

ದಾವಣಗೆರೆ: ಮಾನವರ ಸುಖ, ಶಾಂತಿಯೇ ಎಲ್ಲ ಧರ್ಮಗಳ ಧ್ಯೇಯೋದ್ದೇಶ ಎಂದು ವಾರಣಸಿ ಕಾಶಿಪೀಠದ ಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದರು ತಿಳಿಸಿದರು.
ಚನ್ನಗಿರಿ ಪಟ್ಟಣದ ಹಾಲಸ್ವಾಮಿ ಸಮುದಾಯ ಭವನದಲ್ಲಿ ವೀರಶೈವ ಲಿಂಗಾಯತ ಸಮಾಜ ಮತ್ತು ತಾಲೂಕು ಪುರೋಹಿತ ಬಳಗ, ಹೊದಿಗೆರೆಯ ಶ್ರೀ ದೈವಸಂಸ್ಕೃತಿ ಪ್ರತಿಷ್ಠಾನ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಂಗೀತಯುಕ್ತ ಇಷ್ಟಲಿಂಗ ಮಹಾಪೂಜೆ, ಧರ್ಮ ಜನಜಾಗೃತಿ ಸಮಾರಂಭದಲ್ಲಿ ಮಾತನಾಡಿದರು.
ಹಿಂದು ಸನಾತನ ಧರ್ಮ ಹಳೆಯ ಮತ್ತು ವೈದಿಕ ಧರ್ಮವಾಗಿದೆ. ಯುಗ ಆರಂಭದಿಂದಲೇ ಧರ್ಮವೂ ಪ್ರಾರಂಭವಾಗಿದೆ. ಮಠಗಳು, ಪೀಠಗಳು, ಸಂತರು ಜನರ ಶ್ರೇಯಸ್ಸನ್ನು ಬಯಸುತ್ತಾರೆ ಎಂದು ಹೇಳಿದರು.
ಮನುಕುಲಕ್ಕೆ ಕಷ್ಟ ಬಂದಾಗ ಶಾಸ್ತ್ರ ಆಧಾರವಾಗಿಟ್ಟುಕೊಂಡು ಅವುಗಳಿಗೆ ಪರಿಹಾರ ನೀಡುವ ಕೆಲಸ ಮಠ, ಮಾನ್ಯಗಳು ಮಾಡುತ್ತ ಬಂದಿವೆ ಎಂದರು.
ಇಂದು ವೈದ್ಯಕೀಯ ಮಾಫಿಯಾ ಜನರನ್ನು ಸುಲಿಗೆ ಮಾಡುತ್ತಿದೆ. ರೋಗಿಗಳು ವೈದ್ಯರ ಮೇಲೆ ನಂಬಿಕೆ ಇಟ್ಟು ಹೋಗಿ ಮೋಸಕ್ಕೆ ಒಳಗಾಗುತ್ತಿದ್ದಾರೆ. ಸಣ್ಣ ಕಾಯಿಲೆ ಚಿಕಿತ್ಸೆಗೂ ನೂರಾರು ಪರೀಕ್ಷೆ ಮಾಡುವ ನೆಪದಲ್ಲಿ ವೈದ್ಯರು ಹಣ ಸುಲಿಗೆಗೆ ನಿಂತಿದ್ದಾರೆ. ಆದರೆ, ಕೆಲವು ವೈದ್ಯರು ಉತ್ತಮವಾಗಿದ್ದಾರೆ. ಕೆಟ್ಟ ವೈದ್ಯರಿಂದ ವೈದ್ಯಲೋಕಕ್ಕೆ ಕೆಟ್ಟ ಹೆಸರು ಬಂದಿದೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ರುದ್ರೇಗೌಡ ಮಾತನಾಡಿ, ನಾವು ಧರ್ಮ ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಣೆ ಮಾಡುತ್ತದೆ. ಇತ್ತೀಚೆಗೆ ಪುರುಷರು ಧರ್ಮದ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ. ಮಹಿಳೆಯರಿಂದ ಧರ್ಮ ಉಳಿಯುತ್ತಿದೆ. ಕುಟುಂಬದಲ್ಲಿ ಮಕ್ಕಳಿಗೆ ದೇಶಭಕ್ತಿ ಮತ್ತು ಧರ್ಮದ ಸಂಸ್ಕಾರ ಕಲಿಸಬೇಕು. ಧರ್ಮ ಕೆಡಿಸುವ ದುಷ್ಟಶಕ್ತಿಗಳಿಗೆ ಕಡಿವಾಣ ಹಾಕಲು ಮಠಾಧೀಶರ ಆಶೀರ್ವಾದ ಬೇಕು ಎಂದರು.
