

ದಾವಣಗೆರೆ: ನಗರದ ಸಿದ್ಧಗಂಗಾ ಶಾಲೆಯ ಎಚ್.ವಿ. ಗಾನವಿ ಹಾಗೂ ಚನ್ನಗಿರಿ ತಾಲೂಕು ತ್ಯಾವಣಗಿಯ ಪ್ರಕೃತಿ ವಿದ್ಯಾಲಯದ ಎಂ.ಎಲ್. ಸೃಷ್ಟಿ ತಲಾ 620 ಅಂಕ (ಶೇ.99.2) ಗಳನ್ನು ಪಡೆದು ಜಿಲ್ಲೆಯ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ನಗರ ಹಾಗೂ ಗ್ರಾಮಾಂತರ ಪ್ರದೇಶವನ್ನು ಪ್ರತಿನಿಧಿಸಿ ಹೆಚ್ಚು ಅಂಕ ಪಡೆದಿದ್ದಾರೆ.
ಶಾಮನೂರಿನಿಂದ ಸಿದ್ಧಗಂಗಾ ಶಾಲೆಗೆ ನಿತ್ಯ ಆಟೋದಲ್ಲಿ ಬಂದುಹೋಗಿ ವ್ಯಾಸಂಗ ಮಾಡಿದ ಎಚ್.ವಿ.ಗಾನವಿ, ದಾವಣಗೆರೆ ಎಪಿಎಂಸಿಯಲ್ಲಿ ವರ್ತಕರಾಗಿರುವ ಎಚ್.ಎನ್. ಗಿರೀಶ್- ಗೃಹಿಣಿ ಡಿ.ಎಸ್. ಜ್ಯೋತಿ ದಂಪತಿಯ ಪುತ್ರಿ.
ಶಾಲೆಯಲ್ಲಿ ಬೆಳಗ್ಗೆ, ಸಂಜೆ ತಲಾ ಎರಡು ತಾಸು ಸ್ಟಡಿ ಕ್ಲಾಸ್ ಇರುತ್ತಿದ್ದುದು ಓದಿಗೆ ಸಹಕಾರಿಯಾಯಿತು. ಮನೆಯಲ್ಲೂ ಓದು ಮುಂದುವರಿಸುತ್ತಿದ್ದೆ. ಹಳೆಯ ಪ್ರಶ್ನೆಪತ್ರಿಕೆ ಮಾದರಿಗಳನ್ನು ಬಿಡಿಸುತ್ತಿದ್ದೆವು. ಶಿಕ್ಷಕರಾದ ಜಯಂತ್, ಹರ್ಷ ಸರ್ ಸಮಸ್ಯೆಗಳನ್ನು ಬಗೆಹರಿಸುತ್ತಿದ್ದರು. ಮನೆಯಲ್ಲೂ ಕಲಿಕೆಗೆ ಉತ್ತಮ ವಾತಾವರಣವಿತ್ತು ಎಂದು ಹೇಳಿಕೊಂಡರು ಗಾನವಿ.
ಕನ್ನಡದಲ್ಲಿ 124, ಹಿಂದಿ, ಸಮಾಜ ವಿಜ್ಞಾನ ಹಾಗೂ ಗಣಿತದಲ್ಲಿ ತಲಾ 100, ಇಂಗ್ಲಿಷ್ ಹಾಗೂ ವಿಜ್ಞಾನದಲ್ಲಿ ತಲಾ 98 ಅಂಕ ಪಡೆದಿದ್ದಾರೆ. ಇಷ್ಟು ಅಂಕ ಬರುವ ನಿರೀಕ್ಷೆ ನನಗಿತ್ತು. ಅಂದಿನ ಪಾಠವನ್ನು ಅಂದೇ ಓದುವುದು ಉತ್ತಮ. ಪಾಸಿಂಗ್ ಪ್ಯಾಕೇಜ್‌ಗಾದರೂ ಓದಿದರೆ ಅನುಕೂಲ ಎಂಬುದಾಗಿ ಇತರೆ ವಿದ್ಯಾರ್ಥಿಗಳಿಗೆ ಟಿಪ್ಸ್ ನೀಡುವ ಗಾನವಿಗೆ ಸಮಾಜಸೇವೆಗಾಗಿ ಐಎಎಸ್ ಆಗುವ ಕನಸಿದೆ ಎಂದು ಹೇಳಿಕೊಂಡರು.
