

ದಾವಣಗೆರೆ: ಮಾಜಿ ಪ್ರಧಾನಿ ಇಂದಿರಾಗಾಂಧಿ ದೇಶದಲ್ಲಿ ಜನಪರ ಆಡಳಿತ ನಡೆಸಿದ ದಿಟ್ಟ ಮಹಿಳೆ ಎಂದು ನಗರಸಭೆ ಮಾಜಿ ಅಧ್ಯಕ್ಷ ಆರ್.ಎಚ್. ನಾಗಭೂಷಣ್ ಬಣ್ಣಸಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದಿರಾಗಾಂಧಿ ಅವರು 1971ರಲ್ಲಿ ಪೂರ್ವ ಮತ್ತು ಪಶ್ಚಿಮ ಪಾಕಿಸ್ತಾನಗಳ ನಡುವಿನ ಸಂಘರ್ಷಕ್ಕೆ ಅಂತ್ಯ ಹಾಡುವ ಮೂಲಕ ವಿಪಕ್ಷಗಳಿಂದಲೂ ಭೇಷ್ ಎನಿಸಿಕೊಂಡರು. ಅವರ ನೆರವಿನಿಂದ ಬಾಂಗ್ಲಾದೇಶ ಸ್ವತಂತ್ರ ರಾಷ್ಟ್ರವಾಗಿ ಉದಯಿಸಿತು ಎಂದರು.
ಜಿಲ್ಲಾ ಪ್ರಧಾನ ಕಾರ‌್ಯದರ್ಶಿ ದಿನೇಶ್ ಕೆ.ಶೆಟ್ಟಿ ಮಾತನಾಡಿ, ಭಾರತ ದೇಶದಲ್ಲಿ ಮಹಿಳೆಯೊಬ್ಬರು ದೇಶದ ಉನ್ನತ ಸ್ಥಾನಕ್ಕೇರಿದ್ದು, ಪ್ರಜಾಪ್ರಭುತ್ವದ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ ಎಂದು ತಿಳಿಸಿದರು.
ಇಂದಿರಾಗಾಂಧಿ ಒಟ್ಟು 14 ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಿ, ದೇಶದ ಆರ್ಥಿಕ ಅಭಿವೃದ್ಧಿಗೆ ಮುನ್ನುಡಿ ಬರೆದರು. ಇದರ ಒಟ್ಟು ಪ್ರತಿಫಲ 80ರ ದಶಕದಲ್ಲಿ ನಿಚ್ಚಳವಾಗಿ ಕಾಣಲಾರಂಭಿಸಿದರೆ, ಈಗ ನೇರ ನಗದು ವರ್ಗಾವಣೆ ಮೂಲಕ ಪೂರ್ಣ ಪ್ರಮಾಣದ ಪ್ರತಿಫಲ ಕಾಣುತ್ತಿದೆ ಎಂದರು.
ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅನಿತಾಬಾಯಿ ಮಾಲತೇಶ್, ಮಂಜಮ್ಮ, ಮಂಗಳಮ್ಮ ಮಾತನಾಡಿದರು. ಉಮಾ ಕುಮಾರ್, ಕೇರಂ ಗಣೇಶ್, ಎಲ್.ಎಂ.ಎಚ್.ಸಾಗರ್, ಅಕ್ಬರ್, ಯುವರಾಜ್ ಮತ್ತಿತರರಿದ್ದರು.