ಎರಡನೇ ಒಳಾಂಗಣ ಸ್ಟೇಡಿಯಂಗೆ ಅಂತಿಮ ಸ್ಪರ್ಶ   ಅನಿಲ್ ಕುಂಬ್ಳೆ ಮೈದಾನದಲ್ಲಿನ್ನು ಕ್ರೀಡೆಗಳ ರಂಗು

pixlr_20240724075847133.jpg
Published on

ಡಿ.ಎಂ. ಮಹೇಶ್, ದಾವಣಗೆರೆ
ಭಾರತದ ಮಾಜಿ ಕ್ರಿಕೆಟಿಗ, ಲೆಗ್‌ಸ್ಪಿನ್ ಬೌಲರ್ ಅನಿಲ್ ಕುಂಬ್ಳೆ 1999ರ ಫೆ. 7ರಂದು ನವದೆಹಲಿಯ ಮೈದಾನದಲ್ಲಿ ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್ ಕಬಳಿಸಿದ ಐತಿಹಾಸಿಕ ದಿನ. ಅವರ ಈ ವಿಶೇಷ ಸಾಧನೆಗೆ 2025ಕ್ಕೆ ಬೆಳ್ಳಿ ಹಬ್ಬದ ವರ್ಷ  ತುಂಬಲಿದೆ.
10 ವಿಕೆಟ್ ಪಡೆದ ಸ್ಮರಣಾರ್ಥ, ದಾವಣಗೆರೆ ನಗರಪಾಲಿಕೆಯಿಂದ ಡಿಸಿಎಂ ಟೌನ್‌ಶಿಪ್‌ನಲ್ಲಿ 2.1 ಎಕರೆ ಜಾಗ ಮೀಸಲಿಟ್ಟು ಅನಿಲ್ ಕುಂಬ್ಳೆ ಆಟದ ಮೈದಾನ ಎಂದು ಹೆಸರಿಟ್ಟು ಎರಡು ದಶಕವೇ ಕಳೆದಿವೆ. ಇದೀಗ ಬಹು ವಿಧದ ಕ್ರೀಡೆಗಳ ಒಳಾಂಗಣ ಕ್ರೀಡಾಂಗಣದ ಕಟ್ಟಡವೇ ಈ ಜಾಗದಲ್ಲಿ ಮೇಲೆದ್ದು ನಿಂತಿದೆ.
ಎಸ್.ಟಿ.ವೀರೇಶ್ ಮೇಯರ್ ಆಗಿದ್ದಾಗ ಒಳಾಂಗಣ ಕ್ರೀಡಾಂಗಣಕ್ಕೆ ಪ್ರಸ್ತಾವನೆ ಸಿದ್ಧಪಡಿಸಿ ಕಟ್ಟಡಕ್ಕೆ ಮಂಜೂರಾತಿ ದೊರೆತಿತ್ತು. ದಾವಣಗೆರೆ ಸ್ಮಾರ್ಟ್‌ಸಿಟಿ ಲಿಮಿಟೆಡ್‌ನಿಂದ 6.5 ಕೋಟಿ ರೂ. ಅನುದಾನದಲ್ಲಿ ಹುಬ್ಬಳ್ಳಿಯ ರಾಜಾಸಾಬ್ ಅಲಿಸಾಬ್ ನದಾಫ್ ಏಜೆನ್ಸಿ ಈ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಿದೆ.
