ದಾವಣಗೆರೆ ಜಿಲ್ಲೆಯಲ್ಲಿ ಭಾನುವಾರ 70ಕಿ.ಮೀ. ಮಾರ್ಗ ಮಾನವ ಸರಪಳಿ

1000373875.jpg
Published on

ದಾವಣಗೆರೆ: ರಾಜ್ಯ ಸರ್ಕಾರದ ಆದೇಶದಂತೆ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಭಾಗವಾಗಿ ಸೆ. 15ರಂದು ದಾವಣಗೆರೆ ಜಿಲ್ಲಾಡಳಿತದಿಂದ ಜಿಲ್ಲೆಯ 80 ಕಿ.ಮೀ. ವ್ಯಾಪ್ತಿವರೆಗೆ ಬೃಹತ್ ಮಾನವ ಸರಪಳಿ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ಜಿಪಂ ಸಿಇಒ ಸುರೇಶ್ ಬಿ. ಇಟ್ನಾಳ್ ತಿಳಿಸಿದರು.
ಪ್ರಜಾಪ್ರಭುತ್ವದ ಮೂಲತತ್ವ, ಆಶಯಗಳ ಕುರಿತು ಅರಿವು ಮೂಡಿಸುವುದು ಇದರ ಉದ್ದೇಶವಾಗಿದೆ. ನ್ಯಾಮತಿ ತಾಲೂಕಿನ ಟಿ. ಗೋಪಗೊಂಡನಹಳ್ಳಿಯಿಂದ ಕೋಡಿಯಾಲ ಹೊಸಪೇಟೆವರೆಗೆ ರಸ್ತೆಯ ಎಡಬದಿಯಲ್ಲಿ ಬೃಹತ್ ಮಾನವ ಸರಪಳಿ ನಡೆಯಲಿದೆ. 70 ಸಾವಿರ ಜನರು ಭಾಗಿಯಾಗುವ ಅಂದಾಜಿದೆ ಎಂದು  ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
 ಬೆಳಗ್ಗೆ 9ರಿಂದ ಅರ್ಧ ತಾಸು ಕಾಲ ನಡೆಯುವ ಕಾರ್ಯಕ್ರಮಕ್ಕೆ, ಟಿ. ಗೋಪಗೊಂಡನಹಳ್ಳಿಯಲ್ಲಿ ಶಾಸಕ ಡಿ.ಜಿ.ಶಾಂತನಗೌಡ ಗಿಡ ನೆಡುವ ಮೂಲಕ ಸಾಂಕೇತಿಕ ಚಾಲನೆ ನೀಡುವರು. ಮಾನವ ಸರಪಳಿ ನಂತರ ಸಂವಿಧಾನ ಪೀಠಿಕೆ ವಾಚನ ನಡೆಯಲಿದೆ. ಸರ್ಕಾರಿ ನೌಕರರು, ಆಶಾ ಕಾರ್ಯಕರ್ತರಿಗೆ ಸೀಮಿತವಾಗದೆ ಶಾಲಾ ಮಕ್ಕಳು, ವಿವಿಧ ಸಂಘಟನೆಗಳು, ರೈತ- ದಲಿತ ಸಂಘಗಳು, ವಕೀಲರು, ಬ್ಯಾಂಕ್ ನೌಕರರು ಪಾಲ್ಗೊಳ್ಳುವರು.
ಜಿಲ್ಲೆಯ ವಿವಿಧ ಧರ್ಮಗುರು, ಸ್ವಾಮೀಜಿಗಳನ್ನೂ ಸಹ ಆಹ್ವಾನಿಸಲಾಗುತ್ತಿದೆ. ಸಂಸದರು, ಜಿಲ್ಲೆಯ ಶಾಸಕರನ್ನು ಆಹ್ವಾನಿಸಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಹರಿಹರದ ಗಾಂಧಿ ಮೈದಾನದಲ್ಲಿ ನಡೆಯುವ ಸಮಾರೋಪದಲ್ಲಿ ಭಾಗವಹಿಸುವರು. ಸಿದ್ಧಗಂಗಾ ಶಾಲೆಯ ಮ್ಕಕಳಿಗೆ ಸಂವಿಧಾನ ಕುರಿತಂತೆ ಪದಪುಂಜಗಳನ್ನು ಪ್ರದರ್ಶಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕಲಾ ಪ್ರದರ್ಶನ, ಅಂಬೇಡ್ಕರ್ ಮತ್ತು ಸಂವಿಧಾನದ ಕುರಿತು ಗೀತ ನಮನ ನಡೆಯಲಿದೆ ಎಂದು ವಿವರಿಸಿದರು.
ನೋಡಲ್ ಅಧಿಕಾರಿ,ಸಬ್ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗುತ್ತಿದೆ. ಕಾರ್ಯಕ್ರಮದ ಮೇಲ್ವಿಚಾರಣೆ ಸಂಬಂಧ ಜಿಲ್ಲಾಡಳಿತ ಭವನದ ಕೊಠಡಿ ಸಂಖ್ಯೆ  40ರಲ್ಲಿ ಸಹಾಯವಾಣಿ ತೆರೆಯಲಾಗಿದೆ ಎಂದು ಹೇಳಿದರು.
ಚೀಲೂರು, ಚೀಲೂರು ಕಡದಕಟ್ಟೆ, ಗೋವಿನಕೋವಿ, ಹರಲಹಳ್ಳಿ, ಮಾಸಡಿ, ಅರಕೆರೆ, ಕುಂಬಳೂರು, ಬೆಳ್ಳೂಡಿ, ಹನಗವಾಡಿ ಒಟ್ಟು 10 ಗ್ರಾಪಂ. 25 ಗ್ರಾಮಗಳು ಮತ್ತು ಮಲೇಬೆನ್ನೂರು ಪಪಂ, ಹರಿಹರ ನಗರಸಭೆ ವ್ಯಾಪ್ತಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
* ಸ್ವಚ್ಛತೆ, ಸಸಿ ನೆಡುವ ಅಭಿಯಾನ
ಮಾನವ ಸರಪಳಿ ಜತೆಯಲ್ಲೇ ಸ್ವಚ್ಛತೆಯೇ ಸೇವೆ ಎಂಬ ಕಾರ್ಯಕ್ರಮದಡಿ ಸಾರ್ವಜನಿಕರು ಸುತ್ತಮುತ್ತಲಲ್ಲಿ ಪ್ಲಾಸ್ಟಿಕ್,  ಮೆಟಲ್ ಇತರೆ ತ್ಯಾಜ್ಯವನ್ನು ಹಾಕದೇ ಪರಿಸರ ಸ್ವಚ್ಛ ಮಾಡಿಕೊಳ್ಳುವುದು ಮತ್ತು 10 ಸಾವಿರ ಸಸಿಗಳನ್ನು ನೆಡುವುದನ್ನೂ ಸಂಯೋಜಿಸಿಕೊಳ್ಳಲಾಗಿದೆ. ಹೊಸದಾಗಿ ನಿರ್ಮಿಸಲಾದ ಸಾರ್ವಜನಿಕ ಶೌಚಗೃಹಗಳನ್ನು ಇದೇ ವೇಳೆ ಉದ್ಘಾಟಿಸಲಾಗುವುದು ಎಂದು ಸಿಇಒ ಹೇಳಿದರು.

