

ದಾವಣಗೆರೆ: ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುವಂತೆ ಪೀಡಿಸಿದ್ದಲ್ಲದೆ, ಫ್ಲೆಕ್ಸ್‌ನಲ್ಲಿ ಮಾನ ಹಾನಿಯಾಗುವಂತೆ ಪ್ರಕಟಿಸಿದ್ದ ಅಪರಾಧಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ ಪೋಕ್ಸೋ) ನ್ಯಾಯಾಲಯವು 6 ತಿಂಗಳ ಜೈಲು ಸಜೆ ವಿಧಿಸಿದೆ.
ನಿಟ್ಟುವಳ್ಳಿಯ ಅಲ್ತಾಫ್ ಶಿಕ್ಷೆಗೆ ಗುರಿಯಾದ ಅಪರಾಧಿ. 16 ವರ್ಷದ ಬಾಲಕಿಗೆ ನನ್ನನ್ನು ಪ್ರೀತಿಸು ಎಂದು ಪದೇ ಪದೇ ಪೀಡಿಸಿ ಚುಡಾಯಿಸುತ್ತಿದ್ದ ಅಲ್ತಾಫ್, ಪ್ರೀತಿ ಮಾಡದಿದ್ದಲ್ಲಿ ಮುಖಕ್ಕೆ ಆಸಿಡ್ ಎರಚುವ ಜತೆಗೆ ಅಪಹರಿಸಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ.
ಅಲ್ಲದೆ ವಾಟ್ಸಾೃಪ್‌ಗೆ ಡಿಪಿಯಲ್ಲಿದ್ದ ಬಾಲಕಿ ಭಾವಚಿತ್ರವನ್ನು ತನ್ನ ಫೋಟೋ ಜತೆ ಸೇರಿಸಿ ಎಡಿಟ್ ಮಾಡಿ ಫ್ಲೆಕ್ಸ್‌ನಲ್ಲಿ ಮುದ್ರಿಸಿ ನಗರದ ವೃತ್ತವೊಮದರಲ್ಲಿ 2022ರ ಮಾ. 22ರಂದು ಕಟ್ಟಿದ್ದ.
ಬಾಲಕಿಯ ತಂದೆ ಈ ಬಗ್ಗೆ ಮಹಿಳಾ ಠಾಣೆಗೆ ದೂರು ಸಲ್ಲಿಸಿದ್ದರು. ತನಿಖಾಧಿಕಾರಿ ಪಿಐ ಮಲ್ಲಮ್ಮ ಚೌಬೆ ಅವರು ಅಲ್ತಾಫ್ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಆರೋಪ ಸಾಬೀತಾದ್ದರಿಂದ ನ್ಯಾಯಾಧೀಶ ಶ್ರೀರಾಮ ನಾರಾಯಣ ಹೆಗಡೆ ಅವರು ಶುಕ್ರವಾರ, ಶಿಕ್ಷೆ ಪ್ರಕಟಿಸಿದರು. 10 ಸಾವಿರ ರೂ.ಗಳ ದಂಡದ ಮೊತ್ತವನ್ನು ಸಂತ್ರಸ್ತೆಗೆ ನೀಡುವಂತೆಯೂ ತೀರ್ಪು ನೀಡಿದರು. ಸರ್ಕಾರದ ಪರ ಸರ್ಕಾರಿ ಅಭಿಯೋಜಕಿ ಸುನಂದಾ ಮಡಿವಾಳರ್ ವಕಾಲತ್ತು ವಹಿಸಿದ್ದರು.