

ದಾವಣಗೆರೆ: ರಾಜ್ಯವ್ಯಾಪಿ ಶಿಕ್ಷಣ ಕ್ರಾಂತಿ ಮಾಡಿದ ಜಯದೇವ ಜಗದ್ಗುರುಗಳು ಇಡೀ ಮಾನವ ಕುಲಕ್ಕೆ ದೀಪಸ್ತಂಭವಾಗಿ ಎಲ್ಲರ ಬದುಕು ಬೆಳಗಿಸಿದ್ದಾರೆ ಎಂದು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಬಣ್ಣಿಸಿದರು.
ಜಯದೇವ ಜಗದ್ಗುರುಗಳ 150ನೇ ಜಯಂತಿ ಅಂಗವಾಗಿ ಇಲ್ಲಿನ ಶಿವಯೋಗಾಶ್ರಮದಲ್ಲಿ ಮಂಗಳವಾರ, ಶ್ರೀಗಳ ಕರ್ತೃ ಗದ್ದಿಗೆಗೆ ಪುಷ್ಪಾರ್ಚನೆ ಮಾಡಿ ಮಾತನಾಡಿ, ಎಲ್ಲ ವೃತ್ತಗಳನ್ನು ಬೆಳಗುವ ಹೈಮಾಸ್ಟ್ ದೀಪದಂತೆ ಶ್ರೀಗಳು ಎಲ್ಲರ ಬಾಳು ಬೆಳಗಿದ್ದಾರೆ ಎಂದರು.
ಬೆಂಗಳೂರು, ತುಮಕೂರು ಸೇರಿ ಅನೇಕ ಕಡೆಗಳಲ್ಲಿ ಜಯದೇವ ಶ್ರೀಗಳು ಸ್ಥಾಪಿಸಿದ ಉಚಿತ ಪ್ರಸಾದ ನಿಲಯಗಳಲ್ಲಿ ಓದಿದವರು ಇಂದು ದೇಶ-ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಮಾಜಿ ರಾಷ್ಟ್ರಪತಿ ಬಿ.ಡಿ. ಜತ್ತಿ, ಮಾಜಿ ಸಿಎಂ ಎಸ್. ನಿಜಲಿಂಗಪ್ಪ ಕೂಡ ಇಲ್ಲಿಯೇ ಓದಿದ್ದಾರೆ.
ಜಯದೇವ ಶ್ರೀಗಳು ಶೈಕ್ಷಣಿಕ ಕ್ರಾಂತಿ ಮಾಡದಿದ್ದರೆ ದೇಶ ಉದ್ದಾರ ಆಗುತ್ತಿರಲಿಲ್ಲ. ಇಂದು ಎಲ್ಲರಿಗೂ ಅನ್ನ, ಜ್ಞಾನ ಮತ್ತು ಬದುಕು ಸಿಗಲು ಶ್ರೀಗಳ ಸಮಾಜಮುಖಿ ಕಾರ್ಯಗಳು ಕಾರಣ. ಅವರನ್ನು ಸದಾ ಕಾಲ ಸ್ಮರಿಸಬೇಕು. ಅವರ ಆದರ್ಶದ ದಾರಿಯಲ್ಲಿ ನಡೆಯಬೇಕು ಎಂದರು.
ಮೈಸೂರು ಪ್ರಾಂತ್ಯದ ಅಂದಿನ ಬಜೆಟ್ ಮೊತ್ತ 45 ಲಕ್ಷ ರೂ. ಆಗಿದ್ದರೆ ಅದರಲ್ಲಿ 18 ಲಕ್ಷ ರೂ.ಗಳನ್ನು ಶಿಕ್ಷಣ ಸಂಸ್ಥೆಗೆ ನೀಡಿದವರು ಜಯದೇವ ಶ್ರೀಗಳು. ಈ ವಿಚಾರ ಅಂದಿನ ಮುರುಘಾರಾಜೇಂದ್ರ ವಿಜಯ ಎಂಬ ಪುಸ್ತಕದಲ್ಲಿ ದಾಖಲಾಗಿದೆ. ಅಂದು ಶಿಕ್ಷಣಕ್ಕೆ ನೀಡಿದ ಮೊತ್ತದ ಮೌಲ್ಯ ದೊಡ್ಡದು ಎಂದು ಹೇಳಿದರು.