ಕಾರ್ಯಕ್ರಮದಲ್ಲಿ 300 ಎನ್‌ಸಿಸಿ ಕೆಡೆಟ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ. ಕ್ಯೂ ಆರ್ ಕೋಡ್ ಕೂಡ ನೀಡಲಾಗುತ್ತಿದ್ದು ಸಾರ್ವಜನಿಕರು ಇದರ ಮೂಲಕವೂ ಮಾಹಿತಿ ಪಡೆದು ನೋಂದಣಿ ಆಗಬಹುದು. ಶುಕ್ರವಾರ ಮಾನವ ಸರಪಳಿ ಕಾರ್ಯಕ್ರಮದ ಟ್ರಯಲ್ ರನ್ ನಡೆಯಲಿದೆ. ಎಲ್ಲರೂ ಸೇರಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಎಸ್ಪಿ ಉಮಾ ಪ್ರಶಾಂತ್ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಆಹಾರ ನಾಗರಿಕ ಪೂರೈಕೆ ಇಲಾಖೆ ಡಿಡಿ ಸಿದ್ರಾಮ ಮಾರಿಹಾಳ್, ಡಿಎಚ್‌ಒ ಡಾ.ಷಣ್ಮುಖಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಡಿಡಿ ರಾಜಾನಾಯ್ಕ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕವಿತಾ, ಡಿಡಿಪಿಐ ಎಚ್. ಕೊಟ್ರೇಶ್ ಇದ್ದರು.
ಇಲ್ಲಿ ನೋಂದಣಿಯಾಗಿರಿ..
ಮಾನವ ಸರಪಳಿಯಲ್ಲಿ ಭಾಗವಹಿಸುವ ಆಸಕ್ತರು  ಅಂತರ್ಜಾಲದ ಮೂಲಕ ತಮ್ಮ ಹೆಸರು, ಮೊಬೈಲ್ ಸಂಖ್ಯೆ ನೀಡಿ ನೊಂದಣಿ ಮಾಡಿ ಭಾಗಿಯಾಗಬಹುದು. ಈ ಲಿಂಕ್‌ನಲ್ಲಿ ಲೊಕೇಷನ್ ಸಹ ತಿಳಿದುಬರಲಿದೆ. ಈಗಾಗಲೇ 7 ಸಾವಿರ ಆನ್‌ಲೈನ್ ನೋಂದಣಿಯಾಗಿದೆ.
ನೋಂದಣಿ ಮಾಡಿಸಿ ಭಾಗಿಯಾದವರು ಕಾರ್ಯಕ್ರಮದ ಅಂತ್ಯದಲ್ಲಿ ಸ್ಥಳದಲ್ಲೇ ಸೆಲ್ಫೀ ಪಡೆದುಕೊಳ್ಳಬಹುದು. ಭಾಗಿಯಾದವರು ಅಂತರ್ಜಾಲ ಮೂಲಕ ಪ್ರಮಾಣಪತ್ರವನ್ನೂ ಡೌನ್‌ಲೋಡ್ ಮಾಡಿಕೊಳ್ಳಬಹುದು. ಕಾರ್ಯಕ್ರಮದ ದಿನದಂದು ಭಾಗಿಯಾದ ಎಲ್ಲರೂ ತಂತಮ್ಮ ಡಿಪಿಗೆ ಫೋಟೋಗಳನ್ನು ಹಾಕಿಕೊಳ್ಳಬೇಕು ಎಂದು ಡಿಸಿ ಮನವಿ ಮಾಡಿದರು.
----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net