

ದಾವಣಗೆರೆ: ಕನ್ನಡದ ಉಳಿವಿಗೆ ಪ್ರತಿಯೊಬ್ಬರೂ ಕಂಕಣಬದ್ಧ್ದರಾಗಬೇಕು. ಆಧುನಿಕ ಯುಗದಲ್ಲಿ ಪಾಲಕರಿಗೆ ನೀಡುವಷ್ಟೇ ಗೌರವವನ್ನು ಮಾತೃಭಾಷೆಗೂ ಮೀಸಲಿಡಬೇಕು ಎಂದು ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಹೇಳಿದರು.
ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ನಗರದ ಎಸ್.ಒ.ಜಿ. ಕಾಲನಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ, 69ನೇ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿ ನಮ್ಮದು ವೈವಿಧ್ಯಮಯ ಸಾಂಸ್ಕೃತಿಕ ದೇಶ. ಯುವಪೀಳಿಗೆ ನಮ್ಮ ಸಂಸ್ಕೃತಿಯನ್ನು ಉಳಿಸುವ ಕೆಲಸ ಮಾಡಬೇಕು ಎಂದರು.
ಮಕ್ಕಳು ಪಠ್ಯ, ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಬದುಕನ್ನು ರೂಪಿಸಿಕೊಳ್ಳಬೇಕು. ಬಾಳೆ ಗಿಡಕ್ಕೊಂದು ಗೊನೆ ಇರುವಂತೆ ಬಾಳಿಗೊಂದು ಗುರಿ ಇರಲಿ. ಶಿಸ್ತು, ಸಂಯಮ, ಶ್ರದ್ಧೆ ಮತ್ತು ಪರಿಶ್ರಮ ಇದ್ದಲ್ಲಿ ಮಾತ್ರ ಗುರಿ ಸಾಧಿಸಲು ಸಾಧ್ಯ ಎಂದರು.
ಮಾನವ ಹಕ್ಕುಗಳ ಹೋರಾಟ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್. ತಿಮ್ಮಣ್ಣ ಮಾತನಾಡಿ, ಮಕ್ಕಳು ಮಾತೃಭಾಷೆಯಲ್ಲಿ ಕಲಿತರೆ ಭವಿಷ್ಯವಿಲ್ಲ ಎಂಬ ಮನಸ್ಥಿತಿ ಪಾಲಕರಲ್ಲಿ ಇರುವುದರಿಂದ ಇಂದು ಕನ್ನಡ ಭಾಷೆಗೆ ಆತಂಕ ಎದುರಾಗಿದೆ. ಯುವಜನತೆ ಕನ್ನಡ ಸಾಹಿತ್ಯ ಓದುವ ಮೂಲಕ ಕನ್ನಡದ ರಕ್ಷಣೆಗೆ ಮುಂದಾಗಬೇಕು ಎಂದರು.
ಸಮಿತಿ ಅಧ್ಯಕ್ಷ ಬಿ. ಕಲ್ಲೇಶಪ್ಪ ಮಾತನಾಡಿ ಕನ್ನಡವನ್ನು ವ್ಯವಹಾರಿಕವಾಗಿ ಬಳಸಿದಾಗ ಮಾತ್ರ ಭಾಷೆಯು ಬೆಳವಣಿಗೆ ಹೊಂದಲಿದೆ.
ಕನ್ನಡವು ವಿಶ್ವ ಲಿಪಿಯ ರಾಣಿಯಾಗಿದ್ದು ವಿಜ್ಞಾನ ಭಾಷೆಯಾಗಿ ರೂಪುಗೊಂಡಿದೆ. ಕನ್ನಡಿಗರು ಭಾಷೆಯ ಬಗ್ಗೆ ಕ್ರಿಯಾಶೀಲತೆ ಬೆಳೆಸಿಕೊಳ್ಳಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಕ ಸುರೇಶ್, ಸರ್ಕಾರಿ ಶಾಲೆ ಶಿಕ್ಷಕಿ ರೇಣುಕಾ, ಅಶೋಕ್, ಪುಟ್ಟಣ್ಣ, ಪಾಂಡುರಂಗ, ಗಿರೀಶ್, ತಿಪ್ಪಣ್ಣ, ಶಿವಣ್ಣ, ಪರಶುರಾಮ್, ಬಸಣ್ಣ, ಪರಶುರಾಮ್, ಚನ್ನವೀರಪ್ಪ ಇದ್ದರು.