35-45 ಮೀ. ಸುತ್ತಳತೆಯಲ್ಲಿ ಕ್ರೀಡಾಂಗಣದ ಕಟ್ಟಡ ತಲೆ ಎತ್ತಿದೆ. ಕಬ್ಬಿಣ ಶೀಟ್‌ನ ಚಾವಣಿ ಇದಕ್ಕಿದೆ. ಅಂದುಕೊಂಡಂತೆ ಕೆಲಸ ಮುಗಿದಲ್ಲಿ ಸೆಪ್ಟೆಂಬರ್‌ನಲ್ಲಿ ಉದ್ಘಾಟನೆ ಆಗಲಿದೆ. ಏನೇನಿವೆ ಸೌಲಭ್ಯಗಳು
ನೆಲಮಹಡಿಯಲ್ಲಿ 20-40 ಮೀ. ವಿಸ್ತೀರ್ಣದ ಒಳಾಂಗಣ ಸಭಾಂಗಣವಿದ್ದು, 4 ಬಾಲ್‌ಬ್ಯಾಡ್ಮಿಂಟನ್ ಅಂಕಣಗಳಿಗೆ ಅವಕಾಶ ಕಲ್ಪಿಸಲಾಗಿದೆ. ವುಡನ್ ಫ್ಲೋರಿಂಗ್‌ನ ಕೆಲಸ ಇನ್ನಷ್ಟೇ ಆಗಬೇಕಿದೆ. ಇಲ್ಲಿ ಅಂಕಣದಂಚಿನ ಬ್ಯಾಕ್‌ಸ್ಟಾಪ್ ಮೂವೆಬಲ್ ಆಗಿರುವ ಹಿನ್ನೆಲೆಯಲ್ಲಿ ಇದೇ ಸಭಾಂಗಣದಲ್ಲಿ ಒಂದು ಬಾಸ್ಕೆಟ್‌ಬಾಲ್ ಅಂಕಣಕ್ಕೂ ಅವಕಾಶ ಮಾಡಿಕೊಳ್ಳಲಾಗಿದೆ.
ಸಭಾಂಗಣದ ಪಕ್ಕದಲ್ಲಿ ಕಚೇರಿ ಕೊಠಡಿ, ಪ್ರಥಮ ಚಿಕಿತ್ಸಾ ಕೊಠಡಿ, ಮಹಿಳೆಯರು ಮತ್ತು ಪುರುಷರ ಪ್ರತ್ಯೇಕ ಡ್ರೆಸ್ಸಿಂಗ್ ರೂಂ, ವಾಶಿಂಗ್ ರೂಂಗಳಿವೆ. ಒಂದು ಜಿಮ್ ಕೊಠಡಿ ಕೂಡ ಲಭ್ಯವಿದ್ದು, ಇಲ್ಲಿ ಎಂಟು ಮಂದಿ ಕುರುವ ಸಾಮರ್ಥ್ಯವುಳ್ಳ ಮಲ್ಟಿ ಜಿಮ್ ಯಂತ್ರ, ಮೂರು ಥ್ರೆಡ್‌ಮಿಲ್ ಇತರೆ ಯಂತ್ರೋಪಕರಣಗಳು ಬರಲಿವೆ. ಯಂತ್ರೋಪಕರಣ ಹಾಗೂ ಜನರೇಟರ್ ಕೊಠಡಿಗಳಿವೆ. ವಿಕಲಾಂಗರಿಗೆ ಪ್ರತ್ಯೇಕ ಶೌಚಗೃಹವಿದೆ.
ಮೊದಲ ಮಹಡಿಯಲ್ಲಿ 2 ಟೇಬಲ್ ಟೆನಿಸ್ ಜತೆಗೆ ಕೇರಂ, ಚೆಸ್ ಕ್ರೀಡೆಗಳಿಗೆ ಅವಕಾಶವಿದೆ. ಯೋಗಾಸನ, ಧ್ಯಾನಕ್ಕೆ ಪ್ರತ್ಯೇಕ ಸಭಾಂಗಣ ನಿರ್ಮಿಸಲಾಗಿದೆ. ಕಟ್ಟಡದ ಹೊರಾಂಗಣದಲ್ಲಿ ಸಾರ್ವಜನಿಕರ ವಾಯುವಿಹಾರಕ್ಕಾಗಿ 350 ಮೀ. ಉದ್ದದ ವಾಕಿಂಗ್ ಪಾತ್ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.
