ಚಿನ್ನ ಗೆದ್ದ ರಾಜ್ಯ ಕಬಡ್ಡಿ ತಂಡದಲ್ಲಿ ದುರ್ಗದ ಕಲಿಗಳು

Davangere, Kabaddi, Tournament,
Published on

ದಾವಣಗೆರೆ: ಉತ್ತರ ಪ್ರದೇಶದಲ್ಲಿ ಇತ್ತೀಚೆಗಷ್ಟೇ ಹಮ್ಮಿಕೊಂಡಿದ್ದ 21 ವರ್ಷದೊಳಗಿನ ಆಲ್ ಸ್ಟೂಡೆಂಟ್ಸ್ ನ್ಯಾಷನಲ್ ಗೇಮ್ಸ್‌ನ ಕಬಡ್ಡಿ ಟೂರ್ನಿಯಲ್ಲಿ ಚಿನ್ನದ ಪದಕ ಗೆದ್ದ ಕರ್ನಾಟಕ ರಾಜ್ಯ ತಂಡದಲ್ಲಿ ಚಿತ್ರದುರ್ಗದ ಇಬ್ಬರು ಆಟಗಾರರು ಪಾತ್ರಧಾರಿಗಳಾಗಿದ್ದಾರೆ.

ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಕರ್ನಾಟಕ ಕಬಡ್ಡಿ ತಂಡ, ನೇಪಾಳದಲ್ಲಿ ನಡೆಯಲಿರುವ ಆಲ್ ಸ್ಟೂಡೆಂಟ್ಸ್ ಇಂಟರ್‌ನ್ಯಾಷನಲ್ ಗೇಮ್ಸ್‌ಗೆ ಆಯ್ಕೆಯಾಗಿದೆ.

ಜ.8ರಿಂದ 10ರವರೆಗೆ 3 ದಿನಗಳ ಕಾಲ ಪಂದ್ಯಾವಳಿ ನಿಗದಿ ಮಾಡಲಾಗಿತ್ತು. ಆದರೆ 20 ತಂಡಗಳು ಮಾತ್ರ ಭಾಗವಹಿಸಿದ್ದರಿಂದ ಜ.9 ರಂದು ನಾಕೌಟ್ ಮಾದರಿಯಲ್ಲಿ ಎಲ್ಲ ಪಂದ್ಯಗಳನ್ನು ಆಡಿಸಲಾಯಿತು.

ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಮಹಾರಾಷ್ಟ್ರ ವಿರುದ್ಧ 3 ಅಂಕಗಳ ರೋಚಕ ಗೆಲುವು ಸಾಧಿಸಿತು. ಪ್ರಥಮಾರ್ಧದಲ್ಲಿ 21-20 ಅಂಕಗಳಿಂದ ಮುನ್ನಡೆ ಪಡೆದಿದ್ದ ಕರ್ನಾಟಕ ಅಂತಿಮವಾಗಿ 27-24ರಿಂದ ಜಯಭೇರಿ ಬಾರಿಸಿತು. ಮಹಾರಾಷ್ಟ್ರ ರನ್ನರ್ ಅಪ್, ತಮಿಳುನಾಡು ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟಿತು.

ಹೊಸದುರ್ಗ ತಾಲೂಕಿನ ಅತ್ತಿಮಗ್ಗೆ ಗ್ರಾಮದ ಚಿದಾನಂದ ಹಾಗೂ ಹೊಳಲ್ಕೆರೆ ತಾಲೂಕಿನ ತಾಳಿಕಟ್ಟೆ ಗ್ರಾಮದ ಶ್ರೀನಿವಾಸ್ ರಾಜ್ಯ ಕಬಡ್ಡಿ ತಂಡದಲ್ಲಿ ಆಡಿದ್ದರು. ತಂಡದಲ್ಲಿ ಆಲ್ರೌಂಡರ್ ಆಗಿದ್ದ ಚಿದಾನಂದ ಹಾಗೂ ಶ್ರೀನಿವಾಸ್ ಅತ್ಯುತ್ತಮ ಪ್ರದರ್ಶನ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net