---
ತ್ಯಾವಣಗಿಯ ಎಂ.ಎಲ್. ಸೃಷ್ಟಿ, ಕನ್ನಡದಲ್ಲಿ 125, ಇಂಗ್ಲಿಷ್-ಹಿಂದಿ ಹಾಗೂ ಸಮಾಜ ವಿಜ್ಞಾನದಲ್ಲಿ ತಲಾ 100, ಗಣಿತದಲ್ಲಿ 98, ವಿಜ್ಞಾನದಲ್ಲಿ 97 ಅಂಕ ಪಡೆದಿದ್ದಾರೆ. ಇನ್ನೂ ಹೆಚ್ಚಿನ ಅಂಕ ನಿರೀಕ್ಷೆಯಲ್ಲಿರುವ ಸೃಷ್ಟಿಗೆ ಗಣಿತ ಮತ್ತು ವಿಜ್ಞಾನ ಉತ್ತರಪತ್ರಿಕೆಗಳನ್ನು ತರಿಸಿಕೊಳ್ಳುವ ಇರಾದೆಯಲ್ಲಿದ್ದಾರೆ.
ತಂದೆ ಲೋಕೇಶನಾಯ್ಕ ತ್ಯಾವಣಗಿ ಗ್ರಾಪಂ ಸದಸ್ಯರು ಹಾಗೂ ಕೃಷಿಕ. ತಾಯಿ ವಿಶಾಲಾಬಾಯಿ ಗೃಹಿಣಿ. ಸ್ಟೇಟ್ ಸಿಲಬಸ್ ಪುಸ್ತಕಗಳನ್ನು ಓದಿದ್ದೇನೆ. ಶಿಕ್ಷಕರ ಪ್ರೇರಣೆ ಹಾಗೂ ದಿನವೂ ರಿವಿಜನ್ ಮಾಡುತ್ತಿದ್ದುದು ಓದಲು ಸಹಕಾರಿಯಾಯಿತು. ಮನೆಯಲ್ಲಿ ವ್ಯಾಸಂಗಕ್ಕೆ ಕಷ್ಟವಾಗಲಿಲ್ಲ. ರಾತ್ರಿ 12ರವರೆಗೆ ಹಾಗೂ ಬೆಳಗ್ಗೆ ನಾಲ್ಕು ತಾಸು ಓದುತ್ತಿದ್ದೆ ಎಂದು ಹೇಳಿದರು ಸೃಷ್ಟಿ.
ಬಾಯಿಪಾಠ ಮಾಡುವ ಬದಲಿಗೆ ಅರ್ಥ ಮಾಡಿಕೊಂಡು ಓದಬೇಕು. ವಿಜ್ಞಾನ ಮತ್ತು ಗಣಿತದ ಅಭ್ಯಾಸವನ್ನು ಬರೆದಷ್ಟೂ ಉತ್ತಮ ಪಡಿಸಿಕೊಳ್ಳಬಹುದು. ಪರೀಕ್ಷೆ ವೇಳೆಯಲ್ಲಿ ಗಾಬರಿ ಬೇಕಿಲ್ಲ. ಚೆನ್ನಾಗಿ ನಿದ್ರೆ ಮಾಡಬೇಕು. ಓದಿದ್ದನ್ನು ನಿತ್ಯ ರಿವಿಜನ್ ಮಾಡುವ ರೂಢಿಯಿದ್ದಲ್ಲಿ ಉತ್ತಮ ಅಂಕಗಳನ್ನು ಪಡೆಯಬಹುದು ಎಂದು ಟಿಪ್ಸ್ ನೀಡುವ ಸೃಷ್ಟಿ ಎಂಬಿಬಿಎಸ್ ಪದವಿ ಬಳಿಕ ಐಎಎಸ್ ಮಾಡುವ ಗುರಿ ಹೊಂದಿದ್ದಾರೆ.