ಒಂದು ಕೊಳವೆಬಾವಿ ಜತೆಗೆ ಜಲಸಿರಿ ಮೂಲಕ ಕುಡಿವ ನೀರಿನ ಅನುಕೂಲತೆ ಇಲ್ಲಿದೆ. ಒಂದು ಅಕ್ವಾಗಾರ್ಡ್ ವಾಟರ್ ಫಿಲ್ಟರ್ ಅಳವಡಿಸಲಾಗುತ್ತಿದೆ. ಪೇಂಟಿಂಗ್ ಇನ್ನಿತರೆ ಕೆಲಸ ಬಿರುಸಾಗಿದೆ. ಮಳೆ ನೀರು ಸಂಗ್ರಹಣೆಗೂ ಪ್ರತ್ಯೇಕ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಹೊರಾಂಗಣದಲ್ಲಿ ಲ್ಯಾಂಡ್ ಸ್ಕೇಪಿಂಗ್ ಕೆಲಸ ಬಾಕಿ ಇದೆ. ಕ್ರೀಡಾಂಗಣದ ಎಡಭಾಗದಲ್ಲಿ ವಾಹನ ನಿಲುಗಡೆಗೆ ಸ್ಥಳ ನಿಗದಿ ಮಾಡಲಾಗಿದೆ. ಒಟ್ಟು ಎರಡು ಪ್ರವೇಶ ದ್ವಾರವಿದ್ದು ಒಂದು ಬಂದ್ ಆಗಿರಲಿದೆ.
ಪ್ರೇಕ್ಷಕರ ಗ್ಯಾಲರಿಯೇ ಚಿಕ್ಕದು!
ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರದ ಸಲಹೆ ಮೇರೆಗೆ ನಿರ್ಮಿಸಲಾಗಿದೆ ಎನ್ನಲಾದ ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಗ್ಯಾಲರಿಯೇ ಚಿಕ್ಕದಾಗಿದೆ! ಮೊದಲ ಮಹಡಿಯಲ್ಲಿ ಸೀಮಿತ ಸಂಖ್ಯೆಯ ಕ್ರೀಡಾಸಕ್ತರು ಕೂತು ನೋಡುವ ಅವಕಾಶವಿದೆ. ಹೆಚ್ಚು ಜನರಿಗೆ ಅವಕಾಶ ನೀಡಿದ್ದರೆ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟ ನಡೆಸಬಹುದಿತ್ತು ಎನ್ನುತ್ತಾರೆ ಕ್ರೀಡಾಪಟುಗಳು.
ಸ್ಟೇಡಿಯಂಗೆ ಯಾರ ಹೆಸರು?
ಕಾಮಗಾರಿ ಪೂರ್ಣಗೊಂಡ ಬಳಿಕ ಕ್ರೀಡಾಂಗಣವನ್ನು ಸ್ಮಾರ್ಟ್‌ಸಿಟಿ ಲಿಮಿಟೆಡ್, ನಗರಪಾಲಿಕೆಗೆ ಹಸ್ತಾಂತರಿಸಲಿದೆ. ನಂತರದಲ್ಲಿ ಇದನ್ನು ಖಾಸಗಿ ಏಜೆನ್ಸಿ ನಿರ್ವಹಣೆಗೆ ನೀಡುವ ಸಾಧ್ಯತೆಯೂ ಇದೆ. ದಾವಣಗೆರೆಯ ಎಸ್‌ಎಸ್ ಬಡಾವಣೆಯಲ್ಲಿ ಕ್ರೀಡಾ ಇಲಾಖೆಯಡಿ ನೇತಾಜಿ ಸುಭಾಷ್‌ಚಂದ್ರ ಬೋಸ್ ಒಳಾಂಗಣ ಕ್ರೀಡಾಂಗಣವಿದೆ. ನೂತನ ಸ್ಟೇಡಿಯಂ ಕಟ್ಟಿದ ಜಾಗಕ್ಕೆ ಅನಿಲ್ ಕುಂಬ್ಳೆ ಅವರ ಹೆಸರಿದೆ. ಆದರೆ ಕ್ರೀಡಾಂಗಣ ಕಟ್ಟಡಕ್ಕೆ ಯಾರ ಹೆಸರಿಡಬೇಕೆಂಬುದು ಚರ್ಚೆ ಹಂತದಲ್ಲಿದೆ.
