

ದಾವಣಗೆರೆ: ಮ್ಯಾಂಚೆಸ್ಟರ್ ಆಫ್ ಕರ್ನಾಟಕ ಖ್ಯಾತಿಯುಳ್ಳ ದಾವಣಗೆರೆಯಲ್ಲಿ ದೊಡ್ಡ ಕೈಗಾರಿಕೆಗಳು, ಐಟಿಬಿಟಿ ಬಾರದಿರುವುದು ದುರದೃಷ್ಟಕರ ಎಂದು ಇನ್ಸೈಟ್ಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕ ಜಿ.ಬಿ. ವಿನಯ್‌ಕುಮಾರ್ ವಿಷಾದಿಸಿದರು.
ನಗರದ ಯುಬಿಡಿಟಿ ಕಾಲೇಜಿನಲ್ಲಿ ಏರ್ಪಡಿಸಿದ್ದ ಎಲೆಕ್ಟ್ರಾನಿಕ್ ಆ್ಯಂಡ್ ಇನ್ಸ್ಟ್ರುಮೆಂಟೇಶನ್ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಪಾಲ್ಗೊಂಡು ಮಾತನಾಡಿದರು.
ರಾಜ್ಯದ ಮಧ್ಯಬಿಂದು ದಾವಣಗೆರೆ, ಈ ಹೊತ್ತಿಗಾಗಲೇ ಇಂಡಸ್ಟ್ರಿಯಲ್, ಐಟಿಬಿಟಿ ಹಬ್ ಆಗಬೇಕಿತ್ತು. ವಿಶ್ವದರ್ಜೆಯ ಶಾಲಾ- ಕಾಲೇಜುಗಳು, ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳು ಬರಲು ಕೆಲವರು ಬಿಡುತ್ತಿಲ್ಲ. ಹಾಗಾಗಿ, ಬೆಳೆಯಲು ಅವಕಾಶ ಇಲ್ಲದಂತಾಗಿದೆ ಎಂದು ಹೇಳಿದರು.
ಹಿಂದಿದ್ದ ಕಾಟನ್, ರೈಸ್ ಮಿಲ್‌ಗಳು ಇಂದು ಕಡಿಮೆಯಾಗಿವೆ. ಸಕ್ಕರೆ ಕಾರ್ಖಾನೆಗಳು, ಹೈಸ್ಕೂಲ್, ಸರ್ಕಾರಿ ಶಾಲೆಗಳು, ಖಾಸಗಿ ಶಾಲೆ ಮತ್ತು ಕಾಲೇಜುಗಳು, ಆಸ್ಪತ್ರೆಗಳು ಹೆಚ್ಚಾಗಿವೆ. ಎಕೆಕ್ಟ್ರಾನಿಕ್ಸ್ ವಿಭಾಗದ ಯಾವ ಕೈಗಾರಿಕೆಗಳೂ ಇಲ್ಲಿಲ್ಲ. ಐಟಿಬಿಟಿಯಲ್ಲೂ ನಾವು ಹಿಂದಿದ್ದೇವೆ . ಎಲ್ಲರೂ ಇದರ ಬಗ್ಗೆ ಗಂಭೀರತೆ ಅರಿತು ಯೋಚಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.
ಗುಣಮಟ್ಟದ ವಿಶ್ವವಿದ್ಯಾನಿಲಯಗಳಲ್ಲಿ ಓದಲು ಪ್ರಯತ್ನಿಸಿ. ಆಗದಿದ್ದರೆ ಇಲ್ಲಿನ ಶಿಕ್ಷಣ ಸಂಸ್ಥೆಗಳಲ್ಲಿ ಸೇರಿ ಕಷ್ಟಪಟ್ಟು ಓದಿ. ತಂತ್ರಜ್ಞಾನ, ಆಗುತ್ತಿರುವ ಬದಲಾವಣೆ, ಬರುತ್ತಿರುವ ಹೊಸ ಹೊಸ ಟೆಕ್ನಾಲಜಿ ಬಗ್ಗೆ ಜ್ಞಾನ ಪಡೆದುಕೊಳ್ಳಿ. ಆಗದು ಎಂದು ಕುಳಿತರೆ ಏನೂ ಆಗುವುದಿಲ್ಲ. ನಮ್ಮಿಂದ ಸಾಧ್ಯವೆಂದುಕೊಂಡು ಮುನ್ನಡೆದರೆ ಫಲ ನಿರೀಕ್ಷಿತ ಎಂದು ಕರೆ ನೀಡಿದರು.
