

ದಾವಣಗೆರೆ: ನಗರದ ಅರಳಿಮರ ವೃತ್ತದಿಂದ ಅಶೋಕ ಚಿತ್ರಮಂದಿರವರೆಗೆ ಜಲಸಿರಿ ಯೋಜನೆಯಡಿ ಜು.20 ರಿಂದ ಸೆಪ್ಟೆಂಬರ್ 6 ವರೆಗೆ ಕುಡಿಯುವ ನೀರಿನ ಪೈಪ್ ಅಳವಡಿಸುವ ಕಾಮಗಾರಿ ನಡೆಯಲಿದ್ದು ಈ ಮಾರ್ಗದಲ್ಲಿ ಸಾರ್ವಜನಿಕರು ಸಹಕಾರ ನೀಡುವಂತೆ ಪಾಲಿಕೆ ಆಯುಕ್ತರು ಮನವಿ ಮಾಡಿದ್ದಾರೆ.
ನಿಗದಿತ ಮಾರ್ಗಗಳ ರಸ್ತೆಯ ಇಕ್ಕೆಲದಲ್ಲಿ ನೆಲ ಅಗೆತ ಹಾಗೂ ಯೋಜನೆಯ ಅವಶ್ಯಕತೆಗೆ ಅನುಗುಣವಾಗಿ ರಸ್ತೆ ಅಗೆದು ಪೈಪ್‌ಗಳನ್ನು ಅಳವಡಿಸಲಾಗುವುದು. ನಿತ್ಯ ಬೆಳಗ್ಗೆ 6.30 ರಿಂದ ರಾತ್ರಿ 9.30 ರವರೆಗೆ ಕಾಮಗಾರಿ ನಡೆಯಲಿದೆ.
ಕಾಮಗಾರಿ ಅವಧಿಯಲ್ಲಿ ಮನೆಗಳು, ಅಂಗಡಿ ಮುಂಗಟ್ಟು, ಸರ್ಕಾರಿ ಕಚೇರಿಗಳು, ಮಾರುಕಟ್ಟೆ ಪ್ರದೇಶ ಸಂಪರ್ಕಿಸುವ ರಸ್ತೆಗಳು, ಖಾಸಗಿ ಬಸ್ ನಿಲ್ದಾಣ ಹಾಗೂ ಇನ್ನಿತರ ಪ್ರದೇಶಗಳಲ್ಲಿ ಪೈಪ್‌ಗಳನ್ನು ಅಳವಡಿಸಲು ನೆಲ ಅಗೆತ ಮಾಡಿರುವ ಸ್ಥಳಗಳಲ್ಲಿ ಬ್ಯಾರಿಕೇಡ್, ಸಂಚಾರ ಸೂಚನಾ ಫಲಕ, ಸೂಕ್ತ ಸುರಕ್ಷತಾ ಕ್ರಮ ಕೈಗೊಳ್ಳಲಾಗುವುದು.
ಅಂಗಡಿ ಮುಂಗಟ್ಟು ಮಾಲೀಕರು, ಸಾರ್ವಜನಿಕರು ತಮ್ಮ ವಾಹನಗಳನ್ನು ಬೇರೆ ಸ್ಥಳದಲ್ಲಿ ನಿಲ್ಲಿಸಬೇಕು. ಶಾಲಾ ಮಕ್ಕಳು ಹಾಗೂ ವಾಹನ ಸವಾರರು ನಾಮಫಲಕದಲ್ಲಿ ಸೂಚಿಸಿದ ಸೂಚನೆಗಳನ್ನು ಪಾಲಿಸಿ, ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.