

ದಾವಣಗೆರೆ: ಕನಕದಾಸರು ಸಮ ಸಮಾಜ ನಿರ್ಮಿಸಲು ಹೋರಾಟ ನಡೆಸಿದ ದಾರ್ಶನಿಕರು ಎಂದು ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಹೇಳಿದರು.
ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕುರುಬ ಸಮುದಾಯದ ಸಹಯೋಗದಲ್ಲಿ ನಗರದ ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೀರ್ತನೆಗಳ ಮೂಲಕ ಸಮಾಜ ಸುಧಾರಣೆಗೆ ಪ್ರಯತ್ನಿಸಿದ ಕನಕದಾಸರ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಂಡು ನಡೆ ನುಡಿಯಲ್ಲಿ ಬದಲಾವಣೆ ತಂದುಕೊಳ್ಳಬೇಕು. ಆಗ ಮಾತ್ರ ದಾರ್ಶನಿಕರ ಜಯಂತಿ ಆಚರಣೆಗೆ ಅರ್ಥ ಬರಲಿದೆ ಎಂದು ತಿಳಿಸಿದರು.
ಅಂಬೇಡ್ಕರ್, ಬಸವಣ್ಣ, ಕನಕದಾಸರ ಚಿಂತನೆಗಳು ಒಂದೇ ಆಗಿವೆ. ದಾರ್ಶನಿಕರ ಎಲ್ಲ ಅಂಶಗಳನ್ನು ಅಧ್ಯಯನ ಮಾಡಿಯೇ ಅಂಬೇಡ್ಕರ್ ಅವರು ಸಂವಿಧಾನ ನೀಡಿದ್ದಾರೆ. ಇದರಿಂದ ತಳ ಸಮುದಾಯಗಳು ಮುಂಚೂಣಿಗೆ ಬರಲು ಸಾಧ್ಯವಾಗಿದೆ ಎಂದರು.
ಪಾಲಿಕೆ ಮೇಯರ್ ಕೆ. ಚಮನ್‌ಸಾಬ್ ಮಾತನಾಡಿ, ನಾಡಿನಲ್ಲಿ ಅನೇಕ ದಾರ್ಶನಿಕರು, ಪ್ರವಾದಿಗಳು, ಸಂತರು, ಶರಣರು ಬಂದುಹೋಗಿದ್ದು, ಜನರು ಶಾಂತಿ ಮತ್ತು ಸೌಹಾರ್ದತೆಯಿಂದ ಬದುಕಬೇಕು ಎಂಬ ಸಂದೇಶಗಳನ್ನು ನೀಡಿದ್ದಾರೆ ಎಂದು ತಿಳಿಸಿದರು.
ಕನಕದಾಸರ ಕುರಿತು ಉಪನ್ಯಾಸ ನೀಡಿದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪ್ರಾಚಾರ್ಯ ಮಂಜಣ್ಣ ಕನಕದಾಸರು ದಾಸ ಪರಂಪರೆಯಲ್ಲಿ ಭಿನ್ನವಾಗಿರುವ ವ್ಯಕ್ತಿ. ಏಕೆಂದರೆ ಅವರು ಕೇವಲ ಕೀರ್ತನೆ ಮಾತ್ರ ಬರೆಯದೆ ಕವಿಯೂ ಕೂಡ ಆಗಿದ್ದರು. ಒಬ್ಬ ಕವಿಗಿರುವ ಸೂಕ್ಷ್ಮ ಮನಸ್ಸು ಹೊಂದಿದ್ದರಿಂದ ಅವರು ಸಮಾಜದ ಹುಳುಕುಗಳನ್ನು ಹೊರಗೆಳೆಯುವ ಪ್ರಯತ್ನ ಮಾಡಿದ್ದಾರೆ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಜಿಪಂ ಉಪ ಕಾರ್ಯದರ್ಶಿ ಕೃಷ್ಣನಾಯ್ಕ, ಪಾಲಿಕೆ ಉಪ ಮಹಾಪೌರ ಸೋಗಿ ಶಾಂತಕುಮಾರ್, ವಿಪಕ್ಷ ನಾಯಕ ಪ್ರಸನ್ನ ಕುಮಾರ್, ದೂಡಾ ಆಯುಕ್ತ ಹುಲ್ಲುಮನಿ ತಿಮ್ಮಣ್ಣ, ಕುರುಬ ಸಮಾಜದ ಜಿಲ್ಲಾಧ್ಯಕ್ಷ ಬಿ.ಎಚ್.ಪರಶುರಾಮಪ್ಪ, ಕಾರ್ಯದರ್ಶಿ ಲೋಕಿಕೆರೆ ಸಿದ್ದಪ್ಪ, ಮುಖಂಡ ಆನಂದಪ್ಪ ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಸ್ವಾಗತಿಸಿದರು.