ಮಳೆ ಆರ್ಭಟಕ್ಕೆ ಮನೆ, ಟಿಸಿ ಹಾನಿ

Davanagere Davangere, Jagalur, Rain, Damage,
Published on

ಜಗಳೂರು: ಪಟ್ಟಣ ಸೇರಿ ತಾಲೂಕಿನ ವಿವಿಧೆಡೆ ಶನಿವಾರ ರಾತ್ರಿ ಭಾರಿ ಗಾಳಿ ಸಹಿತ ಸುರಿದ ಮಳೆಗೆ ಆಟೋ, ವಿದ್ಯುತ್ ಕಂಬ, 2 ವಿದ್ಯುತ್ ಪರಿವರ್ತಕಗಳು, ಮನೆ, ಮರಗಳು ಹಾನಿಯಾಗಿವೆ.

ಸಂಜೆ ಭಾರಿ ಗಾಳಿಯೊಂದಿಗೆ ಆರಂಭಗೊಂಡ ಮಳೆ ಅರ್ಧ ತಾಸಿಗೂ ಹೆಚ್ಚು ಸುರಿಯಿತು. ಪಟ್ಟಣದ ಓಂಕಾರೇಶ್ವರ ಬಡಾವಣೆ, ಮರೇನಹಳ್ಳಿ ರಸ್ತೆಯ ಪೊಲೀಸ್ ವಸತಿ ಗೃಹ ಸಮೀಪದ ವಿದ್ಯುತ್ ಪರಿವರ್ತಕಗಳು ಸಿಡಿಲು ಬಡಿದು ಸುಟ್ಟಿವೆ.

ಕೆಚ್ಚೇನಹಳ್ಳಿ 3, ಕೆಳಗೋಟೆ 2, ಸಾಗಲಕಟ್ಟೆಯಲ್ಲಿ 2 ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಚಿಕ್ಕಅರಕೆರೆ ಗ್ರಾಮದ ಕಮಲಮ್ಮ, ಕೆಂಚಮ್ಮ ಎಂಬುವರಿಗೆ ಸೇರಿದ ಮನೆ ಚಾವಣಿ (ಸಿಮೆಂಟ್ ಶೀಟ್) ಹಾರಿ ಹೋಗಿ ಪುಡಿ ಪುಡಿಯಾಗಿವೆ.

ಹಾನಿಯಿಂದ ಕುಟುಂಬಸ್ಥರು ಸಂತ್ರಸ್ತರಾಗಿದ್ದು, ಸೂರಿಲ್ಲದೆ ಬೀದಿಯಲ್ಲಿ ಜೀವನ ಸಾಗಿಸುವಂತಾಗಿದೆ. ಚಿಕ್ಕರಕೆರೆ ಹೊಸೂರು ಗ್ರಾಮದ ಮಂಜುನಾಥ್ ಎಂಬುವವರಿಗೆ ಸೇರಿದ ಪ್ಯಾಸೆಂಜರ್ ಆಟೋ ಮೇಲೆ ಮರ ಬಿದ್ದಿದೆ. ಜಗಳೂರು 10.3 ಮಿಮೀ, ಬಿಳಿಚೋಡು 24 ಸೇರಿ ವಿವಿಧೆಡೆ 6.86 ಮಿಮೀ ಮಳೆಯಾಗಿರುವ ವರದಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net