರಾಮಸ್ಥರೇ ಮನವಿ ಸಲ್ಲಿಸಿದರು. ಊರಿನವರನ್ನು ಸೇರಿಸಿ ಶಿಕ್ಷಣಾಧಿಕಾರಿಗಳು ಸಭೆ ನಡೆಸಿದರು. ಶಾಲೆ ಆರಂಭಶೂರತ್ವವಾಗದೆ ನಿರಂತರವಾಗಿ ಉಳಿಸಬೇಕು ಎಂದು ಮನವೊಲಿಸಿದರು.
ಶಾಲೆಗೆ ಬರಲು 12 ಮಕ್ಕಳು ತಯಾರಾಗಿದ್ದು, ಪಾಲಕರೂ ಒಪ್ಪಿಗೆ ಪತ್ರ ಕೊಟ್ಟಾಗಿದೆ. ಶಾಲೆ ಆರಂಭವಾದ ಬಳಿಕ ಇತರ ಮಕ್ಕಳೂ ‘ನಲಿ-ಕಲಿ’ಗೆ ಸೇರ್ಪಡೆಯಾಗುವ ಇರಾದೆ ಇದೆ. ಶಾಲೆಗೆ ಸಂಬಂಧಪಟ್ಟ ದಾಖಲಾತಿ ವಹಿಗಳೆಲ್ಲ ಆಯುಕ್ತರ ಕಚೇರಿಗೆ ರವಾನೆಯಾಗಿದೆ.
‘ನಮ್ಮೂರಲ್ಲಿ ಕೃಷಿ ಕಾರ್ಮಿಕರೇ ಹೆಚ್ಚಿದ್ದಾರೆ. ಎಲ್ಲದಕ್ಕೂ ಯಂತ್ರಗಳು ಬಂದಿರುವುದರಿಂದಲೂ ಕೂಲಿಗೆ ಸಂಚಕಾರ ಬಂದಿದೆ. ಉದ್ಯೋಗಖಾತ್ರಿ ಕೆಲಸ ಕೂಡ ಸಿಗುತ್ತಿಲ್ಲ. ಅಕ್ಕಪಕ್ಕದ ಗ್ರಾಮಗಳ ಶಾಲೆಗಳಲ್ಲಿ ನಮ್ಮ ಮಕ್ಕಳು ಓದುತ್ತಿದ್ದರು. ವರ್ಷಕ್ಕೆ 15ರಿಂದ 30 ಸಾವಿರ ರೂ. ವೆಚ್ಚ ಭರಿಸಲು ಈಗ ಕಷ್ಟವಾಗಿದೆ. ಹೀಗಾಗಿ ಗ್ರಾಮಸ್ಥರೇ ಸೇರಿ ಶಾಲೆ ಮತ್ತೆ ಆರಂಭಿಸಲು ನಿರ್ಧಾರ ಮಾಡಿದ್ದೇವೆ. 8 ದಿನದಿಂದ ಶಾಲೆಯನ್ನು ಸಿದ್ಧಗೊಳಿಸುತ್ತಿದ್ದೇವೆ’ ಎಂದು ಪಾಲಕ ಒ.ಆರ್. ಸಂತೋಷ್‌ಕುಮಾರ್ ಹೇಳಿದರು.
ಈ ಶಾಲೆಯಲ್ಲಿ ಓದಿದವರು ಶಿಕ್ಷಕರು ಹಾಗೂ ಅನೇಕ ಹುದ್ದೆಗಳಲ್ಲಿದ್ದಾರೆ. ಶಾಲೆ ಆರಂಭದ ಬಳಿಕ ಹಳೆಯ ವಿದ್ಯಾರ್ಥಿಗಳ ಪಡೆ ರಚಿಸಿ ಶಾಲಾ ಬೆಳವಣಿಗೆಗೆ ಸಹಕಾರ ಪಡೆಯುವ ಆಲೋಚನೆ ಇದೆ. ಹಳ್ಳಿಯಲ್ಲೀಗ ಹಬ್ಬದ ವಾತಾವರಣವಿದೆ ಎನ್ನುತ್ತಾರೆ ಸಿಆರ್‌ಪಿ ಮಧುಕುಮಾರ್. ಸದ್ಯಕ್ಕೆ ಎರಡು ಕೋಣೆ ಪೈಕಿ ಒಂದು ಕೊಠಡಿ ಪಾಠಕ್ಕೆ ಸಜ್ಜಾಗಿದೆ. ಅಡುಗೆ ಕೋಣೆ, ಶೌಚಗೃಹ, ಶಾಲಾ ಬೆಂಚು, ಕುರ್ಚಿಗಳು ತಯಾರಾಗಿದೆ. ಶಾಸಕ ಕೆ.ಎಸ್.ಬಸವಂತಪ್ಪ ವಿದ್ಯಾಲಯಕ್ಕೆ ಮರು ಚಾಲನೆ ನೀಡುತ್ತಿದ್ದಾರೆ.
---
ಹದಿನಾಲ್ಕು ವರ್ಷದೊಳಗಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡುವುದು ನಮ್ಮ ಆದ್ಯ ಕರ್ತವ್ಯ. ಹೀಗಾಗಿ ಓಬಣ್ಣನಹಳ್ಳಿ ಗ್ರಾಮಸ್ಥರ ಜತೆ ಚರ್ಚಿಸಿ ಕನ್ನಡ ಶಾಲೆಗೆ ಮರು ಚಾಲನೆ ನೀಡುತ್ತಿದ್ದೇವೆ. ನರಗನಹಳ್ಳಿಯ ಶಿಕ್ಷಕರೊಬ್ಬರನ್ನು ನಿಯೋಜನೆ ಮಾಡಲಾಗಿದೆ.
ಶೇರ್ ಅಲಿ
ದಾವಣಗೆರೆ ಉತ್ತರ ವಲಯ ಬಿಇಒ.
----