ನಾಳೆಯಿಂದ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

B. Vamadevappa
Published on

ದಾವಣಗೆರೆ: ಜಿಲ್ಲಾ ಮಟ್ಟದ 12ನೇ ಕನ್ನಡ ಸಾಹಿತ್ಯ ಸಮ್ಮೇಳನ ಚನ್ನಗಿರಿ ತಾಲೂಕು ಹರನಹಳ್ಳಿ-ಕೆಂಗಾಪುರದ ಶ್ರೀ ರಾಮಲಿಂಗೇಶ್ವರ ಮಠದ ಆವರಣದಲ್ಲಿ ಮಾರ್ಚ್ 4 ಮತ್ತು 5ರಂದು ನಡೆಯಲಿದೆ.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಮ್ಮೇಳನ ಕಾರ್ಯಕ್ರಮಗಳ ವಿವರ ನೀಡಿದರು. ಸಮ್ಮೇಳನದಲ್ಲಿ 2 ಕವಿಗೋಷ್ಠಿ, 5 ವಿಶೇಷ ಉಪನ್ಯಾಸಗಳು ನಡೆಯಲಿವೆ. ಒಟ್ಟು 5 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ತಿಳಿಸಿದರು.

ಶನಿವಾರ ಬೆಳಗ್ಗೆ 9 ಗಂಟೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಉದ್ಘಾಟಿಸುವರು. ಅದಕ್ಕೂ ಮೊದಲು ಧ್ವಜಾರೋಹಣ ನೆರವೇರಲಿದೆ ಎಂದು ಹೇಳಿದರು.

ಬೆಳಗ್ಗೆ 11 ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಹರನಹಳ್ಳಿ-ಕೆಂಗಾಪುರ ಮಠದ ಶ್ರೀ ರಾಮಲಿಂಗೇಶ್ವರ ಸ್ವಾಮೀಜಿ, ಪಾಂಡೋಮಟ್ಟಿ ವಿರಕ್ತ ಮಠದ ಶ್ರೀ ಡಾ.ಗುರುಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸುವರು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ, ಸಂಸದ ಜಿ.ಎಂ. ಸಿದ್ದೇಶ್ವರ, ಪ್ರೊ.ಎನ್. ಲಿಂಗಣ್ಣ, ಮಾಡಾಳು ವಿರೂಪಾಕ್ಷಪ್ಪ ಸೇರಿ ಜಿಲ್ಲೆಯ ಶಾಸಕರು, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಪಾಲ್ಗೊಳ್ಳುವರು ಎಂದು ತಿಳಿಸಿದರು.

ಕೃಷಿ ಕ್ಷೇತ್ರದ ಪ್ರಸ್ತುತ ಸ್ಥಿತಿಗತಿಗಳು, ಸಾಹಿತ್ಯ ವೈವಿಧ್ಯ ವಿಷಯವಾಗಿ ಗೋಷ್ಠಿಗಳು ನಡೆಯಲಿವೆ. ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ, ಚಿತ್ರಕಲೆ-ಸಾಹಿತ್ಯ ಅಂದು ಇಂದು, ಯುಗಧರ್ಮ ರಾಮಣ್ಣ ಅವರ ಬದುಕು-ಬರಹ, ಸ್ವಚ್ಛತೆ, ಆರೋಗ್ಯ ಮತ್ತು ಸೂಕ್ಷ್ಮಜೀವಿಗಳು, ಕನ್ನಡ ನುಡಿಯ ಉಳಿವಿಗೆ ಗ್ರಾಮೀಣ ಜನರ ಕೊಡುಗೆ ವಿಷಯವಾಗಿ ವಿಶೇಷ ಉಪನ್ಯಾಸಗಳು ನಡೆಯಲಿವೆ. ವಾಗ್ಮಿ ಪ್ರೊ.ಎಂ. ಕೃಷ್ಣೇಗೌಡ್ರು, ಪ್ರಾಧ್ಯಾಪಕರಾದ ಡಾ.ಎಸ್. ಶಿಶುಪಾಲ, ಡಾ.ನೆಲ್ಲಿಕಟ್ಟೆ ಎಸ್. ಸಿದ್ದೇಶ್ ಇತರರು ವಿಚಾರ ಮಂಡಿಸುವರು ಎಂದು ಹೇಳಿದರು.

ಭಾನುವಾರ ಮಧ್ಯಾಹ್ನ 2.30ಕ್ಕೆ ಬಹಿರಂಗ ಅಧಿವೇಶನ ನಡೆಯಲಿದೆ. ಸಂಜೆಯ ಸಮಾರೋಪ ಸಮಾರಂಭದಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ಡಾ.ಬಿ.ವಿ. ವಸಂತಕುಮಾರ್ ಸಮಾರೋಪ ನುಡಿಗಳನ್ನಾಡುವರು. ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.

ವಿಶ್ವ ಕನ್ನಡ ಸಮ್ಮೇಳನವನ್ನು ದಾವಣಗೆರೆಯಲ್ಲೇ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿ ಬಜೆಟ್‌ನಲ್ಲೂ ಪ್ರಸ್ತಾಪಿಸಿದ್ದಾರೆ. ಆದಷ್ಟು ಶೀಘ್ರ ವಿಶೇಷಾಧಿಕಾರಿಯನ್ನು ನೇಮಕ ಮಾಡುವಂತೆ ಸಿಎಂಗೆ ಪತ್ರ ಬರೆಯುವುದಾಗಿ ಹೇಳಿದರು.

ಪರಿಷತ್ತಿನ ಪದಾಧಿಕಾರಿಗಳಾದ ಬಿ. ದಿಳ್ಯಪ್ಪ, ರಾಘವೇಂದ್ರ ನಾಯರಿ, ರೇವಣಸಿದ್ದಪ್ಪ ಅಂಗಡಿ, ಜಗದೀಶ್, ಸತ್ಯಭಾಮಾ, ರುದ್ರಾಕ್ಷಿಬಾಯಿ, ಜಿಗಳಿ ಪ್ರಕಾಶ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net