

ದಾವಣಗೆರೆ: ಎಸ್.ಎ. ರವೀಂದ್ರನಾಥ ನಗರದಲ್ಲಿನ ಅಕ್ರಮ ಶೆಡ್‌ಗಳನ್ನು ತೆರವುಗೊಳಿಸದೆ, ಕೋರ್ಟ್ ಆದೇಶ ಉಲ್ಲಂಘಿಸಲಾಗಿದೆ. ಒಂದು ತಿಂಗಳೊಳಗೆ ತೆರವು ಮಾಡಬೇಕು ಎಂದು ಎಸ್.ಎ.ರವೀಂದ್ರನಾಥ ನಗರ ನಾಗರಿಕ ಹಿತರಕ್ಷಣಾ ಸಮಿತಿ ಗಡುವು ನೀಡಿದೆ.
ರವೀಂದ್ರನಾಥ ನಗರದಲ್ಲಿ ಸರ್ವೇ ನಂಬರ್ 57, 62 ಮತ್ತು ಪಾರ್ಕ್‌ಗಾಗಿ ಮೀಸಲಿಟ್ಟಿದ್ದ 331ನೇ ನಂಬರ್‌ನ ನಿವೇಶನದಲ್ಲಿ ಅಕ್ರಮವಾಗಿ ನಿರ್ಮಿಸಿರುವ ಶೆಡ್‌ಗಳನ್ನು ಖಾಲಿ ಮಾಡುವಂತೆ ದಾವಣಗೆರೆಯ ಜೆಎಂಎಫ್ ನ್ಯಾಯಾಲಯ ಡಿಕ್ರಿ ನೀಡಿದೆ. ಆದಾಗ್ಯೂ ಆದೇಶ ಪಾಲನೆಯಾಗಿಲ್ಲ ಎಂದು ಸಮಿತಿ ಕಾರ್ಯದರ್ಶಿ ಎನ್.ಎಸ್. ಮಹೇಶ್ವರಪ್ಪ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನ್ಯಾಯಾಲಯದ ಡಿಕ್ರಿ ಒಳಗೊಂಡಂತೆ ಸಮಗ್ರ ಮಾಹಿತಿಯನ್ನ್ನು ರಾಜ್ಯ ಕಂದಾಯ ಸಚಿವರ ಗಮನಕ್ಕೆ ತರಲಾಗಿತ್ತು. ಮಹಾನಗರ ಪಾಲಿಕೆ ಮತ್ತು ತಾಲೂಕು ಆಡಳಿತ ಜಂಟಿ ಕಾರ್ಯಾಚರಣೆ ನಡೆಸಿ ಅನುಪಾಲನಾ ವರದಿ ನೀಡಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಕಂದಾಯ ಇಲಾಖೆ ಪತ್ರ ಬರೆದು ಐದು ವರ್ಷ ಕಳೆದರೂ ಕ್ರಮವಾಗಿಲ್ಲ. ಜಿಲ್ಲಾಡಳಿತ ಒಂದು ತಿಂಗಳಲ್ಲಿ ಅಕ್ರಮ ಶೆಡ್ ತೆರವುಗೊಳಿಸದಿದ್ದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
2021-22ನೇ ಸಾಲಿನಲ್ಲಿ ನಿರ್ಮಿತ ಬಡಾವಣೆಯಲ್ಲಿ ಮೂಲ ಸೌಕರ್ಯಗಳಿಲ್ಲ. ಶಾಸಕರು, ಜಿಲ್ಲಾಧಿಕಾರಿ, ಮಹಾನಗರ ಪಾಲಿಕೆಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಉದ್ಯಾನಕ್ಕೆ ಮೀಸಲಿಟ್ಟ ಜಾಗದಲ್ಲಿ ಅಕ್ರಮ ಶೆಡ್‌ಗಳನ್ನು ಹಾಕಲಾಗಿದೆ. ಬೇಕಾದವರಿಗೆ ರಸ್ತೆ ಒಳಗೊಂಡಂತೆ ಇತರೆ ಮೂಲ ಸೌಲಭ್ಯ ಒದಗಿಸಲಾಗಿದೆ. ಸಾರ್ವಜನಿಕರಿಗೆ ಈ ಸೌಕರ್ಯಗಳಿಲ್ಲ ಎಂದು ದೂರಿದರು.
ಖಾಲಿ ನಿವೇಶನದಲ್ಲಿ ಅಂಗನವಾಡಿ ಕೇಂದ್ರ, ವಾಚನಾಲಯ ನಿರ್ಮಿಸಲು ಜಿಲ್ಲಾಧಿಕಾರಿ, ನಗರಪಾಲಿಕೆ ಅಧಿಕಾರಿ ಗಳಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ, ಮೀಸಲು ನಿವೇಶನಗಳು ನಗರ ಆಶ್ರಯ ಸಮಿತಿ ಮುಖಾಂತರ ಅರ್ಹರಲ್ಲದ ಫಲಾನುಭವಿಗಳಿಗೆ ಹಂಚಿಕೆ ಆಗಿದ್ದು, ಈ ಕುರಿತು ಮಾಹಿತಿ ಹಕ್ಕಿನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಈ ಮಧ್ಯೆ ನಗರಪಾಲಿಕೆ, ನಿವೇಶನದ ಸುತ್ತ ತಂತಿ ಬೇಲಿ ಹಾಕಿರುವುದು ನಾಗರೀಕರಲ್ಲಿ ಸಂಶಯ ಉಂಟು ಮಾಡಿದೆ ಎಂದು ಹೇಳಿದರು.
ಖಾಲಿ ಜಾಗದಲ್ಲಿದ್ದ ಉದ್ಯಾನ ಅಭಿವೃದ್ಧಿಗಾಗಿ ಮನವಿ ಸಲ್ಲಿಸಿದ್ದರೂ ನಿರ್ಲಕ್ಷಿಸಿದ ಪಾಲಿಕೆಯು ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಮುಂದಾಗಿದೆ. ಅದರಿಂದ ನಾಗರಿಕರಿಗೆ ಸಾಕಷ್ಟು ಸಮಸ್ಯೆ ಎದುರಾಗಲಿವೆ. ಹಾಗಾಗಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ ವಿಚಾರ ಕೈ ಬಿಡಬೇಕು. ಒಂದೊಮ್ಮೆ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಮುಂದಾದಲ್ಲಿ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸಮಿತಿ ಗೌರವಾಧ್ಯಕ್ಷ ಎಸ್.ಮಲ್ಲನಗೌಡ, ಅಧ್ಯಕ್ಷ ಎನ್.ಸಿದ್ದರಾಮಪ್ಪ, ಉಪಾಧ್ಯಕ್ಷ ಎಸ್.ಆರ್. ಸೋಮಶೇಖರಪ್ಪ, ಸಹ ಕಾರ್ಯದರ್ಶಿ ಬಿ.ಕರಿಬಸಪ್ಪ, ಬಿ.ಚಂದ್ರೇಗೌಡ, ಎನ್.ವೀರಭದ್ರಪ್ಪ ಸುದ್ದಿಗೋಷ್ಠಿಯಲ್ಲಿದ್ದರು.