

ದಾವಣಗೆರೆ: ಕೆಎಸ್‌ಆರ್‌ಟಿಸಿ ಡಿಪೋ ನಿರ್ಮಾಣಕ್ಕೆ ಒತ್ತಾಯಿಸಿ ಪ್ರಗತಿಪರ ಸಂಘಟನೆಗಳು ಜಗಳೂರಿನಿಂದ ಸೋಮವಾರ ಆರಂಭಿಸಿದ್ದ ಕಾಲ್ನಡಿಗೆ ಜಾಥಾ ಮಂಗಳವಾರ, ದಾವಣಗೆರೆ ತಲುಪಿತು.
ಅಣಜಿಯಿಂದ ಶುರುವಾದ ಎರಡನೇ ದಿನದ ಯಾತ್ರೆ, ಮೆಳ್ಳೇಕಟ್ಟೆ, ಎಲೆಬೇತೂರು ಮುಖಾಂತರ ದಾವಣಗೆರೆ ಕೆಎಸ್‌ಆರ್‌ಟಿಸಿಗೆ ತೆರಳಿದ ಪ್ರತಿಭಟನಾಕಾರರು ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದರು.
ಹೋರಾಟಗಾರ, ವಕೀಲ ಆರ್.ಓಬಳೇಶ್ ಮಾತನಾಡಿ, ಡಿಪೋ ಸ್ಥಾಪಿಸಲು ಒತ್ತಾಯಿಸಿ ದಶಕಗಳಿಂದ ಹೋರಾಟ ನಡೆಸಲಾಗುತ್ತಿದೆ. ಜಗಳೂರು ಪಟ್ಟಣದಲ್ಲಿ ನಿಗದಿಪಡಿಸಿದ್ದ 51ನೇ ಸರ್ವೆ ನಂಬರ್‌ನ ಜಾಗ ಪ್ರಸ್ತಾವನೆಗೆ ಸೀಮಿತವಾಗಿದೆ. ಡಿಪೋ ನಿರ್ಮಿಸುವರೆಗೂ ಹೋರಾಟ ನಿಲ್ಲದು ಎಂದರು.
ಧನ್ಯಕುಮಾರ್ ಎಚ್.ಎಂ.ಹೊಳೆ ಮಾತನಾಡಿ, ತಾಲೂಕಿನ ಬಹುತೇಕ ಹಳ್ಳಿಗಳು ಸರ್ಕಾರಿ ಬಸ್‌ಗಳೇ ಕಂಡಿಲ್ಲ. ಜಗಳೂರು-ದಾವಣಗೆರೆ ಮಾರ್ಗದ ಬಸ್‌ಗಳು ತಡೆರಹಿತವಾಗಿ ಸಂಚರಿಸುತ್ತಿವೆ. ವಾರದೊಳಗೆ ಗ್ರಾಮೀಣ ಭಾಗಗಳಿಗೆ ಬಸ್ ಸೌಕರ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಕರುನಾಡ ನವನಿರ್ಮಾಣ ವೇದಿಕೆ ರಾಜ್ಯಾಧ್ಯಕ್ಷ ಮಹಾಲಿಂಗಪ್ಪ ಎಚ್.ಎಂ.ಹೊಳೆ, ಮಾತನಾಡಿ, ಎಐವೈಎಫ್ ಮುಖಂಡ ಮಾದಿಹಳ್ಳಿ ಮಂಜುನಾಥ್ ಜಗಳೂರಿನಲ್ಲಿ ಡಿಪೋ ಕಾಮಗಾರಿ ಶಂಕುಸ್ಥಾಪನೆಗೆ ದಿನಾಂಕ ನಿಗದಿಗೊಳಿಸಿ ಕೆಲ ಪಟ್ಟಭದ್ರ ಹಿತಾಸಕ್ತಿಗಳ ಒತ್ತಡಕ್ಕೆ ಮಣಿದ ಅಧಿಕಾರಿಗಳು ಕಾರ್ಯಕ್ರಮ ರದ್ದುಪಡಿಸಿದ್ದರು. ಇಂದಿನ ಪಾದಯಾತ್ರೆ ಅಧಿವೇಶನದಲ್ಲಿ ಧ್ವನಿಯಾಗಬೇಕು. ಸಚಿವರು, ಶಾಸಕರು ಚರ್ಚಿಸಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ ಹೆಬ್ಬಾಳ್ ಮಾತನಾಡಿ, ಡಿಪೋ ಸ್ಥಾಪನೆ ಸಂಬಂಧ ಮನವಿಯನ್ನು ಕೇಂದ್ರ ಕಚೇರಿಗೆ ರವಾನಿಸಲಾಗುವುದು. 9 ರಹದಾರಿಗಳಲ್ಲಿ ಬಸ್ ಸಂಚಾರಕ್ಕೆ ಸಮೀಕ್ಷೆ ನಡೆಸಿ ಹಂತ ಹಂತವಾಗಿ ಕಾರ್ಯಾಚರಣೆ ಮಾಡಲಾಗುವುದು ಎಂದು ಎಂದು ಭರವಸೆ ನೀಡಿದರು.
ಸತೀಶ್ ಮಲೆಮಾಚಿಕೆರೆ, ಅನಂತಮೂರ್ತಿ, ವಕೀಲ ಅಂಜಿನಪ್ಪ, ಶಿವಕುಮಾರ್, ಕುಮಾರ್ ಭರಮಸಮುದ್ರ, ಜೀವನ್, ಇಂದಿರಾ, ಪಲ್ಲಾಗಟ್ಟೆ ಸುಧಾ, ಶಶಿಕಲಾ, ಚಿರಂಜೀವಿ, ಹಫೀಜ್ ಉಲ್ಲಾ, ಸೂರಜ್ಜ, ಗೌರಿಪುರ ಸತ್ಯಮೂರ್ತಿ, ದೊಣೆಹಳ್ಳಿ ತಿಪ್ಪೇಸ್ವಾಮಿ, ಗುಮ್ಮನೂರು ಬಸವರಾಜ್, ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು, ಎಐವೈಎಫ್ ರಾಜ್ಯ ಕಾರ್ಯದರ್ಶಿ ಎಚ್.ಎಂ.ಸಂತೋಷ್ ,ಓಬಣ್ಣ, ಚೌಡಮ್ಮ, ಹನುಮಂತಪ್ಪ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.