ಅಕ್ರಮ ಮಣ್ಣು ಗಣಿಗಾರಿಕೆಗೆ ಕಡಿವಾಣ ಹಾಕಲು ದಸಂಸ ಮನವಿ

1000561584.jpg
Published on

ದಾವಣಗೆರೆ: ಹರಿಹರ ತಾಲೂಕಿನ ನದಿ ದಡದ ಗ್ರಾಮಗಳ ಪಟ್ಟಾ ಹಾಗೂ ಸರ್ಕಾರಿ ಜಮೀನುಗಳಲ್ಲಿ ನಡೆಯುತ್ತಿರುವ ಅಕ್ರಮ ಮಣ್ಣು ಗಣಿಗಾರಿಕೆ ತಡೆಯಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ( ಪ್ರೊ. ಬಿ.ಕೃಷ್ಣಪ್ಪ ಬಣ) ಜಿಲ್ಲಾ ಸಂಚಾಲಕ ಕುಂದುವಾಡ ಮಂಜುನಾಥ್ ಜಿಲ್ಲಾಡಳಿತವನ್ನು ಆಗ್ರಹಿಸಿದರು.
ಹರ್ಲಾಪುರ, ಗುತ್ತೂರು, ಸಾರಥಿ, ಪಾಮೇನಹಳ್ಳಿ, ದೀಟೂರು, ಚಿಕ್ಕಬಿದರಿ, ಕರಲಹಳ್ಳಿ, ಬುಳ್ಳಾಪುರ, ಹಲಸಬಾಳು, ರಾಜನಹಳ್ಳಿ, ತಿಮ್ಲಾಪುರ, ಧೂಳೆಹೊಳೆ, ಇಂಗಳಗೊಂದಿ ಮೊದಲಾದೆಡೆ ಮಣ್ಣಿನ ಗಣಿಗಾರಿಕೆ ಅವ್ಯಾಹತವಾಗಿದೆ. ವಾರದೊಳಗೆ ಇದಕ್ಕೆ ಕಡಿವಾಣ ಹಾಕದಿದ್ದಲ್ಲಿ ಜಿಲ್ಲಾಡಳಿತದ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
20 ಅಡಿ ಆಳದವರೆಗೆ ಜೆಸಿಬಿ, ಇಟಾಚಿ ಬಳಸಿ ಮಣ್ಣು ಗಣಿಗಾರಿಕೆ ನಡೆಸಲಾಗಿದೆ. ಭೂ ವಿಜ್ಞಾನ ಮತ್ತು ಗಣಿ, ಕಂದಾಯ ಮತ್ತು ಕೃಷಿ ಇಲಾಖೆಯಿಂದ ಅನುಮತಿ ಪಡೆದು ಏರಿ ಅಥವಾ ಕಲ್ಲುಗಳಿದ್ದರೆ ಮೂರು ಅಡಿಯಷ್ಟು ಜಮೀನುಗಳನ್ನು ಸಮತಟ್ಟು ಮಾಡಬಹುದು. ಮೀರಿದಲ್ಲಿ ಅಂತಹ ಪಟ್ಟಾ ಜಮೀನುಗಳನ್ನು ಸರ್ಕಾರ, ಭೂ ಕಂದಾಯ ಕಾಯ್ದೆಯಡಿ ತನ್ನ ಸುಪರ್ದಿಗೆ ಪಡೆಯಲು ಅವಕಾಶವಿದೆ. ಜಿಲ್ಲಾಡಳಿತ, ತಾಲೂಕು ಆಡಳಿತ ಕಣ್ಮುಚ್ಚಿ ಕುಳಿತಿವೆ ಎಂದು ದೂರಿದರು.
ಪರಿಸರ ಸಂರಕ್ಷಣಾ ವೇದಿಕೆಯ ಅಧ್ಯಕ್ಷ ಗಿರೀಶ್ ದೇವರಮನಿ ಮಾತನಾಡಿ, ಅಕ್ರಮ ಮಣ್ಣು ಗಣಿಗಾರಿಕೆಯಿಂದ ತಾಲೂಕಿನ ಪರಿಸರ ಹಾಳಾಗಿದೆ. ತಾಲೂಕಿನ ಭೌಗೋಳಿಕ ರಚನೆ ಮೇಲೆ ತೀವ್ರ ದುಷ್ಪರಿಣಾಮ ಬೀರಲಿದೆ ಎಂದರು.
ಹರಿಹರ ತಾಲೂಕಿನಲ್ಲೂ ರಿಪಬ್ಲಿಕ್‌ಬಳ್ಳಾರಿಯಂತೆ ತಪ್ಪು ಹೆಜ್ಜೆಯತ್ತ ಸಾಗುತ್ತಿದೆಯೆ ಎಂಬ ದಟ್ಟ ಅನುಮಾನ ಮೂಡುತ್ತಿದೆ.  ಅಕ್ರಮ ಗಣಿಗಾರಿಕೆಯನ್ನು ಪರಿಶೀಲಿಸಲು ಡ್ರೋನ್ ಸಹಾಯ ಪಡೆಯಬೇಕು. ಅಕ್ರಮಕ್ಕೆ ಸಹಕರಿಸಿದ ಸಂಬಂಧಿತ ಹಿಂದಿನ, ಈಗಿನ ಇಲಾಖಾಧಿಕಾರಿಗಳ ವಿರುದ್ಧ ಕಾನೂನುಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಕೆ.ಗೋಪಿನಾಥಾಚಾರ್, ಪಿ.ಜೆ.ಮಹಾಂತೇಶ್, ಸುನೀಲ್ ಹೊಟ್ಟಿಗನಹಳ್ಳಿ, ಮಂಜುನಾಥ್  ಹಾಲುವರ್ತಿ, ಶಿವಶಂಕರ್ ಇತರರಿದ್ದರು.
---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net