---
ಅಂಧರು ಸಾಮಾನ್ಯ ಶಾಲೇಲಿ ಓದಲಿ!
ಅಂಧರು ಏಳನೇ ತರಗತಿವರೆಗೆ ವಿಶೇಷ ಶಾಲೆಯಲ್ಲಿ ಓದಲಿ. ಆದರೆ ಅದರಲ್ಲೂ ಸಾಮರ್ಥ್ಯ ಇರುವವರು ಎಂಟನೇ ತರಗತಿಯಿಂದ ಸಾಮಾನ್ಯ ಶಾಲೆಯಲ್ಲಿ ಓದಬೇಕು. ಇಲ್ಲದಿದ್ದಲ್ಲಿ ಅಂಧರೆಂಬ ಕಾರಣಕ್ಕೆ ಮೂಲೆಗುಂಪಾಗಿ ಬಿಡುತ್ತೇವೆ..
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 593 (ಶೇ. 94.88) ಅಂಕ ಪಡೆದ ದಾವಣಗೆರೆಯ ಸಿದ್ಧಗಂಗಾ ಶಾಲೆಯ ಅಂಧ ವಿದ್ಯಾರ್ಥಿನಿ ಪಿ. ಯುಕ್ತಿ ಆಡಿದ ಮಾತಿದು. ಒಂದರಿಂದ ಏಳನೇ ಈಯತ್ತೆಯವರೆಗೆ ಬೆಂಗಳೂರಿನ ಜ್ಯೋತಿ ಸೇವಾ ಅಂಧರ ಶಾಲೆಯಲ್ಲಿ ಓದಿದ್ದರು.
ದಾವಣಗೆರೆಯ ಗಾರ್ಮೆಂಟ್‌ನಲ್ಲಿ ಕೆಲಸ ನಿರ್ವಹಿಸುತ್ತಿರುವ ತಂದೆ ಎಸ್. ಪ್ರಭಾಕರ್, ಗೃಹಿಣಿ ಕೆ.ಎಸ್.ಅನಿತಾ ದಂಪತಿಯ ಪುತ್ರಿ ಯುಕ್ತಿ ಅಂಧಳಾಗಿದ್ದರಿಂದ ಆಕೆಯ ಓದಿನ ಬಗ್ಗೆ ಅಪನಂಬಿಕೆಯಿಂದಾಗಿ ನಗರದಲ್ಲಿ ಕೆಲವು ಸಾಮಾನ್ಯ ಶಾಲೆಗಳು ಪ್ರವೇಶ ನೀಡಿರಲಿಲ್ಲ. ಆದರೆ ಸಿದ್ಧಗಂಗಾ ಶಾಲೆಯ ಮುಖ್ಯಸ್ಥೆ ಜಸ್ಟಿನ್ ಡಿಸೌಜ ಪ್ರವೇಶಾತಿ ಕಲ್ಪಿಸಿದರು. ಮಗಳು ಒಳ್ಳೆಯ ಅಂಕ ಪಡೆದಿದ್ದಕ್ಕೆ ಆನಂದ ಬಾಷ್ಪ ಬರುತ್ತಿದೆ ಎಂದು ತಾಯಿ ಅನಿತಾ ಹೇಳಿಕೊಂಡರು.