ಇದೇ ಸಂದರ್ಭದಲ್ಲಿ ತಾಲೂಕಿನ ಹೊದಿಗೆರೆ ಶ್ರೀದೈವ ಸಂಸ್ಕೃತಿ ಪ್ರತಿಷ್ಠಾನ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಶ್ರೀ ಬೂದಿಸ್ವಾಮಿ ಬರೆದ ಸಂಕಷ್ಟ ಹರ ಚತುರ್ಥಿ ವಿನಾಯಕ ವೃತ ಪುಸ್ತಕ ಬಿಡುಗಡೆಗೊಳಿಸಲಾಯಿತು.
ಬೆಳಗ್ಗೆ ಸಂಗೀತಯುಕ್ತ ಇಷ್ಟಲಿಂಗ ಮಹಾಪೂಜೆ ನೆರವೇರಿಸಲಾಯಿತು. ಶನಿವಾರ ಸಂಜೆ ಪಟ್ಟಣದಲ್ಲಿ ಪೂರ್ಣಕುಂಭದೊಂದಿಗೆ ಸ್ವಾಗತ ಮತ್ತು ವಿವಿಧ ಕಲಾತಂಡಗಳು, ಭಕ್ತರೊಂದಿಗೆ ರಾಜಬೀದಿಗಳಲ್ಲಿ ಮೆರವಣಿಗೆ ಮೂಲಕ ಶ್ರೀಗಳ ಪುರಪ್ರವೇಶ ನಡೆಯಿತು.
ಬಾಳೆಹೊನ್ನೂರು ಶಾಖಾಮಠ ಎಡೆಯೂರು ಕ್ಷೇತ್ರ ಶ್ರೀ ರೇಣುಕ ಶಿವಾಚಾರ್ಯ ಶ್ರೀ, ತಾವರೆಕೆರೆ ಶಿಲಾಮಠ ಶ್ರೀ ಡಾ.ಅಭಿನವ ಸಿದ್ದಲಿಂಗ ಶಿವಾಚಾರ್ಯ ಶ್ರೀ, ಅಕ್ಕಿಅಲೂರು ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಶ್ರೀ, ಚನ್ನಗಿರಿ ಹಾಲಸ್ವಾಮಿ ವಿರಕ್ತಮಠ ಡಾ.ಬಸವಜಯಚಂದ್ರ ಶ್ರೀ, ಚನ್ನಗಿರಿ ಹಾಲಸ್ವಾಮಿ ವಿರಕ್ತಮಠ ಶ್ರೀ ಡಾ.ಬಸವಜಯಚಂದ್ರ ಶ್ರೀ, ಬಸವಾಪಟ್ಟಣ ಗವಿಮಠ ಶ್ರೀ ಶಿವಯೋಗಿ ಶಿವಕುಮಾರ ಹಾಲಸ್ವಾಮಿ ಇತರರು ಸಾನ್ನಿಧ್ಯ ವಹಿಸಿದ್ದರು.
ತುಮ್‌ಕೋಸ್ ಮಾಜಿ ಅಧ್ಯಕ್ಷ ಎಚ್.ಎಸ್. ಶಿವಕುಮಾರ್, ಜಿಪಂ ಮಾಜಿ ಅಧ್ಯಕ್ಷೆ ಮಂಜುಳಾ ಟಿವಿ ರಾಜುಪಟೇಲ್, ವೀರಶೈವ ಸಮಾಜದ ಗೌರವಾಧ್ಯಕ್ಷ ರಾಜಶೇಖರಯ್ಯ, ಪುರಸಭೆ ಸದಸ್ಯ ಬಿ.ಆರ್.ಹಾಲೇಶ್, ಬಿ.ಆರ್. ಮಂಜುನಾಥ್ ಇತರರಿದ್ದರು.
---