

ದಾವಣಗೆರೆ: ಗ್ರಾಮ ಪಂಚಾಯಿತಿ ನೌಕರರಿಗೆ ಕನಿಷ್ಠ ವೇತನ, ಪಿಂಚಣಿ ಸೇರಿ 19 ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜು. 23 ರಿಂದ ಬೆಂಗಳೂರಿನ ಸ್ವಾತಂತ್ರೃ ಉದ್ಯಾನದಲ್ಲಿ ಅನಿರ್ದಿಷ್ಟಾವಧಿಯ ಹೋರಾಟ ಹಮ್ಮಿಕೊಂಡಿರುವುದಾಗಿ ಸಿಐಟಿಯು ಸಂಯೋಜಿತ ಕರ್ನಾಟಕ ಗ್ರಾಮ ಪಂಚಾಯತಿ ನೌಕರರ ಸಂಘದ ಖಜಾಂಚಿ ಆರ್.ಎಸ್.ಬಸವರಾಜ್ ತಿಳಿಸಿದರು.
ಈ ಹೋರಾಟದಲ್ಲಿ 30 ಸಾವಿರ ನೌಕರರು ಭಾಗವಹಿಸಲಿದ್ದು, ಸರ್ಕಾರ ಎಲ್ಲ ಬೇಡಿಕೆ ಈಡೇರಿಸುವವರೆಗೆ ಚಳವಳಿ ಮುಂದುವರಿಸಲಾಗುವುದು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಿಲ್ ಕಲೆಕ್ಟರ್, ನೀರಗಂಟಿ, ಕಂಪ್ಯೂಟರ್ ಆಪರೇಟರ್, ಜವಾನ, ಕ್ಲರ್ಕ್‌ಗಳಿಗೆ ಕನಿಷ್ಠ 31 ಸಾವಿರ ರೂ. ವೇತನ ನಿಗದಿಗೊಳಿಸಲು ಒತ್ತಾಯಿಸಿ 2022 ರಿಂದ ಪ್ರತಿಭಟನೆ ನಡೆಸಿದರೂ ಬೇಡಿಕೆ ಈಡೇರಿಲ್ಲ. ಗ್ರಾಮೀಣಾ ಭಿವೃದ್ಧಿ ಇಲಾಖೆ ಸಚಿವ ಪ್ರಿಯಾಂಕ ಖರ್ಗೆ, ಇಲಾಖಾ ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್ ಜನವರಿಯಲ್ಲಿ ಭರವಸೆ ನೀಡಿದ್ದು ಜಾರಿಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಿವೃತ್ತ ನೌಕರರಿಗೆ ವರ್ಷಕ್ಕೆ 15 ದಿನಗಳ ವೇತನ ಆಧರಿಸಿ ಪಿಂಚಣಿ ನೀಡಬೇಕು. ಕನಿಷ್ಠ ಆರು ಸಾವಿರ ರೂ.ಗಳ ಪಿಂಚಣಿ ನೀಡಬೇಕಿದ್ದರೂ ಕೈಗೆ ನಿಲುಕಿಲ್ಲ. ಬಿಲ್ ಕಲೆಕ್ಟರ್, ಕಂಪ್ಯೂಟರ್ ಆಪರೇಟರ್, ಗ್ರೇಡ್-2 ಕಾರ್ಯದರ್ಶಿ ಇತರೆ ಹುದ್ದೆಗಳಿಗೆ ಬಡ್ತಿ ಅವಕಾಶ ಇದೆ. ಆದರೆ, ಅನೇಕ ಗ್ರಾಪಂಗಳು ಮೇಲ್ದರ್ಜೆಗೇರದ್ದರಿಂದ ಹಿನ್ನಡೆಯಾಗಿದೆ. 5626 ಗ್ರಾಮ ಪಂಚಾಯತ್‌ಗಳಲ್ಲಿ 1500 ಮಾತ್ರ ಮೇಲ್ದರ್ಜೆಗೇರಿವೆ. ಅರ್ಹ ಗ್ರಾಪಂಗಳನ್ನು ಮೇಲ್ದರ್ಜೆಗೇರಿಸುವ ಮೂಲಕ ಪದೋನ್ನತಿಗೆ ದಾರಿ ಮಾಡಬೇಕೆಂದು ಒತ್ತಾಯಿಸಿದರು.
ದಾವಣಗೆರೆ ಜಿಲ್ಲೆಯ 196 ಗ್ರಾಪಂಗಳ ಪೈಕಿ ಯಾವ ಪಂಚಾಯಿತಿ ಮೇಲ್ದರ್ಜೆಗೇರಿವೆ ಎಂಬುದರ ಬಗ್ಗೆ ಸರ್ಕಾರ ಮಾಹಿತಿ ನೀಡಿಲ್ಲ. ಅರ್ಹ ಪಂಚಾಯತ್‌ಗಳನ್ನು ಮೇಲ್ದರ್ಜೆಗೇರಿಸಬೇಕೆಂದು ಎಂದು ಒತ್ತಾಯಿಸಿದರು. ಸಂಘದ ಜಿಲ್ಲಾ ಗೌರವಾಧ್ಯಕ್ಷ ಕೆ.ಎಚ್. ಆನಂದರಾಜ್, ಜಿಲ್ಲಾಧ್ಯಕ್ಷ ಶ್ರೀನಿವಾಸಾಚಾರಿ, ಪ್ರಧಾನ ಕಾರ್ಯದರ್ಶಿ ಬಸವರಾಜ್ ಬೇತೂರು, ಚಂದ್ರಪ್ಪ ಸುದ್ದಿಗೋಷ್ಠಿಯಲ್ಲಿದ್ದರು.
---