ಅತ್ಯುನ್ನತ ಸಂಸ್ಥೆಗಳಲ್ಲಿ ಪ್ರತಿಭೆ ಅನಾವರಣಗೊಳಿಸಲು, ಹೊಸದಾಗಿ ಆವಿಷ್ಕರಿಸಲು, ಜ್ಞಾನ ಹೆಚ್ಚಿಸಿಕೊಳ್ಳಲು ಹೆಚ್ಚಿನ ಅವಕಾಶ ಸಿಗುತ್ತವೆ. ಹಾಗಾಗಿ, ಇಲ್ಲಿ ವಿದ್ಯಾರ್ಥಿಗಳು ಸೇರಬೇಕೆಂಬ ಹೆಬ್ಬಯಕೆ ಹೊಂದಿರುತ್ತಾರೆ. ಪಾಲಕರು ಸಹ ಮಕ್ಕಳನ್ನು ಸೇರಿಸಲು ಆಸಕ್ತಿ ತೋರುತ್ತಾರೆ. ಹೊಸ ಸಂಶೋಧನೆ ಜತೆಗೆ ಪಠ್ಯೇತರ ಚಟುವಟಿಕೆಗಳು, ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಆಗ ಅವಕಾಶಗಳು ನಿಮ್ಮನ್ನೇ ಹುಡುಕಿಕೊಂಡು ಬರುತ್ತವೆ ಎಂದು ಕಿವಿಮಾತು ಹೇಳಿದರು.
ಯುವಪೀಳಿಗೆ ದೊಡ್ಡ ದೊಡ್ಡ ಕನಸು ಕಾಣಬೇಕು. ಆಗ ಕನಸು ನನಸಾಗುತ್ತದೆ. ಯಾವುದೇ ಜಿಲ್ಲೆಗಳಲ್ಲಿದ್ದರೂ ನಾನು ಯಾರಿಗೂ ಸಚಿವರಿಗೆ ಹಣ ಕೊಟ್ಟು ಹುದ್ದೆ ಕೊಡಿಸಬೇಕಿಲ್ಲ. ಇನ್ಸೈಟ್ಸ್ ಸಂಸ್ಥೆಯಲ್ಲಿ ಓದಿದವರು ಅವರ ಪರಿಶ್ರಮದಿಂದಲೇ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ಆಸಕ್ತಿ ಇರುವ ಕ್ಷೇತ್ರದಲ್ಲಿ ಹೆಚ್ಚು ಅವಕಾಶಗಳನ್ನು ಗಿಟ್ಟಿಸಿಕೊಳ್ಳಬಹುದು. ಕೌಶಲ್ಯ, ಸತತ ಪರಿಶ್ರಮ, ತಿಳಿದುಕೊಳ್ಳುವ ಆಸಕ್ತಿ, ಹುಡುಕುವ ತುಡಿತ, ಉತ್ತಮ ವ್ಯಕ್ತಿತ್ವ ಸೇರಿದಂತೆ ಅತ್ಯುತ್ತಮ ಗುಣಗಳನ್ನು ಬೆಳೆಸಿಕೊಂಡರೆ ಜೀವನದಲ್ಲಿ ಉನ್ನತ ಹುದ್ದೆಗೇರಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಕಾಲೇಜಿನ ಪ್ರಾಚಾರ್ಯ ಡಾ. ಡಿ.ಪಿ. ನಾಗರಾಜಪ್ಪ, ಉಪನ್ಯಾಸಕ ಸಿಬ್ಬಂದಿ ಇದ್ದರು.