ಸರ್ವಜನಾಂಗದ ಗುರುಗಳಾಗಿ ಸಂಕಟಗಳನ್ನು ದೂರ ಮಾಡುತ್ತಿದ್ದ ಜಯದೇವ ಶ್ರೀಗಳಿಗೆ ದಾವಣಗೆರೆ ಪ್ರಿಯವಾದ ಊರಾಗಿತ್ತು. ಇದು ಮುರುೇಶನ ರಾಜಧಾನಿ ಎನ್ನುತ್ತಿದ್ದರು. ಅವರ ಆಸೆಯಂತೆ ಇಲ್ಲಿಯೇ ಅವರ ಗದ್ದಿಗೆ ಸ್ಥಾಪಿಸಲಾಗಿದೆ.
ಅವರ ಜಯಂತಿ ಅಂಗವಾಗಿ ವರ್ಷಪೂರ್ತಿ ವಿವಿಧ ಕಾರ್ಯಕ್ರಮ ಸಂಘಟಿಸಲಾಗುತ್ತಿದೆ. ಸೆ.30ರಂದು ಜಯದೇವ ಶ್ರೀಗಳ 68ನೇ ಸ್ಮರಣೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ತಿಳಿಸಿದರು.
ಕರ್ನಾಟಕ ಏಕೀಕರಣ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿ ರಾಜ್ಯದಲ್ಲಿ ಸಂಪರ್ಕಿಸಿದ ಏಕೈಕ ಶ್ರೀಗಳೇ ಜಯದೇವ ಜಗದ್ಗುರುಗಳು. ಗಾಂಧೀಜಿ ಭೇಟಿ ಪ್ರಭಾವದಿಂದಾಗಿ ರೇಷ್ಮೆ ಬಟ್ಟೆಗೆ ತಿಲಾಂಜಲಿ ಹೇಳಿದ ಶ್ರೀಗಳು ಖಾದಿ ಬಟ್ಟೆಯತ್ತ ಒಲವು ತೋರಿದರು.ಕರ್ನಾಟಕದಲ್ಲಿ ಜಯದೇವ ಶ್ರೀಗಳು ಅಸ್ಪಶ್ಯತೆ ಕ್ರಾಂತಿ ಮಾಡಿದ್ದರು ಎಂದು ಗಾಂಧೀಜಿ ಪ್ರಸ್ತಾಪಿಸಿದ್ದ ಪತ್ರ ಸಬರಮತಿ ಆಶ್ರಮದಲ್ಲಿ ಸಿಕ್ಕಿದೆ. ಇದು ಸ್ವಾಮೀಜಿ ಅವರ ಸ್ಮರಣೋತ್ಸವದ ಪುಸ್ತಕದಲ್ಲಿ ಪ್ರಕಟ ಆಗಲಿದೆ ಎಂದೂ ಹೇಳಿದರು.
ಚಿತ್ರದುರ್ಗ ಬೃಹನ್ಮಠದ ನಿಯೋಜಿತ ಉತ್ತರಾಧಿಕಾರಿ ಬಸವಾದಿತ್ಯ ದೇವರು, ಶಿವಯೋಗಾಶ್ರಮ ಟ್ರಸ್ಟ್ ಮುಖಂಡರಾದ ಹಾಸಬಾವಿ ಕರಿಬಸಪ್ಪ, ಎಂ.ಜಯಕುಮಾರ, ಅಂದನೂರು ಮುಪ್ಪಣ್ಣ, ಎಸ್.ಓಂಕಾರಪ್ಪ, ಕಣಕುಪ್ಪಿ ಮುರುಗೇಶಪ್ಪ, ಎಂ.ಕೆ.ಬಕ್ಕಪ್ಪ, ಮುರುಘರಾಜೇಂದ್ರ ಚಿಗಟೇರಿ, ಲಂಬಿ ಮುರುಗೇಶ, ಟಿ.ಎಂ.ವೀರೇಂದ್ರ, ಬೆಳ್ಳೂಡಿ ಮಂಜುನಾಥ, ಸಂಗಣ್ಣ, ಚಿಗಟೇರಿ ಜಯದೇವ, ಕೀರ್ತಿ, ಶರಣಪ್ಪ, ಚನ್ನಬಸವ ಶೀಲವಂತ್, ರೋಷನ್, ಶಿವಬಸಮ್ಮ, ಲತಾ ಇತರರಿದ್ದರು