ಜಸ್ಟಿನ್ ಡಿಸೌಜ ಅವರು ಶಾಲೆಯ ವತಿಯಿಂದಲೇ ನೀಡಿದ ಲ್ಯಾಪ್‌ಟಾಪ್‌ನಲ್ಲಿ ಸ್ಕ್ರೀನ್‌ರೀಡರ್ ಸಾಫ್ಟ್‌ವೇರ್ ಅಳವಡಿಸಿಕೊಂಡು ಓದಿದ್ದೇನೆ. ಯಶಸ್ವಿನಿ ಈಡಿಗಾರ್ ಬರವಣಿಗೆ ಸಹಾಯಕಳಾಗಿ ಪರೀಕ್ಷೆ ಬರೆದಳು. ಇನ್ನೂ ಹೆಚ್ಚು ಅಂಕ ಬರಬೇಕಿದ್ದು ಕೆಲವು ಉತ್ತರಪತ್ರಿಕೆಗಳನ್ನು ತರಿಸಿಕೊಳ್ಳುತ್ತೇನೆ ಎಂದೆನ್ನುವ ಯುಕ್ತಿಗೆ ಇಂಗ್ಲಿಷ್ ಪ್ರಾಧ್ಯಾಪಕಿಯಾಗಿ ಬಳಿಕ ಐಎಫ್‌ಎಸ್ ಮಾಡುವಾಸೆ ಇದೆ ಎಂದು ಹೇಳಿಕೊಂಡರು.
ಚಿತ್ರ: ಡಿವಿಜಿ ಪಿ.ಯುಕ್ತಿ (ಸಿದ್ಧಗಂಗಾ ಬ್ಲೈಂಡ್) ಮೇ 9
----
ವಿಕಲತೆ ನಡುವೆಯೂ ಉತ್ತಮ ಅಂಕ ಪಡೆದ ಗೋವರ್ಧನ್
ಕೈಕಾಲು ಬೆಳವಣಿಗೆಯಿಲ್ಲದೆ ಜನ್ಮತಃ ವಿಕಲಾಂಗತೆಯಿಂದ ಬಳಲುತ್ತಿರುವ, ದಾವಣಗೆರೆಯ ಸಿದ್ಧಗಂಗಾ ಶಾಲೆಯ ವಿದ್ಯಾರ್ಥಿ ಗೋವರ್ಧನ್ ಸಿಂಗ್‌ನಾಯ್ಕ 372 (59.52) ಅಂಕ ಪಡೆದು ಗಮನ ಸೆಳೆದಿದ್ದಾನೆ.
ದಾವಣಗೆರೆಯ ಭದ್ರಾ ಕಾಲನಿ ನಿವಾಸಿ ಗೋವರ್ಧನ್‌ಗೆ ಹೆಚ್ಚು ಓಡಾಡಲು ಆಗುವುದಿಲ್ಲ. ಕೆಲವು ಗೆಳೆಯರು ಆತನಿಗೆ ಓದು ಮತ್ತು ಓಡಾಟದ ವಿಚಾರದಲ್ಲಿ ಸಹಾಯ ಒದಗಿಸಿದ್ದಾರೆ. ಸ್ನೇಹಿತರ ಬಲದಿಂದಲೇ ಓದಿರುವುದಾಗಿ ಹೇಳಿದ ಈತನಿಗೆ ಸಾಫ್ಟ್‌ವೇರ್ ಇಂಜಿನಿಯರ್ ಆಗುವ ಹೆಬ್ಬಯಕೆ ಇದೆ.
ಜೂನಿಯರ್ ಇಂಜಿನಿಯರ್ ಆಗಿದ್ದ ಬಾವಸಿಂಗ್ ನಾಯಕ್ ತಂದೆ ಮರಣಾನಂತರ, ದಾವಣಗೆರೆಯ ಶಿಕ್ಷಣ ಇಲಾಖೆಯಲ್ಲಿ ಎಸ್‌ಡಿಸಿಯಾಗಿ ಕಾರ್ಯ ನಿರ್ವಹಿಸುತ್ತಿರುವ ತಾಯಿ ಶಶಿಕಲಾ ಮನೆಯ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.