ಭೂಕಬಳಿಕೆ, ಅಕ್ರಮಕ್ಕೆ ಬ್ರೇಕ್
ಕಳೆದ 20 ವರ್ಷದಿಂದಲೂ ಬಳಕೆಯಾಗದೆ ಗಿಡ ಗಂಟಿಗಳಿಂದ ಹಾಳುಕೊಂಪೆಯಾಗಿದ್ದ ಜಾಗ ಕುಡಿತ, ಗಾಂಜಾ ಇನ್ನಿತರೆ ಅಕ್ರಮ ಚಟುವಟಿಕೆಗಳಿಗೆ, ಸಾರ್ವಜನಿಕ ಮೂತ್ರಾಲಯಕ್ಕೆ ಬಳಕೆಯಾಗಿತ್ತು. ಸ್ಟೇಡಿಯಂ ನಿರ್ಮಾಣದಿಂದಾಗಿ ಇವೆಲ್ಲಕ್ಕೂ ಬ್ರೇಕ್ ಬಿದ್ದಿದೆ. ಜಾಗ ಕಬಳಿಕೆಗೂ ತಡೆ ಹಾಕಲಾಗಿದೆ. ಸ್ಟೇಡಿಯಂ ನಿರ್ಮಾಣದ ಪರಿಣಾಮ ಈ ಭಾಗದಲ್ಲಿ ನಿವೇಶನಗಳ ಬೆಲೆಯೂ ಗಗನಕ್ಕೇರಿದೆ ಎಂಬುದು ಕೆಲವರ ಮಾತು.

ಡಿಸಿಎಂ ಟೌನ್‌ಶಿಪ್ ಭಾಗದ ಜನರು ಕ್ರೀಡಾ ಚಟುವಟಿಕೆಗಳಿಗೆ ಇನ್ನೊಂದು ದಿಕ್ಕಿನಲ್ಲಿನ ಒಳಾಂಗಣ ಕ್ರೀಡಾಂಗಣಕ್ಕೆ ಹೋಗುವ ಪ್ರಮೇಯ ತಪ್ಪಿದೆ. ಇಲ್ಲಿನ ಜನರ ನಾಗರಿಕ ಜೀವನ ಮಟ್ಟ ಸುಧಾರಿಸಲು ಇದು ಸಹಕಾರಿಯಾಗಿದೆ. ಕಾಮಗಾರಿ ಆಗಸ್ಟ್ ಅಂತ್ಯಕ್ಕೆ ಮುಗಿಯುವ ಇರಾದೆ ಇದೆ.
ವೀರೇಶ್‌ಕುಮಾರ್
ದಾವಣಗೆರೆ ಸ್ಮಾರ್ಟ್‌ಸಿಟಿ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ.

ಉದ್ಘಾಟನೆಗೆ ಅನಿಲ್ ಕುಂಬ್ಳೆ ಅವರನ್ನೇ ಕರೆಸುವ ಉದ್ದೇಶವಿದೆ. ಅವರ ಹೆಸರನ್ನೇ ಸ್ಟೇಡಿಯಂಗೂ ಇರಿಸುವ ಸಂಬಂಧ ಪಾಲಿಕೆ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಗುವುದು. ಜತೆಗೆ ಹೊರಗೋಡೆ ಮೇಲೆ ಮ್ಯೂರಲ್ ಚಿತ್ರದ ಜತೆಗೆ 10 ವಿಕೆಟ್ ಪಡೆದ ವಿಶೇಷ ಸಾಧನೆ ಬರಹ ಕೆತ್ತಿಸುವ ಪ್ರಯತ್ನ ನಡೆಸಲಾಗುವುದು.
ಎಸ್.ಟಿ.ವೀರೇಶ್
ನಗರಪಾಲಿಕೆ ಸದಸ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net