ವೈದ್ಯ ವಿದ್ಯಾರ್ಥಿಗಳ ಶಿಷ್ಯವೇತನಕ್ಕೆ ಎಬಿವಿಪಿ ಮನವಿ

Davanagere JJM Medical College, Postgraduate Students, Scholarships,
Published on

ದಾವಣಗೆರೆ: ಜೆಜೆಎಂ ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗನಿರತ ಸಹ ವೈದ್ಯರು ಹಾಗೂ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳಿಗೆ 15 ತಿಂಗಳಿಂದ ಬಾಕಿ ಇರುವ ಶಿಷ್ಯವೇತನ ಕೊಡಿಸಿಕೊಡುವಂತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ನಗರ ಘಟಕದಿಂದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಅವರಿಗೆ ಶನಿವಾರ ಮನವಿಪತ್ರ ಸಲ್ಲಿಸಲಾಯಿತು.

ಶಿಷ್ಯವೇತನದ ಬಗ್ಗೆ ಅನೇಕ ಬಾರಿ ಮನವಿ ಮಾಡಿದ್ದರೂ ಸರ್ಕಾರವೇ ಇದನ್ನು ಭರಿಸುವುದಾಗಿ ಕಾಲೇಜು ಆಡಳಿತ ಮಂಡಳಿಯು ಅಸಡ್ಡೆ ಪ್ರದರ್ಶಿಸಿದೆ. ಆಡಳಿತಮಂಡಳಿಯೇ ಇದನ್ನು ಭರಿಸಬೇಕೆಂದು ಸರ್ಕಾರ ಕೂಡ ಹೇಳಿಕೆ ನೀಡಿದೆ.

ಕೋವಿಡ್ ಮಹಾಮಾರಿ ವಿರುದ್ಧ ಕಾಲೇಜು ವಿದ್ಯಾರ್ಥಿಗಳು ತಮ್ಮ ವೈದ್ಯಕೀಯ ವ್ಯಕ್ತಿಧರ್ಮವನ್ನು ನಿಭಾಯಿಸುತ್ತಿದ್ದಾರೆ. ಹಗಲು ರಾತ್ರಿ ಎನ್ನದೆ ಹೋರಾಟ ನಡೆಸಿದ್ದಾರೆ. ಅವರ ಮನೆಗಳಲ್ಲಿನ ಆರ್ಥಿಕ ಸಂಕಷ್ಟವಿದ್ದು, ವಿದ್ಯಾರ್ಥಿವೇತನವನ್ನೇ ನಂಬಿಕೊಂಡಿದ್ದಾರೆ.

ದೈನಂದಿನ ಊಟ ಹಾಗೂ ಇತರೆ ಮೂಲ ಸೌಕರ್ಯಗಳ ವೆಚ್ಚಕ್ಕಾಗಿ ಸಾಲ ಮಾಡುವ ಸ್ಥಿತಿ ಬಂದಿದೆ. ಕೂಡಲೇ ಸರ್ಕಾರ ಕ್ರಮ ಕೈಗೊಂಡು ವೈದ್ಯಕೀಯ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು. ಕಡೆಗಣಿಸಿದಲ್ಲಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಯಿತು.

ನಗರ ಘಟಕದ ಅಧ್ಯಕ್ಷ ಪವನ್ ರೇವಣಕರ್, ಡಾ.ರಾಹುಲ್, ಡಾ.ಹಿತ, ಡಾ. ಆಕಾಶ್, ಡಾ.ಅಶ್ವಿನ್, ಡಾ.ರೋಹಿತ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net